ಕರಾವಳಿ

ಜನನ ಮತ್ತು ಮರಣ ಪ್ರಮಾಣಪತ್ರ ನೋಂದಣಿ ಕಾಯ್ದೆ ತಿದ್ದುಪಡಿಗೆ ವಿರೋಧ: ಕುಂದಾಪುರದಲ್ಲಿ ವಕೀಲರ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಜನನ ಮತ್ತು ಮರಣಗಳ ನೋಂದಣಿ ಕಾನೂನಿನಡಿ ಬರುವ ಪ್ರಕರಣಗಳ ದಾಖಲೆ, ವಿಚಾರಣೆ ಮತ್ತು ಇತ್ಯರ್ಥಪಡಿಸುವ ಅಧಿಕಾರವನ್ನು ಜೆಎಮ್‌ಎಫ್‌ಸಿ ನ್ಯಾಯಾಲಯಗಳಿಂದ ಕಂದಾಯ ಉಪವಿಭಾಗಾಧಿಕಾರಿ ಕಚೇರಿಗೆ ವರ್ಗಾಯಿಸಿರುವ ಆದೇಶವನ್ನು ರಾಜ್ಯ ಹಿಂಪಡೆಯಬೇಕು ಹಾಗೂ ಹಿಂದಿನ ವ್ಯವಸ್ಥೆ ಮುಂದುವರಿಸಬೇಕೆಂದು ಆಗ್ರಹಿಸಿ ಕುಂದಾಪುರ ವಕೀಲರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅವರು ಮಾತನಾಡಿ, ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತದೆ. ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗಿತ್ತು. ಆದರೆ ಈಗ ಸರ್ಕಾರದ ಸುತ್ತೋಲೆಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗಲಿದ್ದು ಇದು ಅಸಾಂವಿಧಾನಿಕ ನಿರ್ಧಾರ ಎಂದರು.

ಜನನ ಮತ್ತು ಮರಣ ಪ್ರಮಾಣ ಪತ್ರಗಳ ಪ್ರಕರಣಗಳ ವಿಚಾರಣೆಯನ್ನು ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೆ ನೀಡಿರುವ ಅಧಿಸೂಚನೆಯನ್ನು ಹಿಂದಕ್ಕೆ ಪಡೆದು, ಮೊದಲಿನಂತೆ ಜೆಎಮ್‌ಎಫ್‌ಸಿ ನ್ಯಾಯಾಲಯಗಳಿಗೆ ನೀಡಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಅಧಿಸೂಚನೆ ಹಿಂಪಡೆಯದಿದ್ದಲ್ಲಿ ಅನಿರ್ಧಿಷ್ಟ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಜೊತೆ ಕಾರ್ಯದರ್ಶಿ ರಿತೇಶ್ ಬಿ ಹಾಗೂ ವಕೀಲರ ಸಂಘದ ಹಿರಿಯ-ಕಿರಿಯ-ಮಹಿಳಾ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Comments are closed.