ರಾಷ್ಟ್ರೀಯ

ನೆರೆರಾಷ್ಟ್ರಗಳ ಜತೆ ಸಂಬಂಧ ಸೂಕ್ಷ್ಮ: ವಾಯುಪಡೆಯ ಮುಖ್ಯಸ್ಥ ಅರುಪ್ ರಾಹಾ

Pinterest LinkedIn Tumblr

Arup_Raha

ಬೆಂಗಳೂರು: ನೆರೆ ರಾಷ್ಟ್ರಗಳ ಭೂಭಾಗಗಳನ್ನು ಕಬಳಿಸಬೇಕೆಂಬ ಮಹದಾಸೆ ಭಾರತಕ್ಕಿಲ್ಲ. ಆದರೆ ನಮ್ಮ ನೆರೆರಾಷ್ಟ್ರಗಳು ಈಗಾಗಲೇ ಕಬಳಸಿಕೊಂಡಿರುವ ನಮ್ಮ ದೇಶದ ಭಾಗಗಳನ್ನು ವಾಪಸ್ ಪಡೆಯಬೇಕೆಂಬುದೇ ನಮ್ಮ ಉದ್ದೇಶ ಎಂದು ವಾಯುಪಡೆಯ ಮುಖ್ಯಸ್ಥ ಅರುಪ್ ರಾಹಾ ಹೇಳಿದ್ದಾರೆ.

ಚೀನಾದ ಜತೆಗಿನ ಬಾಂಧವ್ಯ ಸರಿಯಾದ ರೀತಿಯಲ್ಲಿ ಇದೆಯೆ? ಎಂಬ ಸಂಶಯವಿದೆ. ಆದರೆ ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಅದನ್ನೆಲ್ಲ ಎದುರಿಸಲು ನಾವು ಸಿದ್ಧರಾಗಿದ್ದೇವೆ.

ನಮ್ಮಿಂದ ನೆರೆ ರಾಷ್ಟ್ರಗಳು ಕಬಳಿಸಿಕೊಂಡಿರುವ ಭೂಭಾಗಗಳನ್ನು ನಾವು ವಾಪಸ್ ಪಡೆಯಲು ಯತ್ನಿಸುತ್ತಿದ್ದೇವೆ. ಇದು ಬಿಟ್ಟರೆ ನಮ್ಮ ನೆರೆ ರಾಷ್ಟ್ರಗಳ ಮೇಲೆ ಹಕ್ಕು ಸಾಧಿಸಬೇಕು, ಅಲ್ಲಿನ ಭೂಭಾಗ ಕಬಳಿಸಬೇಕು ಎಂಬ ಯಾವುದೇ ಉದ್ದೇಶ ನಮಗಿಲ್ಲ ಎಂದು ರಾಹಾ ಹೇಳಿದ್ದಾರೆ.

ಏರ್ ಚೀಫ್ ಮಾರ್ಷಲ್ ಎಲ್‌ಎಂ ಕಾಟ್ರೆ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ರಾಹಾ, ಬ್ರಿಟಿಷ್ ಆಳ್ವಿಕೆಯನ್ನು ನಾವು ಕೊನೆಗೊಳಿಸಿದ್ದರಿಂದ ನಮಗೆ ಗಡಿಯಲ್ಲಿ ಶತ್ರುಗಳಿದ್ದಾರೆ. ಆದ್ದರಿಂದ ನಾವು ಭದ್ರತೆಯ ದೃಷ್ಟಿಯಲ್ಲಿ ಹೆಚ್ಚು ಎಚ್ಚರದಿಂದಿರಬೇಕು.

ಭಾರತ ಯಾವುದೇ ಯುದ್ಧ ಅಥವಾ ಸಂಘರ್ಷಗಳಿಗೆ ಇಂಬುಕೊಡದೆ ಉತ್ತಮ ಸಂಬಂಧವನ್ನು ಕಾಪಾಡಲು ಯತ್ನಿಸುತ್ತದೆ. ಒಂದು ವೇಳೆ ಶತ್ರು ರಾಷ್ಟ್ರಗಳು ನಮ್ಮ ಜತೆ ಯುದ್ಧ ಸಾರಿದರೆ ನಾವು ಅವರಿಗೆ ತಕ್ಕ ಉತ್ತರ ನೀಡುತ್ತೇವೆ.

ಗಡಿ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧ ತುಂಬಾ ಸೂಕ್ಷ್ಮವಾಗಿದೆ. ಗಡಿ ನಿಯಂತ್ರಣ ಪ್ರದೇಶದಲ್ಲಿ ಆಗಾಗ್ಗೆ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಆದರೆ ನಮ್ಮೊಂದಿಗೆ ಇತರ ರಾಷ್ಟ್ರಗಳು ಉತ್ತಮ ಸಂಬಂಧ ಸಾಧಿಸುವುದಾದರೆ ನಾವೂ ಹಾಗೇ ಇರುತ್ತೇವೆ. ಇಲ್ಲವಾದರೆ ಯಾವುದೇ ರೀತಿಯ ಪ್ರತಿದಾಳಿಗೂ ತಯಾರಾಗಿದ್ದೇವೆ ಎಂದು ವಾಯುಪಡೆ ಮುಖ್ಯಸ್ಥರು ಹೇಳಿದ್ದಾರೆ.

Write A Comment