ಅಂತರಾಷ್ಟ್ರೀಯ

ಏರ್‌ಏಷ್ಯಾ ವಿಮಾನ ಅವಶೇಷ ಜಾವಾ ಸಮುದ್ರದಲ್ಲಿ ಪತ್ತೆ: 40 ಮೃತದೇಹಗಳು ಹೊರಕ್ಕೆ

Pinterest LinkedIn Tumblr

000101B___

ಜಕಾರ್ತಾ/ಸಿಂಗಾಪುರ, ಡಿ.30: ಇಂಡೋನೇಷ್ಯಾದಿಂದ ರವಿವಾರ ಬೆಳಗ್ಗೆ ಯಾನ ಆರಂಭಿಸಿ ಕಣ್ಮರೆಯಾಗಿದ್ದ ಏರ್‌ಏಷ್ಯಾ ವಿಮಾನ ಕೊನೆಗೂ ಜಾವಾ ಸಮುದ್ರದಲ್ಲಿ ಮಂಗಳವಾರ ಪತ್ತೆಯಾಗಿದೆ.

ರವಿವಾರ ಬೆಳಗ್ಗೆ ಏರ್‌ಟ್ರಾಫಿಕ್ ಕಂಟ್ರೋಲ್‌ನಿಂದ ಸಂಪರ್ಕ ಕಳೆದುಕೊಂಡಿದ್ದ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಜೊತೆಗೆ ಸುಮಾರು 40 ಪ್ರಯಾಣಿಕರ ಮೃತ ದೇಹಗಳು ಲಭಿಸಿವೆ ಎಂದು ಇಂಡೋನೇಷ್ಯಾದ ನೌಕಾಪಡೆ ಮೂಲಗಳು ತಿಳಿಸಿವೆ.

ಸೆಂಟ್ರಲ್ ಕಲಿಮಂತನ್‌ನ ಪಂಗ್‌ಕಲನ್ ಬನ್ ಎಂಬಲ್ಲಿ ಪತ್ತೆಯಾಗಿರುವ ಅವಶೇಷಗಳು ಏರ್‌ಏಷ್ಯಾ ವಿಮಾನದ್ದಾಗಿವೆ ಎಂದು ಇಂಡೋ ನೇಷ್ಯಾದ ಸಾರಿಗೆ ಸಚಿವಾಲಯದ ಮಹಾನಿರ್ದೇಶಕ (ವಿಮಾನ ಸಾರಿಗೆ) ಡಿಜೊಕೊ ಮುರ್ಜಾಟ್‌ಮೊಡ್ಜೊ ಖಚಿತಪಡಿಸಿದ್ದಾರೆ.ಇಂಡೋನೇಷ್ಯಾದ ಸಾರಿಗೆ ಸಚಿವಾಲಯದ ರಕ್ಷಣಾ ತಂಡವು ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದೆ. ಕೆಂಪು ಮತ್ತು ಬಿಳಿ ಬಣ್ಣವನ್ನು ಒಳಗೊಂಡ ಅವಶೇಷಗಳು ಏರ್‌ಏಷ್ಯಾ ವಿಮಾನವೊಂದಕ್ಕೆ ಸೇರಿದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಇಂಡೋನೇಷ್ಯಾದ ರಾಷ್ಟ್ರೀಯ ಪತ್ತೆ ಮತ್ತು ರಕ್ಷಣಾ ಸಂಸ್ಥೆಯ ಸಹಯೋಗ ದೊಂದಿಗೆ ಅಪಘಾತದ ಸ್ಥಳದಿಂದ ವಿಮಾನದ ಅವಶೇಷಗಳನ್ನು ಸಂಗ್ರಹಿಸಿ ತರಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಮಾನದ ನೆರಳು ಪತ್ತೆ: ಇಂಡೋನೇಷ್ಯಾದ ವಾಯುಪಡೆಯ ವಿಮಾನವೊಂದು ಮಂಗಳವಾರ ಬೆಳಗ್ಗೆ ಸಮುದ್ರದ ನೀರಿನ ತಳದಲ್ಲಿ ‘ನೆರಳಿನಂತಹ’ ವಸ್ತುವನ್ನು ಪತ್ತೆ ಮಾಡಿತು. ಇದು ಅಪಘಾತಕ್ಕೀಡಾಗಿರುವ ಏರ್‌ಬಸ್ ಎ320-200 ಆಗಿರಬಹುದು ಎಂದು ಶಂಕಿಸಲಾಯಿತು ಎಂದು ರಾಷ್ಟ್ರೀಯ ಪತ್ತೆ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಹೆನ್ರಿ ಬಂಬಾಂಗ್ ವರದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

‘ದೇವರು ಇಂದು ನಮ್ಮನ್ನು ಹರಿಸಿದರು. ಮಂಗಳವಾರ ಮಧ್ಯಾಹ್ನ 12.50ರ ವೇಳೆಗೆ ವಾಯುಪಡೆಯ ಹರ್ಕ್ಯೂಲಸ್ ವಿಮಾನವು ಸಮುದ್ರದ ತಳದಲ್ಲಿ ನೆರಳಿನಂತಹ ಆಕಾರವನ್ನು ಪತ್ತೆ ಮಾಡಿತು. ತದನಂತರ ಇದು ಅಪಘಾತಕ್ಕೀಡಾದ ಏರ್‌ಏಷ್ಯಾ ವಿಮಾನವೆಂದು ಗೊತ್ತಾಯಿತು’ ಎಂದು ಅವರು ತಿಳಿಸಿದರು. ಕಣ್ಮರೆಯಾಗಿರುವ ವಿಮಾನ ಕೊನೆಯ ಬಾರಿಗೆ ಸಂಪರ್ಕ ಕಡಿದುಕೊಂಡ ಸ್ಥಳಕ್ಕೆ ಸಮೀಪದಲ್ಲೇ ಸಮುದ್ರದ ನೀರಿನಲ್ಲಿ ಹಲವಾರು ಮೃತದೇಹಗಳು ತೇಲುತ್ತಿರುವುದು ಕಂಡುಬಂತು ಎಂದು ಇಂಡೋನೇಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಪ್ರಯಾಣಿಕರ ಮೃತದೇಹಗಳು ನೀರಿನಿಂದ ಊದಿಕೊಂಡಿವೆ. ಆದರೆ ದೇಹದ ಮೇಲೆ ಯಾವುದೇ ಬಗೆಯ ಗಾಯಗಳು ಕಂಡು ಬಂದಿಲ್ಲ. ಇಂಡೋನೇಷ್ಯಾದ ನೌಕಾಪಡೆಯ ಹಡಗಿನ ಮೂಲಕ ಮೃತದೇಹಗಳನ್ನು ದಡಕ್ಕೆ ತರಲಾಗುತ್ತಿದೆ ಎಂದು ರಾಷ್ಟ್ರೀಯ ಪತ್ತೆ ಮತ್ತು ರಕ್ಷಣಾ ಸಂಸ್ಥೆಯ ನಿರ್ದೇಶಕ ಎಸ್.ಬಿ.ಸುಪ್ರಿಯಾದಿ ಅವರು ಪಂಗ್‌ಕಲನ್ ಬನ್‌ನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. ಇಂಡೋನೇಷ್ಯಾದ ನೌಕಾಪಡೆಯ ಕಾವಲು ವಿಮಾನವೊಂದು ಮೊತ್ತಮೊದಲು ವಿಮಾನದ ಅವಶೇಷಗಳನ್ನು ಪತ್ತೆ ಮಾಡಿತು. ಅಪಘಾತದ ಸ್ಥಳದಲ್ಲಿ ವಿಮಾನದ ಅವಶೇಷಗಳ ಹತ್ತು ಚೂರುಗಳು ಸಮುದ್ರದಲ್ಲಿ ಚೆದುರಿ ಬಿದ್ದಿದ್ದವು ಎಂದು ಸಂಸ್ಥೆಯ ವಕ್ತಾರ ಎಂ.ಯೂಸುಫ್ ಲತೀಫ್ ತಿಳಿಸಿದ್ದಾರೆ.

ರವಿವಾರ ಬೆಳಗ್ಗೆ ಹೊತ್ತಿಗೆ ಸ್ಫೋಟದೊಂದಿಗೆ ದೊಡ್ಡ ಸದ್ದು ಆಗಿರುವುದನ್ನು ನಾವು ಕೇಳಿದ್ದೆವು ಎಂದು ಪಂಗಕಲನ್ ಬನ್‌ನಲ್ಲಿ ಇಬ್ಬರು ಮೀನುಗಾರರು ರಕ್ಷಣಾ ಅಧಿಕಾರಿಗಳಿಗೆ ತಿಳಿಸಿದ್ದರು. ಈಗ ಅಲ್ಲೇ ವಿಮಾನದ ಅವಶೇಷಗಳು ದೊರಕಿರುವುದು ಮೀನುಗಾರರ ಹೇಳಿಕೆಯನ್ನು ಖಚಿತಪಡಿಸಿದೆ. ಇಂಡೋ ನೇಷ್ಯಾದ ಸುರಬಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್‌ಏಷ್ಯಾ ವಿಮಾನದಲ್ಲಿ ಐವರು ಸಿಬ್ಬಂದಿ ಸೇರಿದಂತೆ 162 ಮಂದಿ ಪ್ರಯಾಣಿಕರಿದ್ದರು. ವಿಮಾನವು ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ಯಾನ ಕೈಗೊಂಡಿತ್ತು.

Write A Comment