ಕರ್ನಾಟಕ

ಹೆಬ್ಬಾಳದಲ್ಲಿ ಹೃದಯವಿದ್ರಾವಕ ಘಟನೆ; ಯರ್ರಾಬಿರ್ರಿ ನುಗ್ಗಿದ ಟ್ಯಾಂಕರ್‌ಗೆ 2 ಬಲಿ

Pinterest LinkedIn Tumblr

pvec27accident_0

ಬೆಂಗಳೂರು: ಹೆಬ್ಬಾಳ ಸಮೀಪದ ಕೆಂಪಾಪುರ ಜಂಕ್ಷನ್‌ನಲ್ಲಿ ಗುರುವಾರ ಮಧ್ಯಾಹ್ನ ಸಿಗ್ನಲ್‌ ಸಿಕ್ಕಿತೆಂದು ಪಾದ­ಚಾರಿ­ಗಳು ಲಗುಬಗೆಯಿಂದ ರಸ್ತೆ ದಾಟು­ತ್ತಿದ್ದಾಗ ಶರವೇಗದಲ್ಲಿ ಬಂದ ನೀರಿನ ಟ್ಯಾಂಕರ್‌­ವೊಂದು ಅವರ ಮೇಲೆ ನಿರ್ದಯವಾಗಿ ಹರಿದುಹೋಯಿತು.

ಏಕಾಏಕಿ ಬಂದೆರಗಿದ ಟ್ಯಾಂಕರ್‌ ಕಂಡು ಬೆಚ್ಚಿಬಿದ್ದ ಹಲವರು ಚೆಲ್ಲಾ­ಪಿಲ್ಲಿಯಾಗಿ ಓಡಿದರೆ ಇಬ್ಬರು ಅದರ ಅಡಿಗೆ ಸಿಕ್ಕಿಬಿದ್ದರು. ಟ್ಯಾಂಕರ್‌ನ ಅಟಾಟೋಪಕ್ಕೆ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಬಲಿಯಾದರೆ, ಕಾಲು ಮುರಿದುಕೊಂಡ ಮತ್ತೊಬ್ಬ ಯುವಕ ಕುಂಟುತ್ತಾ ಫುಟ್‌ಪಾತ್‌ ಕಡೆಗೆ ಸಾಗಿದ.

ನೋಡ ನೋಡುತ್ತಿದ್ದಂತೆ ನಡೆದ ಈ ಘಟನೆ ಅಲ್ಲಿದ್ದವರನ್ನು ದಿಗ್ಭ್ರಾಂತರ­ನ್ನಾಗಿ ಮಾಡಿತು. ರಸ್ತೆಯ ಆಚೆಗೆ ಫುಟ್‌ಪಾತ್‌ ಮೇಲಿದ್ದವರೂ ಅಲ್ಲಿನ ದೃಶ್ಯವನ್ನು ಕಂಡು ನಡುಗಿಹೋದರು.

ಹೆಬ್ಬಾಳದ ಸಿಂಧಿ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಅರ್ಪಿತಾ (19) ಹಾಗೂ ದೊಡ್ಡ­ಬಳ್ಳಾಪುರದ ಗೊಲ್ಲರಹಳ್ಳಿ ಆನಂದ್ (25) ಮೃತಪಟ್ಟವರು. ಘಟನೆಯಲ್ಲಿ ಅಕ್ಷತಾ, ಕುಸುಮಶ್ರೀ ಹಾಗೂ ಸುಮಂತ್‌­ರೆಡ್ಡಿ ಎಂಬುವರು ಗಾಯ­ಗೊಂಡಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಚಾಲಕ ಯತೀಶ್‌ ಬಾಬು (28) ಹೆಬ್ಬಾಳ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನ 12.50ರ ಸುಮಾರಿಗೆ ಕೆಂಪಾಪುರ ಜಂಕ್ಷನ್‌ನಲ್ಲಿ ಸಿಗ್ನಲ್‌ ಸಿಕ್ಕಾಗ 15ಕ್ಕೂ ಹೆಚ್ಚು ಪಾದಚಾರಿಗಳು ರಸ್ತೆ ದಾಟುತ್ತಿದ್ದರು.

ರಸ್ತೆ ದಾಟುತ್ತಿದ್ದ ವೇಳೆ ರಾಜಾನುಕುಂಟೆ ಕಡೆಯಿಂದ ವೇಗವಾಗಿ ಬಂದ ಟ್ಯಾಂಕರ್, ಆ ಪಾದಚಾರಿಗಳ ಮೇಲೆ ಅಪ್ಪಳಿಸಿತು. ಜೀವ ಉಳಿಸಿ­ಕೊಳ್ಳಲು ಎಲ್ಲರೂ ಓಡಿದರಾದರೂ, ಅರ್ಪಿತಾ ಮತ್ತು ಆಕೆಯ ಸಹಪಾಠಿ­ಗಳಾದ ಅಕ್ಷತಾ ಹಾಗೂ ಕುಸುಮಶ್ರೀಗೆ ಟ್ಯಾಂಕರ್‌ ಡಿಕ್ಕಿ ಹೊಡೆಯಿತು.

ಇಷ್ಟಕ್ಕೆ ನಿಲ್ಲದ ವಾಹನ, ಇನ್ನೂ ಮುಂದೆ ಸಾಗಿ ಸಿಗ್ನಲ್‌ನಲ್ಲಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ಸುಮಂತ್‌ ರೆಡ್ಡಿ ಹಾಗೂ ಆನಂದ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ಅರ್ಪಿತಾ ಮತ್ತು ಆನಂದ್‌ ಸ್ಥಳದಲ್ಲೇ ಮೃತಪಟ್ಟರು. ಅಕ್ಷತಾ–ಕುಸುಮಶ್ರೀ ಅವರ ತಲೆ ಹಾಗೂ ಕೈಕಾಲುಗಳಿಗೆ ಪೆಟ್ಟು ಬಿದ್ದಿತು. ಸುಮಂತ್‌ ಅವರ ಕಾಲಿನ ಮೇಲೆ ಟ್ಯಾಂಕರ್‌ ಚಕ್ರ ಹರಿಯಿತು.

ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಜಿ.ಚಂದ್ರಣ್ಣ ಅವರ ತಮ್ಮನ ಮಗಳಾದ ಅರ್ಪಿತಾ, ಎಂದಿನಂತೆ ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಬಂದಿದ್ದರು. ತರಗತಿ ಮುಗಿಸಿಕೊಂಡು ಮನೆಗೆ ಮರಳಲು ಸಹಪಾಠಿಗಳ ಜತೆ ಮಧ್ಯಾಹ್ನ 12.50ಕ್ಕೆ ಸಮೀಪದ ಬಸ್‌ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದರು. ಪಾದಚಾರಿಗಳು ರಸ್ತೆ ದಾಟಲು ಸಿಗ್ನಲ್‌ ಬಿದ್ದಿತ್ತಾದರೂ, ಚಾಲಕ ಅದನ್ನು ಗಮನಿಸದೆ ವೇಗವಾಗಿ ಟ್ಯಾಂಕರ್‌ ಓಡಿಸಿಕೊಂಡು ಬಂದ ಎಂದು ಪೊಲೀಸರು ಹೇಳಿದರು.

ಅರ್ಪಿತಾ, ಜನಾರ್ದನ್ ಮತ್ತು ಕಲಾವತಿ ದಂಪತಿಯ ಹಿರಿಯ ಮಗಳು. ಎಲೆ–ಅಡಿಕೆ ಸಗಟು ವ್ಯಾಪಾರಿಯಾದ ಜನಾರ್ದನ್, ತುಮಕೂರಿನಲ್ಲಿರುವ ತೋಟ ನೋಡಿಕೊಂಡು ಅಲ್ಲೇ ನೆಲೆಸಿ­ದ್ದಾರೆ. ಕಲಾವತಿ ಅವರು ಮಕ್ಕಳ ಜತೆ ದೇವನಹಳ್ಳಿಯಲ್ಲಿ ವಾಸವಾಗಿದ್ದರು.

ಇನ್ನು ಅಪಘಾತದಲ್ಲಿ ಮೃತಪಟ್ಟ ಮತ್ತೊಬ್ಬ ದುರ್ದೈವಿ ಆನಂದ್, ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದರು. ಗೊಲ್ಲರಹಳ್ಳಿಯಲ್ಲಿ ಸ್ವಂತ ಕಂಪೆನಿ ಪ್ರಾರಂಭಿಸಲು ನಿರ್ಧರಿಸಿದ್ದ ಅವರು, ಈ ಬಗ್ಗೆ ಚರ್ಚಿಸಲು ಸ್ನೇಹಿತ ಸುಮಂತ್ ಜತೆ ಹೆಬ್ಬಾಳದಲ್ಲಿರುವ ಸಂಬಂಧಿಕರ ಮನೆಗೆ ಬರುತ್ತಿದ್ದರು.

ಕ್ಷಣಾರ್ಧದಲ್ಲಿ ಪಾರು: ‘ಕೆಲಸದ ನಿಮಿತ್ತ ಮಧ್ಯಾಹ್ನ ಯಲಹಂಕಕ್ಕೆ ಹೋಗಬೇಕಿತ್ತು. ಹೀಗಾಗಿ  ಏರ್‌ಫೋರ್ಸ್‌ ಬಸ್‌ ನಿಲ್ದಾಣಕ್ಕೆ ಹೋಗಲು ರಸ್ತೆ ದಾಟುತ್ತಿದ್ದೆ. ಆಗ ಜವರಾಯನಂತೆ ಬಂದ ಟ್ಯಾಂಕರ್, ನೋಡ ನೋಡುತ್ತಿದ್ದಂತೆಯೇ ನಮ್ಮ ಮೇಲೆ ಎರಗಿತು. ಆ ವಾಹನ ಮೂರ್ನಾಲ್ಕು ಅಡಿಯಷ್ಟು ಅಂತರದ­ಲ್ಲಿದ್ದಾಗ ನಾನು ಜೀವ ಭಯದಿಂದ ಬೇರೆಡೆ ಜಿಗಿದೆ. ಆದರೂ ವಾಹನ ಡಿಕ್ಕಿ ಹೊಡೆದಿದ್ದರಿಂದ ಕೈ–ಕಾಲು ಹಾಗೂ ಎದೆ ಭಾಗಕ್ಕೆ ಪೆಟ್ಟಾಯಿತು’ ಎಂದು ತಿಂಡ್ಲುವಿನ ಖಾಸಗಿ ಕಂಪೆನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ರಮೇಶ್ ಬಾಬು ಘಟನೆಯನ್ನು ವಿವರಿಸಿದರು.

ಮೈಮರೆತ ಚಾಲಕ
‘ಮೂಲತಃ ಹಿರಿಯೂರಿನ ಚಾಲಕ, ಒಂದೂ­ವರೆ ವರ್ಷದ ಹಿಂದೆ ನಗರಕ್ಕೆ ಬಂದು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದ. ರಾಜಾನುಕುಂಟೆ­ಯಲ್ಲಿ ಟ್ಯಾಂಕರ್‌ಗೆ ನೀರು ತುಂಬಿಸಿಕೊಂಡು, ಮಾರತ್ತಹಳ್ಳಿ ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

‘ಘಟನೆ ವೇಳೆ ಚಾಲಕ 90 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡು­ತ್ತಿದ್ದ. ಸಿಗ್ನಲ್‌ ಇದ್ದು­ದ­ರಿಂದ ಮೊದಲೇ ವೇಗ ತಗ್ಗಿ­ಸ­ಬೇಕಿದ್ದ ಆತ, ಸಿಗ್ನ­ಲ್‌ನ ಹತ್ತಿರ ಬಂದಾಗ ಬ್ರೇಕ್‌ ಹಾಕಲು ಮುಂದಾ­ಗಿದ್ದಾನೆ. ಇಳಿ­ಜಾರು ಇದ್ದು­ದರಿಂದ ಒಮ್ಮೆಲೆ ವಾಹನ ನಿಂತಿಲ್ಲ’ ಎಂದರು.
‘ಅಪಘಾತದ ನಂತರ ಟ್ಯಾಂಕರ್‌­ನೊಂದಿಗೆ ಪರಾರಿ­ಯಾಗಲು ಯತ್ನಿಸಿದ ಚಾಲಕನನ್ನು ಪೊಲೀಸರು ಬೈಕ್‌ನಲ್ಲಿ ಹಿಂಬಾಲಿಸಿ ಹಿಡಿದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸ­ಲಾಗಿದ್ದು, ಆತ ಚಾಲನೆ ವೇಳೆ ಪಾನಮತ್ತನಾಗಿರ­ಲಿಲ್ಲ ಎಂದು ಗೊತ್ತಾಗಿದೆ’ ಎಂದರು.

‘ಸಿಗ್ನಲ್ ತಪ್ಪಿಸಿಕೊಳ್ಳುವ ಆತುರ’
‘ಕೆಂಪು ಸಿಗ್ನಲ್‌ ಬೀಳಲು ಇನ್ನು ಮೂರ್ನಾಲ್ಕು ಸೆಕೆಂಡ್‌­ಗಳು ಮಾತ್ರ ಬಾಕಿ ಇತ್ತು. ಅಷ್ಟರೊಳಗೆ ಸಿಗ್ನಲ್ ಹಾದು ಹೋಗಬೇಕೆಂದು ವೇಗವಾಗಿ ಬಂದೆ. ಆದರೆ, ಒಮ್ಮೆಲೆ ಪಾದಚಾರಿಗಳ ಗುಂಪು ಕಂಡು ವಿಚಲಿತನಾಗಿ ಬ್ರೇಕ್‌ ಹಾಕುವುದನ್ನು ಮರೆತೆ’ ಎಂದು ಆರೋಪಿ ಚಾಲಕ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ.

ಮಾಲ್ ವಿರುದ್ಧ ಆಕ್ರೋಶ
‘ಬೆಂಗಳೂರು–ಬಳ್ಳಾರಿ ಮಾರ್ಗದ ರಸ್ತೆಯಲ್ಲಿ ನಿಮಿಷಕ್ಕೆ ನೂರಕ್ಕೂ ಹೆಚ್ಚು ವಾಹನಗಳು ಚಲಿಸುತ್ತವೆ. ಅವುಗಳ ವೇಗ 80 ಕಿ.ಮೀಗಿಂತ ಹೆಚ್ಚಿರುತ್ತದೆ. ಹೀಗಾಗಿ ಪಾದ­ಚಾರಿ­ಗಳು ಜೀವ ಭಯದಲ್ಲೇ ಈ ರಸ್ತೆಯನ್ನು ದಾಟ­ಬೇ­ಕಾಗಿದೆ. ‘ಎಸ್ಟೀಮ್‌ ಮಾಲ್‌’ನ ಎದುರಿಗೇ ಈ ದುರ್ಘ­ಟನೆ ನಡೆದಿದೆ. ಹೆಚ್ಚು ವಹಿವಾಟು ನಡೆಸುವ ಈ ಮಾಲ್‌, ರಸ್ತೆ ದಾಟಿಕೊಂಡು ಬರುವ ಗ್ರಾಹಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಮಾಜಿ ಶಾಸಕ ಜಿ.ಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನುಚ್ಚುನೂರಾದ ಕನಸು
‘ಸೆಮಿನಾರ್ ಮುಗಿಸಿಕೊಂಡು ಬೇಗನೆ ಮನೆಗೆ ಬರುವುದಾಗಿ ಹೇಳಿ ಹೋಗಿದ್ದ ಮಗಳು, ಶವವಾಗಿ ಮರಳಿದ­ಳು. ಪ್ರತಿಭಾವಂತ ವಿದ್ಯಾ­ರ್ಥಿನಿ­­ಯಾ­ಗಿದ್ದ ಆಕೆ, ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಳು. ಆಸೆ–ಕನಸು­ಗ­ಳನ್ನು ಆ ಟ್ಯಾಂಕರ್‌ ನುಚ್ಚುನೂರು ಮಾಡಿದೆ’ ಎಂದು ಕಲಾವತಿ ರೋದಿಸಿದರು.

Write A Comment