ಪ್ರಮುಖ ವರದಿಗಳು

ಟೆಸ್ಟ್ ಕ್ರಿಕೆಟ್‌ಗೆ ಧೋನಿ ಬೈ: ನಾಯಕನ ನಿವೃತ್ತಿಯ ನಿರ್ಧಾರ ಪ್ರಕಟಿಸಿದ ಬಿಸಿಸಿಐ; ‘ದೂರವಾಣಿಯ ಮುಖಾಂತರ ಧೋನಿ ನಿವೃತ್ತಿ ಇಂಗಿತ’

Pinterest LinkedIn Tumblr

ms-dhoni-india-manchester-edit

ಮೆಲ್ಬೋರ್ನ್, ಡಿ.30: ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದ ‘ಕ್ಯಾಪ್ಟನ್ ಕೂಲ್’ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರನೆ ವಿದಾಯ ಘೋಷಿಸುವ ಮೂಲಕ ಅಚ್ಚರಿಗೊಳಿಸಿದ್ದಾರೆ.

ಮಂಗಳವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಮೂರನೆ ಟೆಸ್ಟ್ ಕೊನೆಗೊಂಡ ಬೆನ್ನಲ್ಲೇ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸಿತು.

ರಾಂಚಿಯ 33ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ನಿಂದ ದೂರ ಉಳಿದರೂ ಏಕದಿನ ಕ್ರಿಕೆಟ್ ಮತ್ತು ಟ್ವೆಂಟಿ -20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. 2005, ಡಿ.2ರಿಂದ 6ರ ತನಕ ಚೆನ್ನೈಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ರಂಗ ಪ್ರವೇಶಿಸಿದ್ದ ಧೋನಿ 90 ಟೆಸ್ಟ್ ಗಳನ್ನು ಆಡಿದ್ದಾರೆ. 60 ಟೆಸ್ಟ್‌ಗಳಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ಧೋನಿ ನಾಯಕತ್ವ ವಹಿಸಿದ್ದ ಕೊನೆಯ ಟೆಸ್ಟ್‌ನಲ್ಲಿ ಭಾರತ ಸೋಲದಿದ್ದರೂ ನಾಲ್ಕು ಟೆಸ್ಟ್‌ಗಳ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡಿದೆ.

ಧೋನಿ 90 ಟೆಸ್ಟ್‌ಗಳ 144 ಇನಿಂಗ್ಸ್‌ಗಳಲ್ಲಿ 6 ಶತಕ, 33 ಅರ್ಧ ಶತಕಗಳಿರುವ 4,876 ರನ್ ಗಳಿಸಿದ್ದಾರೆ. ಮೂರನೆ ಟೆಸ್ಟ್‌ನ ಅಂತಿಮ ದಿನ ಭಾರತ 2ನೆ ಇನಿಂಗ್ಸ್ ನಲ್ಲಿ 55 ಓವರ್‌ಗಳಲ್ಲಿ 142 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದಾಗ ತಂಡದ ಬ್ಯಾಟಿಂಗ್‌ನ್ನು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ಮುನ್ನಡೆಸಿದ ಧೋನಿ ತಂಡಕ್ಕೆ ಗೆಲುವು ದೊರಕಿಸಿಕೊಡಲು ಸಾಧ್ಯವಾಗದಿದ್ದರೂ, ಡ್ರಾಗೊಳಿಸುವ ಮೂಲಕ ಹ್ಯಾಟ್ರಿಕ್ ಸೋಲಿನಿಂದ ತಂಡವನ್ನು ಪಾರು ಮಾಡುವಲ್ಲಿ ಸಫಲರಾದರು.

ಭಾರತದ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬ ರಾಗಿರುವ ಧೋನಿ ನಾಯಕನಾಗಿ ಭಾರತಕ್ಕೆ 2007 ರಲ್ಲಿ ಟ್ವೆಂಟಿ -20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್‌ಗಳಲ್ಲಿ ಚಾಂಪಿಯನ್ ಪಟ್ಟ ಹಾಗೂ 2009ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ನಂ.1 ಸ್ಥಾನವನ್ನು ತಂದು ಕೊಟ್ಟಿದ್ದರು.

‘ದೂರವಾಣಿಯ ಮುಖಾಂತರ ಧೋನಿ ನಿವೃತ್ತಿ ಇಂಗಿತ’
ಹೊಸದಿಲ್ಲಿ, ಡಿ.30: ‘‘ಭಾರತದ ನಾಯಕ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರವನ್ನು ಬಿಸಿಸಿಐಗೆ ದೂರವಾಣಿ ಕರೆಯ ಮುಖಾಂತರ ತಿಳಿಸಿದ್ದರು’’ ಎಂದು ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಸಂಜಯ್ ಪಟೇಲ್ ಬಹಿರಂಗಪಡಿಸಿದ್ದಾರೆ.

‘‘ಎಂಎಸ್ ತುಂಬಾ ಪ್ರಾಯೋಗಿಕ ವ್ಯಕ್ತಿ. ಮಂಗಳವಾರ ಮೆಲ್ಬೋರ್ನ್ ಟೆಸ್ಟ್ ಪಂದ್ಯ ಮುಗಿದ ನಂತರ ಕ್ರಿಕೆಟ್ ಮಂಡಳಿಗೆ ದೂರವಾಣಿ ಕರೆ ಮಾಡಿದ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು’’ ಎಂದು ಪಿಟಿಐಗೆ ಪಟೇಲ್ ತಿಳಿಸಿದ್ದಾರೆ. ‘‘ನಾನು ಸಹ ಆಟಗಾರರಿಗೆ ನಿವೃತ್ತಿಯ ವಿಷಯ ತಿಳಿಸಿದ್ದೇನೆ. ನನ್ನ ನಿವೃತ್ತಿ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಧೋನಿ ನನಗೆ ತಿಳಿಸಿದ್ದರು.

ಇದೇ ವೇಳೆ ಧೋನಿ ಆಯ್ಕೆ ಸಮಿತಿ ಅಧ್ಯಕ್ಷರಾದ ಸಂದೀಪ್(ಪಟೇಲ್) ಹಾಗೂ ಶಿವಲಾಲ್ ಯಾದವ್‌ರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತನ್ನ ನಿರ್ಧಾರವನ್ನು ತಿಳಿಸಿದ್ದರು. ಧೋನಿಯ ನಿರ್ಧಾರವನ್ನು ಗೌರವಿಸುವುದಾಗಿ ಪಟೇಲ್ ಹಾಗೂ ಯಾದವ್ ತಿಳಿಸಿದ್ದಾರೆ’’ ಎಂದು ಸಂಜಯ್ ಪಟೇಲ್ ಹೇಳಿದ್ದಾರೆ. ಧೋನಿ ಕರೆ ಮಾಡಿದಾಗ ಭಾವುಕರಾಗಿದ್ದ್ದರೆ ಎಂದು ಕೇಳಿದಾಗ, ‘‘ನನಗೆ ಹಾಗೆ ಎನಿಸಲಿಲ್ಲ. ಧೋನಿ ಡ್ರೆಸ್ಸಿಂಗ್‌ರೂಮ್‌ನಲ್ಲಿ ಸಹ ಆಟಗಾರರಲ್ಲಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದಾಗ ಭಾವುಕರಾಗಿದ್ದರು ಎಂದು ಅಲ್ಲಿ ಉಪಸ್ಥಿತರಿದ್ದ ಆಟಗಾರರು ನನಗೆ ತಿಳಿಸಿದ್ದಾರೆ.

ಧೋನಿ ಭಾರತೀಯ ಕ್ರಿಕೆಟ್‌ಗೆ ಮಹತ್ತರ ಕೊಡುಗೆ ನೀಡಿದ್ದಾರೆ. ನಿವೃತ್ತಿಯು ಆಟಗಾರರ ವೈಯಕ್ತಿಕ ನಿರ್ಧಾರ ಎಂದು ಬಿಸಿಸಿಐ ಭಾವಿಸಿದೆ’’ ಎಂದು ಪಟೇಲ್ ತಿಳಿಸಿದ್ದಾರೆ.

ಧೋನಿ ಟೆಸ್ಟ್‌ಗೆ ನಿವೃತ್ತಿ ಮಾಜಿ ಆಟಗಾರರ ಪ್ರತಿಕ್ರಿಯೆ
ಹೊಸದಿಲ್ಲಿ, ಡಿ.30: ಭಾರತದ ಶ್ರೇಷ್ಠ ನಾಯಕ ಎಂಎಸ್ ಧೋನಿ ಆಸ್ಟ್ರೇಲಿಯ ವಿರುದ್ಧದ ಮೂರನೆ ಟೆಸ್ಟ್ ಪಂದ್ಯ ಡ್ರಾಗೊಂಡ ಬೆನ್ನಲ್ಲೆ ಟೆಸ್ಟ್ ಕ್ರಿಕೆಟ್‌ಗೆ ದಿಢೀರನೆ ವಿದಾಯ ಹೇಳಿ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ.

ಭಾರತವನ್ನು ವಿಶ್ವದ ನಂ.1 ಟೆಸ್ಟ್ ತಂಡವಾಗಿ ರೂಪಿಸಿದ್ದ ಧೋನಿಯ ನಿವೃತ್ತಿಯ ಕುರಿತು ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಕಂಡ ಶ್ರೇಷ್ಠ ನಾಯಕರಲ್ಲಿ ಧೋನಿ ಓರ್ವರು
-ಸಚಿನ್ ತೆಂಡುಲ್ಕರ್.

ಧೋನಿ ಕಠಿಣ ಪರಿಸ್ಥಿತಿಯಲ್ಲೂ ಶಾಂತಚಿತ್ತದಿಂದ ಇರುತ್ತಾರೆ. ಅವರು ಭಾವೋದ್ವೇಗಕ್ಕೆ ಒಳಗಾಗುವುದಿಲ್ಲ. ಇದು ಅವರ ಹೆಚ್ಚುಗಾರಿಕೆ. ಭಾರತ ಧೋನಿಯಂತಹ ನಾಯಕನನ್ನು ಪಡೆದಿದ್ದು ಅದೃಷ್ಟವೇ ಸರಿ.-ವಿವಿಎಸ್ ಲಕ್ಷ್ಮಣ್. ಕ್ರಿಕೆಟ್‌ನಲ್ಲಿ ಅದರಲ್ಲೂ ಏಕದಿನ ಪಂದ್ಯದಲ್ಲಿ ಧೋನಿ ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಿದ್ದಾರೆ.

– ಸೌರವ್ ಗಂಗುಲಿ.

Write A Comment