ಆರೋಗ್ಯ

ಕುಂದಾಪುರ ಶ್ರೀ ನಾರಾಯಣ ಗುರು ಯುವಕ‌ಮಂಡಲ: ಸ್ವಯಂ ಪ್ರೇರಿತ ಬ್ರಹತ್ ಸಾರ್ವಜನಿಕ ರಕ್ತದಾನ ಶಿಬಿರ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇವರ ಮಾರ್ಗದರ್ಶನದಲ್ಲಿ ಶ್ರೀ ನಾರಾಯಣ ಗುರು ಯುವಕ‌ಮಂಡಲ ಕುಂದಾಪುರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ರಕ್ತನಿಧಿ ಕೇಂದ್ರ ಇವರ ಜಂಟಿ ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ಬ್ರಹತ್ ಸಾರ್ವಜನಿಕ ರಕ್ತದಾನ ಶಿಬಿರವು ಭಾನುವಾರ ಕುಂದಾಪುರದ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರುಗಿತು.

ಸಭಾ ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಅಧ್ಯಕ್ಷ ಎಸ್. ಜಯಕರ್ ಶೆಟ್ಟಿ ಉದ್ಘಾಟಿಸಿದರು.

ಉಡುಪಿ ಜಿಲ್ಲೆ ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ. ಪ್ರೇಮಾನಂದ ಕೆ. ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ‌ ಎರಡು ಪ್ರಮುಖ ರಕ್ತ ನಿಧಿ ಕೇಂದ್ರಗಳಿದೆ. ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ನಡೆಸುತ್ತಿರುವ ರಕ್ತದಾನ ಕೇಂದ್ರ ರಕ್ತವನ್ನು ಸಂಗ್ರಹಿಸಿ ಜಿಲ್ಲೆಯ ವಿವಿದೆಡೆ ಅಗತ್ಯವಿರುವವರಿಗೆ ಪೂರೈಸಲಾಗುತ್ತದೆ. ತಿಂಗಳಿಗೆ 500 ಯುನಿಟ್ ರಕ್ತದ ಅಗತ್ಯವಿದ್ದು ಕೋವಿಡ್ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ಕಡಿಮೆಯಾಗುತ್ತಿರುವುದರಿಂದ ರಕ್ತದ ಅಭಾವ ಕಂಡುಬರುತ್ತಿದೆ. ರಕ್ತದಾನದಲ್ಲಿ ಇದೀಗಾ ವೈಜ್ಞಾನಿಕ ಮಾದರಿ‌ ಕೂಡ‌ ಬಂದಿದೆ.ರಕ್ತದಲ್ಲಿ ಯಾವ ಅಂಶ ಯಾರಿಗೇ ಬೇಕೋ ಅದನ್ನು ಬೇರ್ಪಡಿಸಿ ನೀಡುವ ತಾಂತ್ರಿಕತೆ ಬಂದಿದೆ. ಒಬ್ಬ ವ್ಯಕ್ತಿ 1 ಯುನಿಟ್ ರಕ್ತದಾನ ಮಾಡಿದರೆ ವಿಂಗಡನೆ ಮಾಡಿ 4 ಜನರಿಗೆ ನೀಡಬಹುದು. ಪ್ರತಿ‌ಮೂರು ತಿಂಗಳಿಗೊಮ್ಮೆ ರಕ್ತ ದಾನ ಮಾಡಲು ಒಬ್ಬ ವ್ಯಕ್ತಿ ಅರ್ಹನಾಗಿರುತ್ತಾನೆ. ಈ ನಿಟ್ಟಿನಲ್ಲಿ‌ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸ್ವಯಂಪ್ರೇರಿತ ರಕ್ತದಾನದಲ್ಲಿ ಭಾಗಿಯಾಗುವ ಮೂಲಕ ಜೀವ ಉಳಿಸುವ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನ ಜೀವ ಉಳಿಸುವ ಜೊತೆಗೆ ಸಂಬಂಧಗಳನ್ನು, ಸ್ನೇಹವನ್ನು ಬೆಸೆಯುವ ಕೊಂಡಿಯಾಗಿದೆ. ಕರಾವಳಿ ಭಾಗದಲ್ಲಿ ರಕ್ತದಾನದ ಬಗ್ಗೆ ಕೆಲವು ಗೊಂದಲಗಳಿದ್ದು ನಾಡೋಜ ಡಾ. ಜಿ. ಶಂಕರ್ ನೇತೃತ್ವದಲ್ಲಿ ಹಳ್ಳಿಹಳ್ಳಿಗಳಲ್ಲೂ ಸಂಘಟನೆ ಮೂಲಕವಾಗಿ ರಕ್ತದಾನದ ಮಾಹಿತಿ ನೀಡುವ ಕಾರ್ಯ ನಡೆದಿದ್ದು ಬಾರೀ ಸಂಚಲನವಾಗಿ ಯುವಕರು, ಮಹಿಳೆಯರು ರಕ್ತದಾನದಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಕುಂದಾಪುರ ಭಾಗದಲ್ಲಿ ರಕ್ತದ ಕೊರತೆ ನಿವಾರಣೆಗೆ ರಕ್ತದಾನ ಶಿಬಿರವನ್ನು ಒಂದು ಕ್ರಾಂತಿಯಾಗಿ ಮಾಡಬೇಕು ಎಂದರು.

ಈ ವೇಳೆ ಇತ್ತೀಚೆಗೆ ಬೀಜಾಡಿ ರಾ.ಹೆದ್ದಾರಿ ಬಳಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ನಡೆಯಬಹುದಾಗಿದ್ದ ಕಳ್ಳತನ ಪ್ರಕರಣವನ್ನು ತಡೆಯಲು ಎದೆಗಾರಿಕೆ ತೋರಿದ 18 ವರ್ಷದ ಯುವಕ ಬೀಜಾಡಿಯ ಅಜಯ್ ಪೂಜಾರಿ ಅವರನ್ನು ಗೌರವಿಸಲಾಯಿತು.

ಕುಂದಾಪುರ ಶ್ರೀ ನಾರಾಯಣಗುರು ಸಾಂಸ್ಕೃತಿಕ ಮತ್ತು ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ರಂಗನಹಿತ್ಲು, ಪ್ರಧಾನ ಕಾರ್ಯದರ್ಶಿ ಬಸವ ಪೂಜಾರಿ ಹೊದ್ರಾಳಿ, ವಿಜಯ್ ಎಸ್. ಪೂಜಾರಿ ಮೊದಲಾದವರು ಇದ್ದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಜೊತೆ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Comments are closed.