ಪ್ರಮುಖ ವರದಿಗಳು

ದಿಲ್ಲಿಯಲ್ಲಿ ಪೊಲೀಸ್ ಪಡೆಗಳ ಮುಖ್ಯಸ್ಥರ ವಾರ್ಷಿಕ ಸಮ್ಮೇಳನ: ಭಾರತದಲ್ಲಿ ನೆಲೆ ಕಂಡುಕೊಳ್ಳಲು ಉಗ್ರಗಾಮಿ ಸಂಘಟನೆಗಳಿಗೆ ಅಸಾಧ್ಯ: ರಾಜ್‌ನಾಥ್

Pinterest LinkedIn Tumblr

raj-nathಹೊಸದಿಲ್ಲಿ, ನ.29: ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳಿಗೆ ಭಾರತದಲ್ಲಿ ನೆಲೆ ಕಂಡುಕೊಳ್ಳಲು ಸರಕಾರ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.

ನಮ್ಮ ದೇಶದಲ್ಲಿನ ಕೆಲವು ಹಾದಿ ತಪ್ಪಿರುವ ಯುವಕರು ಇಸ್ಲಾಮಿಕ್ ಸ್ಟೇಟ್‌ನ (ಐಎಸ್) ತತ್ವಸಿದ್ಧಾಂತಗಳಿಂದ ಆಕರ್ಷಿತರಾಗಿರುವುದು ಸರಕಾರದ ಪಾಲಿಗೆ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಸರಕಾರದೊಳಗಿರುವ ವ್ಯಕ್ತಿಗಳೇ ಭಾರತವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬೇರೆಬೇರೆ ತಂತ್ರಗಳ ಮೂಲಕ ಭಾರತಕ್ಕೆ ಹಾನಿಗೊಳಿಸುವ ಕೆಲಸವನ್ನು ನೆರೆಯ ದೇಶ ಕೈಬಿಟ್ಟಿಲ್ಲ ಎಂದು ಅವರು ಆರೋಪಿಸಿದರು.

ಪೊಲೀಸ್ ಡಿಜಿಪಿಗಳು, ಐಜಿಪಿಗಳು ಮತ್ತು ಕೇಂದ್ರೀಯ ಪೊಲೀಸ್ ಸಂಘಟನೆಗಳ ಮುಖ್ಯಸ್ಥರ 49ನೆ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಿರಿಯಾ ಮತ್ತು ಇರಾಕ್‌ನಲ್ಲಿ ರಚನೆಯಾಗಿರುವ ‘ಐಸಿಸ್’ ಸಂಘಟನೆಯು ಭಾರತೀಯ ಉಪಖಂಡದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಭಾರತೀಯ ಉಪಖಂಡವನ್ನು ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತಿಸುವುದು ಈ ಸಂಘಟನೆಯ ಗುರಿಯಾಗಿದೆ. ಈ ಬೆಳವಣಿಗೆಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ರಾಜ್‌ನಾಥ್ ಸಿಂಗ್ ಹೇಳಿದರು.

ಇಂತಹ ಬೆಳವಣಿಗೆಗಳನ್ನು ಒಂದು ಸವಾಲಾಗಿ ಪರಿಗಣಿಸಬಹುದಾದರೂ, ಈ ಬೆದರಿಕೆಗಳನ್ನು ದೇಶದ ಭದ್ರತಾಪಡೆಗಳು ಸಮರ್ಥವಾಗಿ ಎದುರಿಸಲಿವೆ ಎಂಬ ವಿಶ್ವಾಸ ತಮಗಿದೆ. ಆದ್ದರಿಂದ ದೇಶದ ಜನತೆ ಕಳವಳಪಡುವ ಅಗತ್ಯವಿಲ್ಲ ಎಂದರು.

ಜಮ್ಮು ಮತ್ತು ಕಾಶ್ಮೀರದ ಅರ್ನಿಯ ಸೆಕ್ಟರ್‌ನಲ್ಲಿ ನಡೆದ ಗುಂಡಿನ ಚಕಮಕಿಯನ್ನು ಪ್ರಸ್ತಾಪಿಸಿದ ಅವರು, ಇಂತಹ ಘಟನೆಗಳ ಹಿಂದೆ ಸರಕಾರೇತರ ಶಕ್ತಿಗಳು ಇವೆ ಎಂದು ಪಾಕಿಸ್ತಾನ ಹೇಳುತ್ತದೆ. ‘ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೂಡ ಸರಕಾರೇತರ ಶಕ್ತಿಯೇ ಎಂದು ನಾನು ಆ ದೇಶವನ್ನು ಪ್ರಶ್ನಿಸಲು ಬಯಸುತ್ತೇನೆ’ ಎಂದರು.

ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ, ತಾನು ಭಾರತದಲ್ಲಿ ನೆಲೆ ಕಂಡುಕೊಳ್ಳಬಹುದು ಎಂದು ‘ಐಸಿಸ್’ ಯೋಚನೆ ಮಾಡಿದ್ದರೆ, ಅವರ ಗ್ರಹಿಕೆ ತಪ್ಪು. ಇಲ್ಲಿನ ಮುಸ್ಲಿಮರು, ಹಿಂದೂಗಳು ಮತ್ತು ಇತರ ಧರ್ಮಿಯರು ಒಟ್ಟಾಗಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ್ದಾರೆ, ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ರಾಜ್‌ನಾಥ್ ಹೇಳಿದರು.

ಗೃಹ ಸಚಿವರು ಇದೇ ಸಂದರ್ಭದಲ್ಲಿ ಎಡಪಂಥೀಯ ಉಗ್ರವಾದದ ಕುರಿತೂ ಪ್ರಸ್ತಾಪಿಸಿದರು. ದೇಶದಲ್ಲಿ ಮಾವೋವಾದಿ ಹೋರಾಟಗಾರರ ಹಿಂಸಾಚಾರಗಳು ತಗ್ಗಿವೆ. ಈ ಸಂಘಟನೆಗಳ ಜೊತೆಗೆ ಮಾತುಕತೆ ನಡೆಸಲು ಸರಕಾರ ಸಿದ್ಧವಿದೆ. ಆದರೆ, ಹಿಂಸಾಚಾರದ ಕೃತ್ಯಗಳಲ್ಲಿ ತೊಡಗಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.

ಎಡಪಂಥೀಯ ಹಿಂಸಾಚಾರಪೀಡಿತ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಾಯಕತ್ವ ವಹಿಸಿದರೆ ಸಮಸ್ಯೆಯನ್ನು ಚೆನ್ನಾಗಿ ನಿರ್ವಹಿಸಬಹುದು. ಯಾಕೆಂದರೆ, ಕೇಂದ್ರೀಯ ಪಡೆಗಳ ಜೊತೆಗೆ ಬಹಳ ಉತ್ತಮ ಸಹಯೋಗದೊಂದಿಗೆ ಕೆಲಸ ಮಾಡಲು ಅವರಿಗೆ ಸಾಧ್ಯವಾಗುತ್ತದೆ ಎಂದು ರಾಜ್‌ನಾಥ್ ಅಭಿಪ್ರಾಯಪಟ್ಟರು.

ಈಶಾನ್ಯ ರಾಜ್ಯಗಳಲ್ಲಿನ ಬಂಡುಕೋರರ ಸಮಸ್ಯೆಗಳು ಪ್ರಾಥಮಿಕವಾಗಿ ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದೆ. ದೇಶಕ್ಕೆ ಸ್ವಾತಂತ್ರ ಲಭಿಸಿದಂದಿನಿಂದಲೂ ಈ ಸಮಸ್ಯೆ ಇದೆ. ಈ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ದೇಶವಿರೋಧಿ ಮತ್ತು ಸಾಮಾಜಿಕವಿರೋಧಿ ಶಕ್ತಿಗಳು ಸೈಬರ್‌ಲೋಕವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸೈಬರ್‌ಲೋಕದ ಮೇಲೆ ನಿಗಾ ಇರಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು. ಅಲ್ಲದೆ ದೇಶದ ಕರಾವಳಿ ಭದ್ರತೆ ಸಾಲದು. ಇದನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.

Write A Comment