ಕರ್ನಾಟಕ

ರಾಷ್ಟ್ರಕವಿ ಕುವೆಂಪು ಸೊಸೆ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲ

Pinterest LinkedIn Tumblr

ಬೆಂಗಳೂರು: ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರಕವಿ ಕುವೆಂಪು ಅವರ ಸೊಸೆ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ (85) ನಿಧನರಾಗಿದ್ದಾರೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಡಿ.14 ಮಂಗಳವಾರ (ಇಂದು) ಕೊನೆಯುಸಿರೆಳೆದಿದ್ದಾರೆ.

ಖ್ಯಾತ ಕವಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿಯವರು 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್‌ ಮತ್ತು ಎಂಎ ಓದುತ್ತಿದ್ದು ಪೂರ್ಣಚಂದ್ರ ತೇಜಸ್ವಿ ಅವರನ್ನು 1966ರಲ್ಲಿ ವಿವಾಹವಾಗಿದ್ದರು.

ಹೊಲಿಗೆ, ಅಂಚೆಚೀಟಿ ಸಂಗ್ರಹ, ಕ್ರೋಶ ಹಾಕುವುದು ರಾಜೇಶ್ವರಿ ಅವರ ನೆಚ್ಚಿನ ಹವ್ಯಾಸವಾಗಿತ್ತು. ರಾಜೇಶ್ವರಿ ಅವರು ಬರೆದಿರುವ ‘ನನ್ನ ತೇಜಸ್ವಿ’ ಪುಸ್ತಕ ಈವರೆಗೆ ಐದು ಮುದ್ರಣಗಳನ್ನು ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎನ್ನುವ ಅವರ ಮತ್ತೊಂದು ಪುಸ್ತಕ ಕೂಡ ಜನಪ್ರಿಯವಾಗಿದೆ.

ಮೂಡಿಗೆರೆ ತಾಲ್ಲೂಕಿನ ಕಾಫಿತೋಟ ಮತ್ತು ಮನೆ ‘ನಿರುತ್ತರ’ದಲ್ಲಿ ತೇಜಸ್ವಿ ಅವರೊಂದಿಗೆ ವಾಸವಿದ್ದರು. ತೇಜಸ್ವಿ ನಿಧನದ ನಂತರವೂ ಅಲ್ಲಿಯೇ ವಾಸವಿದ್ದ ರಾಜೇಶ್ವರಿ ಅವರು ತೇಜಸ್ವಿ ಅವರ ಕೃಷಿ, ಸಾಹಿತ್ಯ ಮೊದಲಾದ ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ವಾಸವಾಗಿದ್ದ ರಾಜೇಶ್ವರಿ, ಇಬ್ಬರು ಪುತ್ರಿಯರನ್ನು ಇಂದು ಅಗಲಿದ್ದಾರೆ. ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನ ಪುತ್ರಿ ಸುಶ್ಮಿತಾ ಅವರ ಮನೆಯಲ್ಲಿ ಸಂಜೆ 5:30ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ದೇಹದಾನ ಮಾಡಲು ಕುಟುಂಬ ನಿರ್ಧರಿಸಿದೆ ಎಂಬ ಮಾಹಿತಿ ಲಭಿಸಿದೆ.

Comments are closed.