ರಾಷ್ಟ್ರೀಯ

ವಿಶ್ವದ 20 ಪ್ರಮುಖ ಪ್ರವಾಸಿ ತಾಣ: ‘ಮುತ್ತಿನ ನಗರಿ’ಗೆ 2ನೇ ಸ್ಥಾನ

Pinterest LinkedIn Tumblr

hyderbad-traveller

ನವದೆಹಲಿ: ದಕ್ಷಿಣ ಭಾರತದ ಪ್ರಮುಖ ನಗರವೊಂದು ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿದ್ದು, 2015ರ ನೋಡಲೇ ಬೇಕಾದ ವಿಶ್ವದ ಪ್ರಮುಖ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ನ್ಯಾಷನಲ್ ಜಿಯೋಗ್ರಾಫಿಕ್ ಸಂಸ್ಥೆಯ ಪ್ರವಾಸದ ವಿಭಾಗದ ‘ಟ್ರಾವಲರ್’ ಎಂಬ ಮ್ಯಾಗಜಿನ್ನಲ್ಲಿ 2015ರ ನೋಡಲೇಬೇಕಾದ ವಿಶ್ವದ 20 ಪ್ರಮುಖ ನಗರಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಐಟಿ ರಾಜಧಾನಿ ಎಂದೇ ಖ್ಯಾತವಾದ ಹೈದ್ರಾಬಾದ್ ನಗರ 2ನೇ ಸ್ಥಾನ ಪಡೆದುಕೊಂಡಿದೆ. ಟ್ರಾವಲರ್ನ ಡಿಸೆಂಬರ್ 2014 ಮತ್ತು ಜನವರಿ 2015ರ ಅವಧಿಯ ಸಂಚಿಕೆಯಲ್ಲಿ ಈ ನೂತನ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿ ಅಮೆರಿಕದ ಸ್ಯಾನ್ಫ್ರ್ಯಾನ್ಸಿಸ್ಕೋದಲ್ಲಿರುವ ‘ದಿ ಪ್ರೆಸಿಡಿಯೋ’ ನಗರ ಮೊದಲ ಸ್ಥಾನದಲ್ಲಿದ್ದು, ಭಾರತದ ಹೈದ್ರಾಬಾದ್ ನಗರ ಎರಡನೇ ಸ್ಥಾನ ಪಡೆದುಕೊಂಡಿದೆ.

ಉಳಿದಂತೆ ಸ್ವಿಸ್ನ ಝರ್ಮ್ಯಾಟ್, ವಾಷಿಂಗ್ಟನ್ ಡಿಸಿಯಲ್ಲಿರುವ ನ್ಯಾಷನಲ್ ಮಾಲ್, ಕೋರ್ಸಿಕಾ, ಪೆರುನಲ್ಲಿರುವ ಚೊಕ್ಕಿರೌ, ಚಾನಲ್ ಐಲ್ಯಾಂಡ್ನಲ್ಲಿರುವ ಸಾರ್ಕ್, ಜಪಾನ್ನ ಕೊಯಾಸನ್, ರೊಮೆನಿಯಾದ ಒಕ್ಲಾಹಾಮ ಮತ್ತು ಮಾರ್ಮರ್ಸ್ ನಗರಗಳು ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ. ದಿ ಟ್ರಾವಲರ್ ಗೈಡ್ನಲ್ಲಿ ಹೈದ್ರಾಬಾದ್ ನಗರದ ಕುರಿತು ಕೆಲ ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಐಟಿ ತಂತ್ರಜ್ಞಾನ, ಐಷಾರಮಿ ತಾಜ್ ಫಾಲ್ಕುನಾಮ ಅರಮನೆ, ಚಹಾಕ್ಕೆ ಖ್ಯಾತಿ ಗಳಿಸಿರುವ ಇರಾನಿ ಕೆಫೆಗಳು, ಐದನೇ ತಲೆಮಾರಿನ ಮುತ್ತಿನ ವ್ಯಾಪಾರಿಗಳ ಮತ್ತು ಇತರೆ ಆಕರ್ಷಣೆಗಳ ಕುರಿತು ಸಂಚಿಕೆಯಲ್ಲಿ ವಿವರಿಸಲಾಗಿದೆ.

ಅಲ್ಲದೆ ಕೊನೆಯದಾಗಿ ಹೈದ್ರಾಬಾದಿನಲ್ಲಿ ಆಡಳಿತ ನಡೆಸಿದ ಕೊನೆಯ ನಿಜಾಮ ಮತ್ತು ವಿಶ್ವ ದೊಡ್ಡ ಶ್ರೀಮಂತರ ಪೈಕಿ ಓರ್ವನಾದ ಮೀರ್ ಒಸ್ಮನ್ ಖಾನ್ ಮತ್ತು ಆತನ ಕೊನೆಯ ಹಂತದ ಆಡಳಿತದ ಕುರಿತಾಗಿಯೂ ಸಂಚಿಕೆಯಲ್ಲಿ ವಿವರಿಸಲಾಗಿದೆ.

ಈ ಹಿಂದೆ ಅಖಂಡಾಂಧ್ರದ ಭಾಗವಾಗಿದ್ದ ಮುತ್ತಿನ ನಗರಿ ಹೈದ್ರಾಬಾದ್, ಆಂಧ್ರ ಪ್ರದೇಶ ವಿಭಜನೆ ಬಳಿಕ ಪ್ರಸ್ತುತ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಜಂಟಿ ರಾಜಧಾನಿಯಾಗಿದೆ. ರಾಜ್ಯ ಪುನರ್ ಸಂಘಟನಾ ಕಾಯ್ದೆ 2014ರ ಅನ್ವಯ ಹೈದ್ರಾಬಾದ್ ನಗರ 10 ವರ್ಷಗಳ ಬಳಿಕ ತೆಲಂಗಾಣ ರಾಜ್ಯಕ್ಕೆ ಮಾತ್ರ ರಾಜಧಾನಿಯಾಗಿ ಮುಂದುವರೆಯಲಿದೆ.

Write A Comment