ಆರೋಗ್ಯ

ಕುಂದಾಪುರ ಸರಕಾರಿ ಆಸ್ಪತ್ರೆ ಐ.ಸಿ.ಯು.ಗೆ ಅಮ್ಮುಂಜೆ ನಾರಾಯಣ ನಾಯಕ್-ರತ್ನಾ ನಾಯಕ್ ಸ್ಮರಣಾರ್ಥ 35 ಲಕ್ಷದ ಉಪಕರಣ ಹಸ್ತಾಂತರ

Pinterest LinkedIn Tumblr
(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ:  ಒಳ್ಳೆಯ ಐಸಿಯು ಅಗತ್ಯ. ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗಕ್ಕೆ 5 ಬೆಡ್ ಗಳ ಸುಸಜ್ಜಿತ ಐಸಿಯು ನಿರ್ಮಾಣವಾಗಿದ್ದು ಅದಕ್ಕೆ ಅಗತ್ಯವಿದ್ದ ಉಪಕರಣಗಳನ್ನು ಅಮ್ಮುಂಜೆ ನಾರಾಯಣ ನಾಯಕ್ ಅವರ ಸ್ಮರಣಾರ್ಥ ನೀಡಲಾಗಿದ್ದು ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ನೀಡಬೇಕೆನ್ನುವ ತುಡಿತ ಇವರ ಕುಟುಂಬದವರಲ್ಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಹೇಳಿದರು.
ಕುಂದಾಪುರ ಸರಕಾರಿ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದ ಐಸಿಯುವಿಗೆ ಅಮ್ಮುಂಜೆ ನಾರಾಯಣ ನಾಯಕ್-ರತ್ನಾ ನಾಯಕ್ ಅವರ ಸ್ಮರಣಾರ್ಥ ಕುಟುಂಬದವರು ನೀಡಿದ 35 ಲಕ್ಷ ರೂ.ಗಳ ಉಪಕರಣಗಳ ಹಸ್ತಾಂತರದ‌ಲ್ಲಿ ಗುರುವಾರ ಸಂಜೆ ಭಾಗವಹಿಸಿ‌ ಡಿಸಿ ಮಾತನಾಡಿದರು.
ಸಾಮಾಜಿಕ ಕಳಕಳಿಯೊಂದಿಗೆ ಅವರೇ ಮುಂದೆ ಬಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೂಲಕ ಉಪಕರಣಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ನೀಡಿರುವುದು ಶ್ಲಾಘನೀಯ. ಸರಿಯಾದ ನಿರ್ವಹಣೆ, ನುರಿತ ಸಿಬಂದಿಗಳ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆವಂತಾಗಲಿ ಎಂದರು.
ಇದೇ ಸಂದರ್ಭ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ‌ಅವರಿಗೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಶಸ್ತೃಚಿಕಿತ್ಸಕ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಆಸ್ಪತ್ರೆಯ ಇತರ ವಿಭಾಗಗಳನ್ನು ಪರಿಚಯಿಸಿ‌ದರು. ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಇದೇ ಸಂದರ್ಭ ಜಿಲ್ಲಾಧಿಕಾರಿಗಳು‌ ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಕ್ಷಯ ರೋಗ‌ ನಿಯಂತ್ರಾಣಾಧಿಕಾರಿ ಡಾ. ಚಿದಾನಂದ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಶಸ್ತೃಚಿಕಿತ್ಸಕ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ದಾನಿಗಳ ಕುಟುಂಬಿಕರಾದ ಅಮ್ಮುಂಜೆ ನಿತ್ಯಾನಂದ ನಾಯಕ್, ಡಾ. ಸುಖಾನಂದ ಶೆಣೈ, ಶೋಭಾ ಶೆಣೈ, ತಹಶೀಲ್ದಾರ್  ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಆಸ್ಪತ್ರೆಯ ಪಿಜಿಶಿಯನ್ ಡಾ. ನಾಗೇಶ್, ಅರವಳಿಕೆ ತಜ್ಞ ಡಾ. ವಿಜಯಶಂಕರ್, ಮಕ್ಕಳ ತಜ್ಞೆ ಸುಜಾತಾ ಬಿ.ಟಿ.,  ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ ಟಿ.ಆರ್. ಉಪಸ್ಥಿತರಿದ್ದರು.
ಆಸ್ಪತ್ರೆಯ ಶ್ರೂಶೂಷಕಿ ವೀಣಾ ಸ್ವಾಗತಿಸಿ, ಕೌನ್ಸಿಲರ್ ವೀಣಾ ವಂದಿಸಿದರು.

Comments are closed.