Mumbai

ಮುಂಬಯಿ ದೀಪಾ ಡ್ಯಾನ್ಸ್ ಬಾರ್ ಮೇಲೆ ದಾಳಿ; ಕನ್ನಡಿ ಹಿಂಬದಿಯ ರಹಸ್ಯ ನೆಲಮಾಳಿಗೆಯಲ್ಲಿದ್ದ 17 ಯುವತಿಯರ ರಕ್ಷಣೆ

Pinterest LinkedIn Tumblr

ಮುಂಬಯಿ: ಮುಂಬಯಿಯ ಅಂಧೇರಿಯಲ್ಲಿನ ದೀಪಾ ಹೆಸರಿನ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿರುವ ಪೊಲೀಸರು 17 ಯುವತಿಯರನ್ನು ರಕ್ಷಿಸಿದ್ದಾರೆ.

ಡಿ.17 ಸೋಮವಾರ ಈ ದಾಳಿ ನಡೆದಿದೆ. ದಾಳಿ ನಡೆಯಲಿದೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಡ್ಯಾನ್ಸ್ ಬಾರ್ ನ ಮಾಲೀಕರು ಯುವತಿಯರನ್ನು ರಹಸ್ಯ ನೆಲಮಾಳಿಗೆಯಲ್ಲಿ ಅಡಗಿಸಿ ಇಟ್ಟಿದ್ದರು.

ಮಹಿಳೆಯೊಬ್ಬಳು ನೀಡಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ಅಂಧೇರಿಯಲ್ಲಿರುವ ದೀಪಾ ಬಾರ್ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಸ್ಟೋರ್ ರೂಂ, ಕಿಚನ್ ರೂಂ ಹಾಗೂ ಬಾತ್ ರೂಂನಲ್ಲೆಲ್ಲಾ ಶೋಧ ಕಾರ್ಯ ನಡೆಸಿದ್ದು ಯುವತಿಯರು ಪತ್ತೆಯಾಗಿರಲಿಲ್ಲ.

ಬಾರ್ ಮ್ಯಾನೇಜರ್, ಕ್ಯಾಶಿಯರ್ ನನ್ನು ಈ ಸಂದರ್ಭದಲ್ಲಿ ಪೊಲೀಸರು ಪ್ರಶ್ನಿಸಿದಾಗಲೂ ತಮ್ಮ ಬಾರ್ ನಲ್ಲಿ ಯಾವುದೇ ಯುವತಿಯರು ಇಲ್ಲ ಎಂದು ತಿಳಿಸಿದ್ದರು. ಈ ವೇಳೆ ಮೇಕಪ್ ರೂಂನಲ್ಲಿದ್ದ ದೊಡ್ಡ ಗಾತ್ರದ ಕನ್ನಡಿಯೊಂದು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅನುಮಾನಗೊಂಡ ಪೊಲೀಸರು ಗಾಜನ್ನು ಸರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ನಂತರ ಸುತ್ತಿಗೆಯಿಂದ ಕನ್ನಡಿಯನ್ನು ಒಡೆದಾಗ ಅದರ ಹಿಂಭಾಗ ರಹಸ್ಯ ನೆಲಮಾಳಿಗೆ ಪತ್ತೆಯಾಗಿತ್ತು. ಅಲ್ಲಿ ಸುಮಾರು 17 ಯುವತಿಯರನ್ನು ಅಡಗಿಸಿ ಇಡಲಾಗಿತ್ತು. ಮಾತ್ರವಲ್ಲ ಈ ರಹಸ್ಯ ನೆಲಮಾಳಿಗೆಯಲ್ಲಿ ಎ.ಸಿ, ಬೆಡ್ ಗಳು ಹಾಗೂ ಇನ್ನಿತರ ಐಶಾರಾಮಿ ಸೌಲಭ್ಯಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಬಾರ್ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಸಿಬಂದಿಗಳ ವಿರುದ್ಧ ಪ್ರಕರಣ ದಾಖಲು‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

Comments are closed.