ಯುಎಇ: ಭಾರತೀಯ ಮೂಲದ ಅಬುಧಾಬಿ ವಾಸಿಯಾಗಿರುವ ಯುವಕ ಅನಿಲ್ ಕುಮಾರ್ ಬೊಲ್ಲಾ ಅವರಿಗೆ ಅದೃಷ್ಟದ ಲಾಟರಿಯಲ್ಲಿ 240 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಹುಮಾನ ಸಿಕ್ಕಿದೆ. 100 ಮಿಲಿಯನ್ ದಿರ್ಹಮ್ ಮೌಲ್ಯದ ಲಾಟರಿಯನ್ನು ಅವರು 23ನೇ ‘ಲಕ್ಕಿ ಡೇ ಡ್ರಾ’ದಲ್ಲಿ ಗೆದ್ದಿದ್ದಾರೆ.

ಭಾರತ ಮೂಲದ 29 ವರ್ಷದ ಅನಿಲ್‌ಕುಮಾರ್ ಬೊಲ್ಲಾ, ತಮ್ಮ ತಾಯಿಯ ಹುಟ್ಟುಹಬ್ಬದ ಸಂಖ್ಯೆಯನ್ನು ಲಾಟರಿ ಸಂಖ್ಯೆಯಾಗಿ ಆಯ್ಕೆ ಮಾಡಿದ್ದು ಅದೃಷ್ಟ ತಂದುಕೊಟ್ಟಿದೆ. ಯುಎಇ ಲಾಟರಿ ಸಂಸ್ಥೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅನಿಲ್‌ಕುಮಾರ್ ಬೊಲ್ಲಾ ಅವರ ಸಂದರ್ಶನ ವೀಡಿಯೊವನ್ನು ಹಂಚಿಕೊಂಡಿದೆ.
ಸಂದರ್ಶನದಲ್ಲಿ ಮಾತನಾಡಿದ ಅನಿಲ್, ‘ನಾನು ಯಾವುದೇ ಮ್ಯಾಜಿಕ್ ಮಾಡಿಲ್ಲ. ನಾನು ಕೇವಲ ‘ಈಸಿ ಪಿಕ್’ ಆಯ್ಕೆ ಮಾಡಿಕೊಂಡೆ. ಕೊನೆಯ ಸಂಖ್ಯೆ ನನ್ನ ತಾಯಿಯ ಹುಟ್ಟುಹಬ್ಬ ದಿನ. ನಿಜವಾಗಿಯೂ ನಾನು ಗೆದ್ದಿದ್ದೇನೆ ಎಂಬುದನ್ನು ನಂಬಲು ನನಗೆ ಸಾಧ್ಯವಾಗಲಿಲ್ಲ.
ಗೆದ್ದ ಹಣವನ್ನು ಹೇಗೆ, ಎಲ್ಲಿ ಹೂಡಿಕೆ ಮಾಡಬೇಕು, ಸರಿಯಾದ ರೀತಿಯಲ್ಲಿ ಖರ್ಚು ಮಾಡಬೇಕು ಎಂಬುದನ್ನು ಯೋಚಿಸುತ್ತಿದ್ದೇನೆ. ನನ್ನ ಕನಸುಗಳತ್ತ ಗಮನ ಕೇಂದ್ರೀಕರಿಸಲು ಬಯಸುತ್ತೇನೆ. ಮೊದಲು ನನ್ನ ಕುಟುಂಬಕ್ಕಾಗಿ ವಿಶೇಷವಾದದ್ದನ್ನು ಮಾಡಬೇಕು. ಅವರನ್ನು ಯುಎಇಗೆ ಕರೆದು ನನ್ನ ಜೀವನವನ್ನು ಅವರೊಂದಿಗೆ ಸಂತಸದಿಂದ ಕಳೆಯಬೇಕು ಎಂದ ಅವರು ತಮ್ಮ ಗೆಲುವಿನ ಮೊತ್ತದ ಒಂದು ಭಾಗವನ್ನು ದಾನ ಮಾಡಲೂ ಬೊಲ್ಲಾ ನಿರ್ಧರಿಸಿದ್ದಾರೆ.
Comments are closed.