ಮುಂಬೈ,ಡಿ.30: ಘರ್ ವಾಪಸಿ ಕಾರ್ಯಕ್ರಮದ ಮೂಲಕ ಭಾರತದಾದ್ಯಂತ ವಿರುವ ಕ್ರೈಸ್ತರು ಹಾಗೂ ಮುಸ್ಲಿಮರನ್ನು ಹಿಂದೂ ಧರ್ಮದ ತೆಕ್ಕೆಯೊಳಗೆ ಸೆಳೆಯಲು ಕೇಸರಿ ಸಂಘಟನೆಗಳ ತೀವ್ರ ಪರಿಶ್ರಮಗಳು ಗರಿಗೆದರುತ್ತಿರುವುದರ ಮಧ್ಯೆಯೇ ಮಹಾರಾಷ್ಟ್ರದ ಬಹುತೇಕ ಹಿಂದೂ ವರ್ಗಗಳು ಭೌದ್ಧಧರ್ಮಕ್ಕೆ ಮತಾಂತರವಾಗುವ ಇಚ್ಛೆ ವ್ಯಕ್ತಪಡಿಸುತ್ತಿದೆ ಎಂಬುದಾಗಿ ವರದಿಯಾಗಿದೆ. ಮತಾಂತರ ಪ್ರಕ್ರಿಯೆಗೆ ಹಲವು ಹಿಂದೂಗಳು ಇದೀಗಲೇ ನೋಂದಾಯಿಸಿಕೊಂಡಾಗಿದೆ ಎಂದು ತಿಳಿದುಬಂದಿದೆ.
ಸುಮಾರು 1600 ಕುಟುಂಬಗಳು ಬೌದ್ಧ ಧರ್ಮಕ್ಕೆ ಮತಾಂತರವಾಗಲು ತನ್ನಲ್ಲಿ ನೋಂದಾಯಿಸಿಕೊಂಡಿದೆ ಎಂದು ಸತ್ಯಶೋಧಕ್ ಒಬಿಸಿ ಪರಿಷತ್ ಹೇಳಿದೆ. ಕೆಲವು ಬ್ರಾಹ್ಮಣರು ಹಾಗೂ ಮರಾಠ ಕುಟುಂಬಗಳು ಮಾತ್ರವಲ್ಲದೆ ಒಬಿಸಿ ಜನರೂ ಇದರಲ್ಲಿ ಸೇರಿದ್ದಾರೆ ಎಂದು ಅದು ಮಾಹಿತಿ ನೀಡಿದೆ. ಬೌದ್ಧ ಧರ್ಮಕ್ಕೆ ಮತಾಂತರವಾಗಲು ಕೆಲವು ಮುಸ್ಲಿಮ್ ಹಾಗೂ ಕ್ರೈಸ್ತ ಕುಟುಂಬಗಳೂ ಸಹಿ ಹಾಕಿವೆ ಎನ್ನಲಾಗಿದೆ.
ಪ್ರತಿ ಕುಟುಂಬದಲ್ಲಿನ ಮೂರರಿಂದ ನಾಲ್ಕು ವ್ಯಕ್ತಿಗಳಂತೆ ರಾಜ್ಯದ ಸುಮಾರು 6,000 ಹಿಂದೂಗಳು ಬೌದ್ಧಧರ್ಮಕ್ಕೆ ಮತಾಂತರ ವಾಗಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.
‘‘ಇತರ ಹಿಂದುಳಿದ ವರ್ಗಗಳನ್ನು ಘರ್ವಾಪಸಿ ಕಾರ್ಯಕ್ರಮದ ಮೂಲಕ ಬೌದ್ಧ ಧರ್ಮಕ್ಕೆ ತರುವ ಪ್ರಕ್ರಿಯೆಯನ್ನು ನಡೆಸುವುದಕ್ಕಿಂತ ಮುಂಚಿತವಾಗಿ ಅವರ ಮೂಲವನ್ನು ಪತ್ತೆಹಚ್ಚಲು ನಾವು ಪ್ರಯತ್ನ ನಡೆಸಿದ್ದೇವೆ. ನೈಜವಾಗಿ ಒಬಿಸಿಗಳೆಂದರೆ ಬುದ್ಧರು ಎಂಬುವುದನ್ನು ನಾವು ಇದರಿಂದ ಕಂಡುಕೊಂಡಿದ್ದೇವೆ. ಆದ್ದರಿಂದ ಈ ಚಳವಳಿಯು ಅವರನ್ನು ತಮ್ಮ ಮೂಲ ಧರ್ಮಕ್ಕೆ ಮರಳಿ ಕರೆತರುವ ಒಂದು ಪರಿಶ್ರಮವಾಗಿದೆ.ಇದು ಮತಾಂತರವಾಗಿರದೆ ಘರ್ ವಾಪಸಿಯಾಗಿದೆ’’ ಎಂದು ಸತ್ಯಶೋಧಕ್ ಒಬಿಸಿ ಪರಿಷತ್ನ ಅಧ್ಯಕ್ಷ ಹನುಮಂತ್ ಉಪ್ರೆ ಹೇಳಿದ್ದಾರೆ.
2011ರ ಅ.14ರಂದು ಈ ಸಂಘಟನೆಯು ಘರ್ ವಾಪಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. 2016ರ ಅ.14ಕ್ಕಿಂತ ಮುಂಚಿತವಾಗಿ ಸಾಮೂಹಿಕ ಮತಾಂತರ ನಡೆಸಲು ಅದು ಯೋಜನೆ ರೂಪಿಸಿತ್ತು. ಕಳೆದ ಮೂರು ವರ್ಷಗಳಿಂದ ಈ ಸಂಘಟನೆಯು ತನ್ನ ಕಾರ್ಯಕ್ರಮಕ್ಕೆ ಬೆಂಬಲವನ್ನು ಪಡೆದುಕೊಳ್ಳುವ ಯತ್ನವನ್ನು ಮಾಡುತ್ತಿದೆ. ಒಬಿಸಿಗಳು ಎದುರಿಸುತ್ತಿರುವ ಕಷ್ಟಗಳು ಹಾಗೂ ಬಡತನಗಳಿಗೆ ಹಿಂದೂಗಳಲ್ಲಿರುವ ಮೇಲ್ವರ್ಗದ ಜನರೇ ಕಾರಣ ಎಂದು ಉಪ್ರೆ ಆರೋಪಿಸಿದ್ದಾರೆ.
‘‘ಹಿಂದಿನ ಕಾಲದಲ್ಲಿಯೂ ಒಬಿಸಿಗಳು ವಂಚನೆಗೊಳಗಾಗುತ್ತಿದ್ದರು. ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯೇ ಒಬಿಸಿಗಳ ಹಿಂದುಳಿಯುವಿಕೆಗೆ ಕಾರಣ. ಜಾತಿ ವ್ಯವಸ್ಥೆಯನ್ನು ಹಾಗೆಯೇ ಇರಿಸಿಕೊಳ್ಳುವ ಉದ್ದೇಶದಿಂದ ಒಬಿಸಿಗಳ ಅಭಿವೃದ್ಧಿಯನ್ನು ವಿರೋಧಿಸಲಾಗುತ್ತಿತ್ತು. ಇದರಿಂದ ಒಬಿಸಿಗಳು ಶೋಷಣೆಗೊಳಗಾದರು. ಹಿಂದೂ ಧರ್ಮದಲ್ಲಿ ಒಬಿಸಿಗಳಿಗೆ ಯಾವುದೇ ಗೌರವವಿಲ್ಲ ’’ ಎಂದು ಉಪ್ರೆ ಅಭಿಪ್ರಾಯಿಸುತ್ತಾರೆ.
‘‘1931ರಲ್ಲಿ ಬ್ರಿಟಿಷರು ಒಬಿಸಿಗಳ ಜನಗಣತಿಯನ್ನು ಕೈಗೊಂಡಿದ್ದರು. 2010ರಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಲಾಗುವುದು ಎಂಬ ಭರವಸೆ ನೀಡಿರುವುದನ್ನು ಬಿಟ್ಟರೆ ಬ್ರಿಟಿಷರ ಬಳಿಕ ಇಂತಹ ಜನಗಣತಿ ಕಾರ್ಯಕ್ರಮಗಳಿಗೆ ಯಾವುದೇ ಸರಕಾರಗಳು ಮುಂದಾಗಿರದ ಕಾರಣ ನಮ್ಮನ್ನು ವಂಚಿಸಲಾಗುತ್ತದೆ ಎಂಬ ಸಹಜ ಭಾವನೆ ಒಬಿಸಿಗಳಲ್ಲಿ ಬೇರೂರಿದೆ’’ ಎಂದು ಉಪ್ರೆ ಹೇಳಿದ್ದಾರೆ. ‘‘2016ರವರೆಗೆ 5 ಲಕ್ಷ ಮಂದಿಯನ್ನು ಮಹಾರಾಷ್ಟ್ರದಲ್ಲಿ ಮತಾಂತರಕ್ಕಾಗಿ ನೋಂದಣಿ ಮಾಡಿಕೊಳ್ಳುವಂತಹ ಗುರಿಯನ್ನು ನಾವು ಹೊಂದಿದ್ದೇವೆ. ರಾಜ್ಯದ 12 ಕೋಟಿ ಜನರ ಪೈಕಿ 5 ಕೋಟಿ ಜನರು ಒಬಿಸಿ ವರ್ಗದವರಾಗಿದ್ದಾರೆ. ನಮ್ಮ ಗುರಿಯನ್ನು ಸುಲಭವಾಗಿ ನಾವು ಮುಟ್ಟಲಿದ್ದೇವೆ ಎಂಬ ವಿಶ್ವಾಸ ನಮಗಿದೆ ’’ ಎಂದು ಉಪ್ರೆ ಹೇಳಿದ್ದಾರೆ. 2007ರಲ್ಲಿ ಮಹಾರಾಷ್ಟ್ರದಲ್ಲಿ ಸುಮಾರು 1 ಲಕ್ಷ ಜನರು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು. ದಲಿತ ಸಾಹಿತಿ ಹಾಗೂ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಲಕ್ಷ್ಮಣ್ ಮಾಣೆಯ ಅನುಯಾಯಿಗಳು ಮಾತ್ರವಲ್ಲದೆ ಬುಡಕಟ್ಟುಗಳು, ಅಲೆಮಾರು ಬುಡಕಟ್ಟುಗಳು ಹಾಗೂ ಇತರ ಸಮುದಾಯಗಳ ಜನರು ಇದರಲ್ಲಿ ಒಳಗೊಂಡಿದ್ದರು. 2006ರ ಅಕ್ಟೋಬರ್ ತಿಂಗಳಲ್ಲಿ ಮಾಣೆ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು.
ಹಿಂದೂಧರ್ಮವನ್ನು ಆಚರಿಸುತ್ತಿರುವ ಒಬಿಸಿ ಸಮುದಾಯಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಗೃತಿಯು ಹೆಚ್ಚಿದಂತೆ ಭಾಸವಾಗುತ್ತಿದೆ ಎಂದು ಖ್ಯಾತ ಸಾಹಿತಿ ಜೆ.ವಿ.ಪವಾರ್ ಹೇಳುತ್ತಾರೆ.
‘‘ಒಬಿಸಿಯವರಿಗೆ ಮೀಸಲಾತಿ ಸೌಲಭ್ಯ ವಿರುವುದರಿಂದ ಇದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಲ್ಲಿಯೇ ಮುಂದುವರಿಯುವುದು ಸೂಕ್ತ ಎಂಬ ನಿಲುವಿಗೆ ಅವರು ಅಂಟಿಕೊಂಡಿದ್ದಾರೆ. ಜಾತಿ ವ್ಯವಸ್ಥೆಯ ಕಾರಣ ದಲಿತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು’’ ಎಂದು ಪವಾರ್ ಹೇಳಿದ್ದಾರೆ.
ಹಿಂದುತ್ವ ಕಾರ್ಯಕರ್ತರ ಇತ್ತೀಚೆಗಿನ ಕೃತ್ಯಗಳಿಗೆ ತೀವ್ರ ನಿರಾಶೆ ವ್ಯಕ್ತಪಡಿಸಿರುವ ಪವಾರ್, ಇತಿಹಾಸದಲ್ಲಿ ಹಿಂದೂ ಧರ್ಮದ ಅಸ್ತಿತ್ವವನ್ನೇ ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ. ಭಾರತವು ಮೂಲತಃ ಬೌದ್ಧ ಧರ್ಮೀಯರ ದೇಶವಾಗಿದ್ದು, ಗುಹಾಂತರ ಕಲೆಗಳು ಹಾಗೂ ಪ್ರಾಚೀನ ಗ್ರಂಥಗಳೇ ಇದಕ್ಕೆ ಆಧಾರ ಎಂದು ಅವರು ತಿಳಿಸಿದ್ದಾರೆ.
