ಪ್ರಮುಖ ವರದಿಗಳು

ದೇವಧರ್ ಟ್ರೋಫಿ: ಬಾಬಾ ಅಪರಾಜಿತ್ ಶತಕ: ದಕ್ಷಿಣ ವಲಯ ಸೆಮಿ ಫೈನಲ್‌ಗೆ

Pinterest LinkedIn Tumblr

aparajit

ಮುಂಬೈ, ನ.29: ಬಾಬಾ ಅಪರಾಜಿತ್ ಶತಕದ ನೆರವಿನಿಂದ ದಕ್ಷಿಣ ವಲಯ ತಂಡ ಇಲ್ಲಿ ನಡೆದ ದೇವಧರ್ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಕೇಂದ್ರ ವಲಯದ ವಿರುದ್ಧ 116 ರನ್‌ಗಳ ಜಯ ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 297 ರನ್‌ಗಳ ಸವಾಲನ್ನು ಪಡೆದ ಕೇಂದ್ರ ವಲಯ ತಂಡ 36.3 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟಾಯಿತು.
ನಾಯಕ ವಿನಯ್ ಕುಮಾರ್ 6 ಓವರ್‌ಗಳಲ್ಲಿ 8 ರನ್‌ಗೆ 3 ವಿಕೆಟ್ ಮತ್ತು ಇವರಿಗೆ ಉತ್ತಮ ಬೆಂಬಲ ನೀಡಿದ ಗೋವಾದ ಎಡಗೈ ಸ್ಪಿನ್ನರ್ ದರ್ಶನ್ ಮಿಸಾಲ್ 2 ವಿಕೆಟ್ ಕಬಳಿಸಿ ಕೇಂದ್ರ ವಲಯ ತಂಡದ ಬ್ಯಾಟಿಂಗನ್ನು ಬೇಗನೆ ಮುಗಿಸಿ ದಕ್ಷಿಣ ವಲಯ ತಂಡದ ಭರ್ಜರಿ ಗೆಲುವಿಗೆ ನೆರವಾದರು.
ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಕೇಂದ್ರ ವಲಯ ವಿರುದ್ಧ ಸೋತು ಪ್ರಶಸ್ತಿ ವಂಚಿತಗೊಂಡಿದ್ದ ದಕ್ಷಿಣ ವಲಯ ದೇವಧರ್ ಟ್ರೋಫಿಯಲ್ಲಿ ಸೇಡು ತೀರಿಸಿಕೊಂಡಿತು.
ಡಿ.1ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ತಂಡ ಹಾಲಿ ಚಾಂಪಿಯನ್ ಪಶ್ಚಿಮ ವಲಯ ತಂಡವನ್ನು ಎದುರಿಸಲಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯ ತಂಡ ಅಗ್ರ ಸರದಿಯ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಾಲ್ಕನೆ ವಿಕೆಟ್‌ಗೆ ಅಪರಾಜಿತ್ ಮತ್ತು ಕರುಣ್ ನಾಯರ್ 109 ಎಸೆತಗಳಲ್ಲಿ 124 ರನ್‌ಗಳ ಜೊತೆಯಾಟ ನೀಡಿ, ತಂಡವನ್ನು ಕಷ್ಟದಿಂದ ಪಾರು ಮಾಡಿದರು.
ಆರಂಭಿಕ ದಾಂಡಿಗರಾದ ರಾಬಿನ್ ಉತ್ತಪ್ಪ ಮತ್ತು ಮಾಯಾಂಕ್ ಅಗರವಾಲ್ ಕ್ರಮವಾಗಿ 35 ಮತ್ತು 32 ರನ್ ಗಳಿಸಿ ಪೆವಿಲಿಯನ್ ಸೇರಿದಾಗ ಕ್ರೀಸ್‌ಗೆ ಆಗಮಿಸಿದ ಅಪರಾಜಿತ್ ಹೋರಾಟ ನಡೆಸಿ 113 ರನ್ (105ಎ, 8 ಬೌ, 2 ಸಿ) ಮತ್ತು ಕರಣ್ ನಾಯರ್ 74 ರನ್(62ಎ) ಸೇರಿಸಿದರು. 20ರ ಹರೆಯದ ಅಪರಾಜಿತ್ ಕಳೆದ ಅವಧಿಯ ಟೂರ್ನಿಯಲ್ಲಿ ಪೂರ್ವ ವಲಯ ವಿರುದ್ಧ ಶತಕ ಸಿಡಿಸಿದ್ದರು. ದಕ್ಷಿಣ ವಲಯ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 296 ರನ್ ಸಂಪಾದಿಸಿತು.
ಗೆಲುವಿಗೆ ಕಠಿಣ ಸವಾಲನ್ನು ಪಡೆದ ಕೇಂದ್ರ ವಲಯ ತಂಡ 4 ರನ್ ಸಂಪಾದಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಮುಕುಲ್ ದಗಾರ್ 64 ಎಸೆತಗಳಲ್ಲಿ 47 ರನ್, ನಂ.7 ಬ್ಯಾಟ್ಸ್‌ಮನ್ ಅರ್ಜಿತ್ ಗುಪ್ತಾ 49 ಎಸೆತಗಳಲ್ಲಿ 5 ಸಿಕ್ಸರ್ ಸಹಾಯದಿಂದ 66 ರನ್ ಸೇರಿಸಿ ತಂಡವನ್ನು ಕಷ್ಟದಿಂದ ಪಾರು ಮಾಡುವ ಯತ್ನ ನಡೆಸಿದರು. ಆದರೆ ಇವರ ಹೋರಾಟ ಗುರಿ ಮುಟ್ಟಲಿಲ್ಲ.
ಸಂಕ್ಷಿಪ್ತ ಸ್ಕೋರ್ ವಿವರ
ದಕ್ಷಿಣ ವಲಯ 296/9
(ಅಗರವಾಲ್ 35, ಬಾಬಾ ಅಪರಾಜಿತ್ 113, ಕರುಣ್ ನಾಯರ್ 74; ಪಂಕಜ್ ಸಿಂಗ್ 5-45, ಜಲಜ್ ಸಕ್ಸೇನಾ 2-46).
ಕೇಂದ್ರ ವಲಯ 36.3 ಓವರ್‌ಗಳಲ್ಲಿ ಆಲೌಟ್ 180
(ಅರ್ಜಿತ್ ಗುಪ್ತಾ 66, ದಗಾರ್ 47, ಪಿಯೂಷ್ ಚಾವ್ಲಾ 31; ಆರ್ ವಿನಯ್ ಕುಮಾರ್ 3-8, ಮಿಸಾಲ್ 2-41).

Write A Comment