ಪ್ರಮುಖ ವರದಿಗಳು

ಮೊದಲ ಬಾರಿಗೆ ಹೊಸ ರೈಲು ಬಿಡದ ಬಜೆಟ್‌: ಸರಕು ಸಾಗಣೆ ದುಬಾರಿ * ಪ್ರಯಾಣ ದರ ಏರಿಕೆ ಇಲ್ಲ

Pinterest LinkedIn Tumblr

rai

ನವದೆಹಲಿ: ಇದೇ ಮೊದಲ ಬಾರಿಗೆ ಯಾವುದೇ ಹೊಸ ರೈಲು ಸಂಚಾರದ ಪ್ರಸ್ತಾಪ­ವಿಲ್ಲದ, ‘ಜನಪ್ರಿಯತೆಯ ಹಳಿ’ ಏರಲು ಒಲ್ಲದ, ಪ್ರಯಾಣಿಕರ ಜೇಬಿಗೆ ಕೈ ಹಾಕುವ ಸಾಹಸಕ್ಕೆ ಮುಂದಾಗದ ಆದರೆ, ಸರಕು ಸಾಗಣೆ ದರ ಏರಿಕೆ ಮೂಲಕ ಒಂದಷ್ಟು ವರಮಾನ ಸಂಗ್ರಹಿಸುವ ಗುರಿಯ ರೈಲ್ವೆ ಬಜೆಟ್‌ನ್ನು ಕೇಂದ್ರ  ಸಚಿವ ಸುರೇಶ್‌ ಪ್ರಭು ಗುರುವಾರ ಮಂಡಿಸಿದರು.

ಏ.1ರಿಂದ ಜಾರಿಗೆ ಬರಲಿರುವ ಸರಕು ಸಾಗಣೆ ದರ ಹೆಚ್ಚಳವು ಆಹಾರ ಧಾನ್ಯ,  ಬೇಳೆಕಾಳು, ಸಿಮೆಂಟ್‌, ಕಲ್ಲಿದ್ದಲು, ಕಬ್ಬಿಣ, ಉಕ್ಕು, ಯೂರಿಯಾ, ಸೀಮೆಎಣ್ಣೆ, ಅಡುಗೆ ಅನಿಲ,  ಪೆಟ್ರೋಲಿಯಂ  ಉತ್ಪನ್ನ ಮತ್ತಿತರ ವಸ್ತುಗಳಿಗೆ ಅನ್ವಯವಾಗಲಿದೆ. ಈ ಹೆಚ್ಚಳ­ದಿಂದ ಉಪ್ಪಿಗೆ ವಿನಾಯಿತಿ ನೀಡಲಾಗಿದ್ದರೆ, ಡೀಸೆಲ್‌ ಮತ್ತು ಸುಣ್ಣದ ಕಲ್ಲು ಸಾಗಣೆ ದರವನ್ನು ಕೊಂಚಮಟ್ಟಿಗೆ ಇಳಿಸಲಾಗಿದೆ.
ಆಹಾರ ಧಾನ್ಯ, ಬೇಳೆಕಾಳು, ಯೂರಿಯಾ ಸಾಗಣೆ ವೆಚ್ಚ ಶೇ 10ರಷ್ಟು ಏರಿಕೆಯಾದರೆ, ಕಲ್ಲಿದ್ದಲು ಸಾಗಣೆ ವೆಚ್ಚ ಶೇ 6.3ರಷ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.

ಇದೇ ವೇಳೆ, ರೈಲ್ವೆಯ ಖಾಸಗೀಕರಣಕ್ಕೆ ಸರ್ಕಾರ ಹುನ್ನಾರ ನಡೆಸಿದೆ ಎಂಬ ಟೀಕೆ­ಗ­ಳನ್ನು ಸರ್ಕಾರ ಅಲ್ಲಗಳೆದಿದೆ. ಆದರೆ ರೈಲ್ವೆ ಸೇವೆಯ ಒಟ್ಟಾರೆ ಸುಧಾರಣೆಗಾಗಿ ಮುಂದಿನ ಐದು ವರ್ಷಗಳಲ್ಲಿ 8.5 ಲಕ್ಷ ಕೋಟಿ ರೂಪಾಯಿ­ಗಳ ಭಾರಿ ಬಂಡವಾಳ ಹೂಡಿಕೆ­ಯೊಂದಿಗೆ ವಿವಿಧ ಯೋಜನೆಗಳನ್ನು ಕೈಗೊಳ್ಳುವುದಾಗಿ ಹೇಳಿದೆ.

ಬಜೆಟ್‌ ಮಂಡನೆ ವೇಳೆ ಒಂದು ಗಂಟೆ ಕಾಲ ಮಾತನಾಡಿದ ಸಚಿವ ಪ್ರಭು ಅವರು ‘ರೈಲ್ವೆಯು ದೇಶದ ಅಮೂಲ್ಯ ಆಸ್ತಿಯಾಗಿ ಮುಂದುವರಿಯಲಿದೆ. ದೇಶದ ಜನರು ಇನ್ನು ಮುಂದೆಯೂ ರೈಲ್ವೆಯ ಮಾಲೀಕರಾಗಿ ಮುಂದುವರಿಯಲಿದ್ದಾರೆ’ ಎಂದರು.
ಶೇ 10ರಷ್ಟು ಹೆಚ್ಚಾಗಿರುವ ಸರಕು ಸಾಗಣೆ ದರದಿಂದ ಬರುವ ವರ್ಷ­ದಲ್ಲಿ ₹ 4,000 ಕೋಟಿ ವರಮಾನ ನಿರೀಕ್ಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದ ಪೂರ್ಣ­ಪ್ರಮಾಣದ ಮೊದಲ ಬಜೆಟ್‌ ಮಂಡಿಸಿದ ಸುರೇಶ್‌ ಪ್ರಭು ಅವರು, ‘ನಾನು ಯಾವುದೇ ಹೊಸ ರೈಲುಗಳ ಓಡಾಟವನ್ನು ಪ್ರಕಟಿಸಿಲ್ಲ. ವಿವಿಧ ಕಾರಣಗಳಿಂದಾಗಿ ಪೂರ್ಣವಾಗದೆ ಉಳಿದಿರುವ ಯೋಜನೆಗಳನ್ನು ಅನುಷ್ಠಾನ­ಗೊಳಿಸುವುದೇ ಈಗಿನ ನಮ್ಮ ಆದ್ಯತೆ’ ಎಂದರು. ಮೂಲಗಳ ಪ್ರಕಾರ, ದೇಶದಲ್ಲಿ 359 ರೈಲ್ವೆ ಯೋಜನೆ­ಗಳು ಬಾಕಿ ಇವೆ.

ಬಜೆಟ್‌ ಮಂಡನೆ ನಂತರ ಸುದ್ದಿಗೋಷ್ಠಿ­ಯಲ್ಲಿ ಮಾತನಾಡಿದ ಪ್ರಭು ಅವರು ‘ಸರಕು ಸಾಗಣೆ ದರವನ್ನು ಕಾಲಕ್ಕೆ ತಕ್ಕಂತೆ ಪರಿ­ಷ್ಕರಿಸುವುದು ಮುಂಚಿನಿಂದಲೂ ನಡೆದು­ಕೊಂಡು ಬಂದಿದೆ’ ಎಂದು ಸಮರ್ಥಿಸಿ­ಕೊಂಡರು. ಕಳೆದ ಸಲ ಸಾಗಣೆ ದರವನ್ನು ಶೇ 6.5ರಷ್ಟು ಏರಿಸಲಾಗಿದ್ದರೆ, ಪ್ರಯಾಣಿಕರ ದರವನ್ನು ಶೇ 14.2ರಷ್ಟು ಏರಿಸಲಾಗಿತ್ತು.

ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ, ‘ಯೂರಿಯಾ ಖರೀದಿಗೆ ಸರ್ಕಾರ ಸಬ್ಸಿಡಿ ನೀಡುತ್ತಿರು­ವುದರಿಂದ ಸಾಗಣೆ ದರದ ಏರಿಕೆಯ ಹೊರೆ ರೈತರಿಗೆ ವರ್ಗಾವಣೆ ಆಗುವುದಿಲ್ಲ’ ಎಂದರು.

ಆದರೆ, ಯೂರಿಯಾ ಸಾಗಣೆ ದರ ಹೆಚ್ಚಳ­ದಿಂದ ಸರ್ಕಾರಕ್ಕೆ ₹ 3,000 ಕೋಟಿ,  ಆಹಾರ­ಧಾನ್ಯಗಳ ಸಾಗಣೆ ದರ ಹೆಚ್ಚಳದಿಂದ 600 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಉದ್ಯಮ ಸಂಘಟನೆಗಳು ಅಂದಾಜಿಸಿವೆ.
* * *
ಅಂದುಕೊಂಡದ್ದನ್ನು  ಮಾಡುತ್ತೇವೆ ಎಂಬ ನಂಬುಗೆ ನಮಗಿದೆ. ರಾತ್ರಿ ಬೆಳಗಾಗು­ವುದ­ರೊಳಗೆ ಪವಾ­ಡ ಸಾಧ್ಯ­ವಿಲ್ಲ. ಎಲ್ಲವನ್ನೂ ಹಂತ, ಹಂತ­ವಾಗಿ ಮಾಡ­ಬೇಕಾ­ಗುತ್ತದೆ. ಲೋಪ­ದೋಷ ಸರಿಪಡಿಸಲು ಕಾಲಾವಕಾಶ ಬೇಕು
– ರೈಲ್ವೆ ಸಚಿವ ಸುರೇಶ್‌ ಪ್ರಭು

11 ಆಶಯಗಳು
ರೈಲ್ವೆ ಸೇವೆಯ ಸುಧಾರಣೆಗಾಗಿ 11 ಆಶಯಗಳನ್ನು ಬಜೆಟ್‌ನಲ್ಲಿ ಸೇರಿಸ­ಲಾಗಿದೆ. ರೈಲ್ವೆಯು ದೇಶದ ಆರ್ಥಿಕ ಚಟುವಟಿಕೆಯ ಪ್ರಮುಖ ವಾಹಿನಿ ಆಗಬೇಕು, ರೈಲ್ವೆ ಮಾರ್ಗಗಳಲ್ಲಿನ ಸಂಚಾರ ದಟ್ಟಣೆಯನ್ನು ನಿವಾರಿಸಬೇಕು, ರೈಲುಗಳ ವೇಗ ಹೆಚ್ಚಿಸಬೇಕು, ಪ್ರಯಾಣಿಕರಿಗೆ ಸವಲತ್ತು– ಸುರಕ್ಷತೆ ಸುಧಾರಿಸಬೇಕು, ಸ್ವಚ್ಛತೆಯ ಕಟ್ಟುನಿಟ್ಟಿನ ಪಾಲನೆ, ಉತ್ತಮ ಹೊದಿಕೆಗಳ ಪೂರೈಕೆ, ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮರಾಗಳ ಅಳವಡಿಕೆ ಸೇರಿದಂತೆ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಸ್ಥಾಪನೆ, ಪ್ರಯಾಣಿಕರಿಗೆ ಅಂತರ್ಜಾಲದ ಮೂಲಕ ತಮ್ಮ ಆಯ್ಕೆಯ ಭೋಜನ ಬುಕಿಂಗ್‌ ಸೌಲಭ್ಯ ಇವು ಈ ಆಶಯಗಳಲ್ಲಿ ಸೇರಿವೆ.

ಪ್ರಯಾಣಿಕ ಸ್ನೇಹಿ ಪ್ರಭು
* ರೈಲುಗಳ ವೇಗ ಹೆಚ್ಚಳ
* ಪ್ರಯಾಣಿಕರ ದೂರು ಆಲಿಸಲು ಮೊಬೈಲ್‌ ಅಪ್ಲಿಕೇಶನ್‌
* ಮುಂಗಡ ಕಾಯ್ದಿರಿಸದ ಪ್ರಯಾ­ಣಿ­ಕರು ಕೂಡ ಐದು ನಿಮಿಷದಲ್ಲಿ ಟಿಕೆಟ್‌ ಖರೀದಿಸಬಹುದು
* ರೈಲು ಬರುವ ಮತ್ತು ಹೊರಡುವ ಸಮ­ಯದ ಬಗ್ಗೆ ಎಸ್‌ಎಂಎಸ್‌ ಮಾಹಿತಿ

* ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಚ್‌ 1ರಿಂದ 24×7 ಸಹಾಯವಾಣಿ 138 ಆರಂಭ.
* ಭದ್ರತೆಗೆ ಸಂಬಂಧಿಸಿದ ದೂರು ಸಲ್ಲಿಸಲು 182 ಸಂಖ್ಯೆಗೆ ಉಚಿತ  ಕರೆ ಸೌಲಭ್ಯ
* ಆಯ್ದ ಪ್ರಮುಖ ಮಾರ್ಗಗಳು ಹಾಗೂ ಮಹಿಳಾ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
* ಎಲ್ಲ ಹೊಸ ಬೋಗಿಗಳಲ್ಲಿ ಅಂಧರಿಗಾಗಿ ಬ್ರೈಲ್‌ ಸೌಲಭ್ಯ

* ಲಿಫ್ಟ್‌ಗಳು ಹಾಗೂ ಎಸ್ಕಲೇಟರ್‌ಗಳಿಗಾಗಿ ₹ 120 ಕೋಟಿ
* ಸುರಕ್ಷತೆ ದೃಷ್ಟಿಯಿಂದ ಮಹಿಳೆಯರು ಹಾಗೂ ವೃದ್ಧರಿಗೆ ಮಧ್ಯದ ಬೋಗಿ ಮೀಸಲು
* ಗಾಲಿ ಕುರ್ಚಿಗಳಿಗಾಗಿ ಆನ್‌ಲೈನ್‌ ಬುಕಿಂಗ್‌ ಅವಕಾಶ
* ಎಲ್ಲ ನಿಲ್ದಾಣಗಳಲ್ಲಿಯೂ ಶುದ್ಧ  ಕುಡಿಯುವ ನೀರಿನ ವ್ಯವಸ್ಥೆ

* 4೦೦  ನಿಲ್ದಾಣಗಳಲ್ಲಿ ವೈ–ಫೈ ಸೌಲಭ್ಯ
* 17 ಸಾವಿರಕ್ಕೂ ಹೆಚ್ಚು ಜೈವಿಕ ಶೌಚಾಲಯಗಳ ನಿರ್ಮಾಣ
* ಇಸ್ರೊ ನೆರವಿನಿಂದ 3,438 ಲೆವೆಲ್‌ ಕ್ರಾಸಿಂಗ್‌ ತೆಗೆದುಹಾಕುವ ಯೋಜನೆ

Write A Comment