ಕರ್ನಾಟಕ

ರಾಹುಲ್ ಗಾಂಧಿಗೆ ಲಿಂಗಧಾರಣೆ ದೀಕ್ಷೆ: ‘ಇವರೇ ಮುಂದಿನ ಪ್ರಧಾನಿ’ ಎಂದ ಸ್ವಾಮೀಜಿ ಮಾತಿಗೆ ಅಡ್ಡಬಂದ ಮುರುಘಾ ಶ್ರೀ

Pinterest LinkedIn Tumblr

ಚಿತ್ರದುರ್ಗ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಬುಧವಾರ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದರು.

ರಾಹುಲ್ ಗಾಂಧಿಗೆ ಲಿಂಗಧಾರಣೆ ದೀಕ್ಷೆ
ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಹಾವೇರಿ ಹೊಸಮಠದ ಸ್ವಾಮೀಜಿ ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿದರು.

ಸಿದ್ದರಾಮೋತ್ಸವಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರೊಂದಿಗೆ ಮುರುಘಾ ಮಠಕ್ಕೆ ಭೇಟಿ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಹಲವು ಮಠಗಳ ಮಠಾಧೀಶರು ಆಗಮಿಸಿದ್ದರು. ಹಾವೇರಿ ಹೊಸಮಠದ ಶ್ರೀಗಳು ಮಾತನಾಡುವಾಗ, ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿಯಾಗುತ್ತಾರೆ ಎಂದರು. ಆಗ ಮುರುಘಾ ಶ್ರೀಗಳು ಮಧ್ಯಪ್ರವೇಶಿಸಿ ತಡೆದು, ನಮ್ಮ ಮಠಕ್ಕೆ ಯಾರೇ ಭೇಟಿ ನೀಡಿದರೂ ಅವರಿಗೆ ಆಶೀರ್ವಾದ ನೀಡುತ್ತೇವೆ ಎಂದು ಹೇಳಿದ್ದಾರೆ.

ಬಳಿಕ ರಾಹುಲ್ ಗಾಂಧಿ ಮಾತನಾಡಿ, ನಾನು ಇತ್ತೀಚೆಗೆ ಬಸವಣ್ಣನವರ ಬಗ್ಗೆ ಓದುತ್ತಿದ್ದೇನೆ. ಅವರ ತತ್ವಗಳನ್ನು ಅನುಸರಿಸುತ್ತಿದ್ದೇನೆ. ಹಾಗಾಗಿ, ಇಲ್ಲಿಗೆ ಬಂದಿರುವುದು ನಿಜವಾದ ಗೌರವ ಅನ್ನಿಸಿದೆ. ಇಷ್ಟಲಿಂಗ ಮತ್ತು ಶಿವಯೋಗದ ಬಗ್ಗೆ ಸ್ವಲ್ಪ ಹೆಚ್ಚು ವಿವರವಾಗಿ ಕಲಿಸುವ ಯಾರನ್ನಾದರೂ ನೀವು ನನಗೆ ಕಳುಹಿಸಿದರೆ, ಬಹುಶಃ ಅದರಿಂದ ನಾನು ಪ್ರಯೋಜನ ಪಡೆಯಬಹುದು ಎಂದರು.

ರಾಹುಲ್ ಗಾಂಧಿಯವರಿಗೆ ಮುರುಘಾ ಶ್ರೀಗಳು ಹಣೆಗೆ ವಿಭೂತಿ ಹಚ್ಚಿ ಲಿಂಗಧಾರಣೆ ಮಾಡಿ ಲಿಂಗದೀಕ್ಷೆ ನೀಡಿದರು. ಮಠದ ಕರ್ತೃ ಮುರಿಗಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಪುಷ್ಪಾರ್ಚನೆ ಮಾಡಿದ ರಾಹುಲ್ ಕೆಲ ಸಮಯ ಧ್ಯಾನದಲ್ಲಿ ನಿರತರಾದರು.

Comments are closed.