ಪ್ರಮುಖ ವರದಿಗಳು

ಮೂರನೆ ಟೆಸ್ಟ್ : ತಪ್ಪಿದ ಸೋಲು ಕೈ ಜಾರಿದ ಸರಣಿ

Pinterest LinkedIn Tumblr

harris-2

ಮೆಲ್ಬೋರ್ನ್, ಡಿ.30: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಮಂಗಳವಾರ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಮೂರನೆ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

ಈ ಮೂಲಕ ಆಸ್ಟ್ರೇಲಿಯ ತಂಡ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೆ ಉಳಿಸಿಕೊಂಡಿದೆ. ಇಲ್ಲಿನ ಐತಿಹಾಸಿಕ ಎಂಸಿಜಿಯಲ್ಲಿ 17 ವರ್ಷಗಳ ನಂತರ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. 1997ರಲ್ಲಿ ದಕ್ಷಿಣ ಆಫ್ರಿಕ-ಆಸ್ಟ್ರೇಲಿಯ ನಡುವಿನ ಪಂದ್ಯ ಕೊನೆಯ ಬಾರಿ ಡ್ರಾಗೊಂಡಿತ್ತು. ಐದನೆ ಹಾಗೂ ಅಂತಿಮ ದಿನವಾದ ಮಂಗಳವಾರ ಧೋನಿ ಪಡೆ ಮೂರನೆ ಟೆಸ್ಟ್ ಪಂದ್ಯವನ್ನು ಗೆಲ್ಲಲು 70 ಓವರ್‌ಗಳಲ್ಲಿ 384 ರನ್ ಗಳಿಸಬೇಕಾಗಿತ್ತು.

9ನೆ ಓವರ್‌ನಲ್ಲಿ 19 ರನ್‌ಗೆ 3 ವಿಕೆಟ್ ಕಳೆದುಕೊಂಡ ಭಾರತ ಕಳಪೆ ಆರಂಭ ಪಡೆಯಿತು. ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ (0) ಶೂನ್ಯಕ್ಕೆ ಹ್ಯಾರಿಸ್‌ಗೆ ವಿಕೆಟ್ ಒಪ್ಪಿಸಿದರು. ಮೂರನೆ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಮಂಗಳೂರಿನ ಕೆ.ಎಲ್. ರಾಹುಲ್ ಕೇವಲ ಒಂದು ರನ್ ಗಳಿಸಿ ಜಾನ್ಸನ್‌ಗೆ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ 3 ರನ್ ಗಳಿಸಿದ್ದ ರಾಹುಲ್ ಚೊಚ್ಚಲ ಪಂದ್ಯದಲ್ಲಿ ಕಳಪೆ ಪ್ರದರ್ಶನದಿಂದ ನಿರಾಸೆಗೊಳಿಸಿದರು.

ಇನ್ನೋರ್ವ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ 11 ರನ್‌ಗೆ ಹೇಝ್ಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಸರಣಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸಿಡಿಸಿದ್ದ ವಿಜಯ್ ಅಂಪೈರ್ ಕುಮಾರ ಧರ್ಮಸೇನ ನೀಡಿದ್ದ ವಿವಾದಿತ ಎಲ್‌ಬಿಡಬ್ಲೂ ತೀರ್ಪಿಗೆ ಬಲಿಯಾದರು. ಆಗ ಉಪ ನಾಯಕ ವಿರಾಟ್ ಕೊಹ್ಲಿ (54 ರನ್) ಹಾಗೂ ಅಜಿಂಕ್ಯ ರಹಾನೆ (48 ರನ್) 4ನೆ ವಿಕೆಟ್‌ಗೆ 85 ರನ್ ಜೊತೆಯಾಟ ನಡೆಸಿ ತಂಡಕ್ಕೆ ಮತ್ತೊಮ್ಮೆ ಆಸರೆಯಾದರು.

ಭಾರತ 66 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾಗೊಳಿಸಲು ಉಭಯ ತಂಡದ ನಾಯಕರು ನಿರ್ಧರಿಸಿದರು. ನಾಯಕ ಎಂ.ಎಸ್. ಧೋನಿ(24) ಹಾಗೂ ಆರ್. ಅಶ್ವಿನ್ (8) ಕ್ರೀಸ್‌ನಲ್ಲಿ ಔಟಾಗದೆ ಉಳಿದಿದ್ದರು. ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಜಯಿಸಿತು. ನಾಲ್ಕನೆ ಹಾಗೂ ಕೊನೆಯ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಜ.6 ರಿಂದ ಆರಂಭವಾಗಲಿದೆ. ಇದಕ್ಕೂ ಮೊದಲು 7 ವಿಕೆಟ್‌ಗೆ 261 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ಭೋಜನ ವಿರಾಮದ ವೇಳೆಗೆ 9 ವಿಕೆಟ್‌ಗೆ 318 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿ ಭಾರತಕ್ಕೆ 384 ರನ್ ಸವಾಲು ನೀಡಿತು.

8ನೆ ವಿಕೆಟ್‌ಗೆ 69 ರನ್ ಸೇರಿಸಿದ ಶಾನ್ ಮಾರ್ಷ್(99ರನ್)ಹಾಗೂ ಹ್ಯಾರಿಸ್(21) ಆಸೀಸ್ ಸವಾಲಿನ ಮೊತ್ತ ಸೇರಿಸಲು ನೆರವಾದರು. ಮಾರ್ಷ್ ಕೇವಲ ಒಂದು ರನ್‌ನಿಂದ ಶತಕ ವಂಚಿತರಾದರು. ಒಂದು ರನ್ ಕದಿಯಲು ಹೋದ ಮಾರ್ಷ್ ಕೊಹ್ಲಿಯ ನೇರ ಎಸೆತಕ್ಕೆ ರನೌಟಾದರು. ಮಾರ್ಷ್ ಟೆಸ್ಟ್ ಕ್ರಿಕೆಟ್‌ನಲ್ಲಿ 99 ರನ್‌ಗೆ ರನೌಟಾದ ವಿಶ್ವದ 16ನೆ ಆಟಗಾರ. ಮೂರನೆ ಆಸೀಸ್ ಬ್ಯಾಟ್ಸ್‌ಮನ್.

ಮೂರನೆ ಟೆಸ್ಟ್ ಪಂದ್ಯದ ಹೈಲೈಟ್ಸ್
-17: ಎಂಸಿಜಿಯಲ್ಲಿ 17 ವರ್ಷಗಳ ನಂತರ ಟೆಸ್ಟ್ ಪಂದ್ಯ ಡ್ರಾಗೊಂಡಿತು. 1997ರಲ್ಲಿ ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯ ನಡುವಿನ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.

-68.9: ವಿರಾಟ್ ಕೊಹ್ಲಿ ಟೆಸ್ಟ್‌ನ ನಾಲ್ಕನೆ ಇನಿಂಗ್ಸ್‌ನಲ್ಲಿ 68.9ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಕೊಹ್ಲಿ ನಾಲ್ಕನೆ ಇನಿಂಗ್ಸ್‌ನಲ್ಲಿ 2 ಶತಕ ಹಾಗೂ ನಾಲ್ಕು ಅರ್ಧಶತಕ ಸಿಡಿಸಿದ್ದಾರೆ.

-499: ಕೊಹ್ಲಿ ಪ್ರಸ್ತುತ ಸರಣಿಯಲ್ಲಿ ಒಟ್ಟು 499 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯದಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ವಿದೇಶಿ ದಾಂಡಿಗರು ಈ ವರೆಗೆ ಸರಣಿಯೊಂದರಲ್ಲಿ ಇಷ್ಟೊಂದು ರನ್ ಗಳಿಸಿಲ್ಲ. 2007-08ರಲ್ಲಿ ಭಾರತದ ಸಚಿನ್ ತೆಂಡುಲ್ಕರ್ 4ನೆ ಕ್ರಮಾಂಕದಲ್ಲಿ 480 ರನ್ ಗಳಿಸಿದ್ದರು.

-3: ಸ್ವದೇಶದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಮೂವರು ಬ್ಯಾಟ್ಸ್‌ಮನ್‌ಗಳು 99 ರನ್‌ಗೆ ರನೌಟಾಗಿದ್ದಾರೆ. ಮೂವರು ದಾಂಡಿಗರು ಎಂಸಿಜಿಯಲ್ಲಿ ರನೌಟಾಗಿದ್ದು ವಿಶೇಷ. ಮಾರ್ಷ್‌ಗಿಂತ ಮೊದಲು ಬಿಲ್ ಬ್ರೌನ್ (1948) ಹಾಗೂ ಅರ್ಥರ್ ಮೊರಿಸ್ (1953) 99 ರನ್‌ಗೆ ಔಟಾಗಿದ್ದರು.

– 9: ಮೂರನೆ ಟೆಸ್ಟ್ ಪಂದ್ಯದಲ್ಲಿ ಧೋನಿ 9 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಒಂದೇ ಟೆಸ್ಟ್ ಪಂದ್ಯದಲ್ಲಿ ಈ ವರೆಗೆ ಭಾರತದ ಯಾವೊಬ್ಬ ವಿಕೆಟ್‌ಕೀಪರ್ 8 ಕ್ಕಿಂತ ಹೆಚ್ಚು ದಾಂಡಿಗರನ್ನು ಔಟ್ ಮಾಡಿಲ್ಲ.

-848: ಮೂರನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಒಟ್ಟು 848 ರನ್ ಗಳಿಸಿದೆ. 2004ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತ 916 ರನ್ ಗಳಿಸಿತ್ತು. ಇದು ಆಸೀಸ್- ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತ.

-90: ಕೊಹ್ಲಿಗಿಂತ ಮೊದಲು ಕಳೆದ 90 ವರ್ಷಗಳಲ್ಲಿ ಮೆಲ್ಬೋರ್ನ್‌ನಲ್ಲಿ ಪ್ರವಾಸಿ ತಂಡದ ಯಾವೊಬ್ಬ ಬ್ಯಾಟ್ಸ್‌ಮನ್ ಟೆಸ್ಟ್ ಪಂದ್ಯದಲ್ಲಿ 50 ಪ್ಲಸ್ ಹಾಗೂ 150 ಪ್ಲಸ್ ಸ್ಕೋರ್ ದಾಖಲಿಸಿಲ್ಲ. ಕೊಹ್ಲಿ 169 ಹಾಗೂ 54 ರನ್ ಗಳಿಸಿ ಈ ಸಾಧನೆ ಮಾಡಿದ್ದಾರೆ. 1925ರಲ್ಲಿ ಇಂಗ್ಲೆಂಡ್‌ನ ಹೆರ್ಬೆರ್ಟ್ ಸಟ್‌ಕ್ಲಿಫ್ 176 ಹಾಗೂ 127 ರನ್ ಗಳಿಸಿದ್ದರು.

-25: ಅಜಿಂಕ್ಯ ರಹಾನೆ 25ನೆ ಇನಿಂಗ್ಸ್‌ನಲ್ಲಿ ಟೆಸ್ಟ್‌ನಲ್ಲಿ 1000 ರನ್ ಪೂರೈಸಿದರು.

-50: ಮಿಚೆಲ್ ಜಾನ್ಸನ್ ಭಾರತ ವಿರುದ್ಧ 50ನೆ ವಿಕೆಟ್ ಕಬಳಿಸಿದರು. ಭಾರತ ವಿರುದ್ಧ 50 ವಿಕೆಟ್ ಪಡೆದ ಆಸೀಸ್‌ನ 4ನೆ ಹಾಗೂ ವಿಶ್ವದ 22ನೆ ಬೌಲರ್ ಎನಿಸಿಕೊಂಡಿದ್ದಾರೆ. ಬ್ರೆಟ್‌ಲೀ(53) ಗರಿಷ್ಠ ವಿಕೆಟ್ ಪಡೆದಿದ್ದಾರೆ.

ಸ್ಕೋರ್ ವಿವರ
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 530 ರನ್
ಭಾರತ ಪ್ರಥಮ ಇನಿಂಗ್ಸ್: 465 ರನ್
ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್98 ಓವರ್‌ಗಳಲ್ಲಿ 318/9 ಡಿಕ್ಲೇರ್
ಡೇವಿಡ್ ವಾರ್ನರ್ ಎಲ್ಬಿಡಬ್ಲೂ ಅಶ್ವಿನ್ 40, ರೋಜರ್ಸ್‌ ಬಿ ಅಶ್ವಿನ್ 69, ಶೇನ್ ವ್ಯಾಟ್ಸನ್ ಸಿ ಧೋನಿ ಬಿ ಇಶಾಂತ್ ಶರ್ಮ 17, ಸ್ಟೀವನ್ ಸ್ಮಿತ್ ಸಿ ರಹಾನೆ ಬಿ ಯಾದವ್ 14, ಶಾನ್ ಮಾರ್ಷ್ ರನೌಟ್ (ಕೊಹ್ಲಿ) 99, ಬರ್ನ್ಸ್ ಸಿ ಧೋನಿ ಬಿ ಇಶಾಂತ್ ಶರ್ಮ 9, ಬ್ರಾಡ್ ಹಡಿನ್ ಸಿ ಧೋನಿ ಬಿ ಯಾದವ್ 13, ಜಾನ್ಸನ್ ಸಿ ರಹಾನೆ ಬಿ ಮುಹಮ್ಮದ್ ಶಮಿ 15, ಹ್ಯಾರಿಸ್ ಸಿ ಧೋನಿ ಬಿ ಶಮಿ 21, ಲಿನ್ ಅಜೇಯ 1, ಹೇಝ್ಲಾವುಡ್ ಅಜೇಯ 0, ಇತರ 20
ವಿಕೆಟ್ ಪತನ: 1-57, 2-98, 3-131, 4-164, 5-176, 6-202, 7-234, 8-303, 9-317.
ಬೌಲಿಂಗ್ ವಿವರ: ಉಮೇಶ್ ಯಾದವ್ 22-3-89-2, ಮುಹಮ್ಮದ್ ಶಮಿ 28-4-92-2, ಇಶಾಂತ್ ಶರ್ಮ 20-5-49-2, ಅಶ್ವಿನ್ 28-4-75-2.
ಭಾರತ ದ್ವಿತೀಯ ಇನಿಂಗ್ಸ್66 ಓವರ್‌ಗಳಲ್ಲಿ 174/6
ಮುರಳಿ ವಿಜಯ್ ಎಲ್‌ಬಿಡಬ್ಲೂ ಹೇಝ್ಲವುಡ್ 11, ಶಿಖರ್ ಧವನ್ ಎಲ್‌ಬಿಡಬ್ಲೂ ಹ್ಯಾರಿಸ್ 0, ಕೆ.ಎಲ್. ರಾಹುಲ್ ಸಿ ವ್ಯಾಟ್ಸನ್ ಬಿ ಜಾನ್ಸನ್ 1, ವಿರಾಟ್ ಕೊಹ್ಲಿ ಸಿ ಬರ್ನ್ಸ್ ಬಿ ಹ್ಯಾರಿಸ್ 54, ಅಜಿಂಕ್ಯ ರಹಾನೆ ಸಿ ಮಾರ್ಷ್ ಬಿ ಹೇಝ್ಲಾವುಡ್ 48, ಪೂಜಾರ ಬಿ ಜಾನ್ಸನ್ 21, ಎಂಎಸ್ ಧೋನಿ ಅಜೇಯ 24, ಆರ್. ಅಶ್ವಿನ್ ಅಜೇಯ 8, ಇತರ 7
ವಿಕೆಟ್ ಪತನ: 1-2, 2-5, 3-19, 4-104, 5-141, 6-142.
ಬೌಲಿಂಗ್ ವಿವರ: ಜಾನ್ಸನ್ 15-3-38-2, ಹ್ಯಾರಿಸ್ 16-8-30-2, ಹೇಝ್ಲಾವುಡ್ 15-3-40-2, ಲಿನ್ 12-0-36-0, ವ್ಯಾಟ್ಸನ್ 6-1-14-0, ಸ್ಟೀವನ್ ಸ್ಮಿತ್ 2-0-10-0.
ಪಂದ್ಯಶ್ರೇಷ್ಠ: ರಿಯಾನ್ ಹ್ಯಾರಿಸ್.

Write A Comment