ಆರೋಗ್ಯ

ಟ್ರಾವೆಲ್‌ ಹಿಸ್ಟರಿ ಇಲ್ಲದ ಉಡುಪಿಯ ಇಬ್ಬರಲ್ಲಿ ಓಮಿಕ್ರಾನ್ ಸೋಂಕು ಪತ್ತೆ

Pinterest LinkedIn Tumblr

ಉಡುಪಿ: ಟ್ರಾವೆಲ್‌ ಹಿಸ್ಟರಿ ಹೊಂದಿರದ ಉಡುಪಿ ನಗರ ವ್ಯಾಪ್ತಿಯ ಇಬ್ಬರಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಜನರು ನಿರ್ಲಕ್ಷ್ಯ ತೋರದೆ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಜಿಲ್ಲಾಡಳಿತದ ಪರವಾಗಿ ಡಿಸಿ ಕೂರ್ಮಾರಾವ್ ಮನವಿ ಮಾಡಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಸಮಗ್ರ ಮಾಹಿತಿ ನೀಡಿ, ಒಮಿಕ್ರಾನ್‌ ಸೋಂಕಿತರಿಬ್ಬರೂ ಒಂದೇ ಕುಟುಂಬದವರು. 73 ವರ್ಷದ ಮಹಿಳೆ ಮತ್ತು 82 ವರ್ಷದ ಪುರುಷ. ಇಬ್ಬರೂ ಆರೋಗ್ಯವಾಗಿದ್ದು ಕೋವಿಡ್‌ ಲಕ್ಷಣಗಳಿಲ್ಲ. ಇಬ್ಬರಲ್ಲೂ ವಯೋ ಸಹಜ ಕಾಯಿಲೆಗಳಿದ್ದು, ಮಹಿಳೆಗೆ ಕ್ಯಾನ್ಸರ್‌ ಇದೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲಿರುವ 11 ವರ್ಷದ ವಿದ್ಯಾರ್ಥಿ ಬೆಂಗಳೂರಿನಲ್ಲಿರುವ ಶಾಲೆಗೆ ಹೋಗ ಬೇಕಿರುವುದರಿಂದ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ವಿದ್ಯಾರ್ಥಿಗೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಮೇರೆಗೆ ಕುಟುಂಬ ಸದಸ್ಯರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕುಟುಂಬದ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ನಿರ್ದಿಷ್ಟ ಮಾದರಿಗಳನ್ನು ಓಮಿಕ್ರಾನ್ ಪರೀಕ್ಷೆಗೆ ಕಳುಹಿಸಿದ್ದು, ಡಿ. 2ಕ್ಕೆ ಫ‌ಲಿತಾಂಶ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ತತ್‌ಕ್ಷಣ ಕುಟುಂಬದ ಸದಸ್ಯರು ಮತ್ತು ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಆಧರಿಸಿ ಆರೋಗ್ಯ ಇಲಾಖೆ ಸರ್ವೇಕ್ಷಣಾ ತಂಡ ಪರಿಶೀಲನೆ ಆರಂಭಿಸಿ 2,700 ಮಂದಿಯನ್ನು ಪರೀಕ್ಷೆ ಗೊಳಪಡಿಸಲಾಗಿದ್ದು, ಒಬ್ಬರಿಗೆ ಮಾತ್ರ ಕೋವಿಡ್‌ ಸೋಂಕು ಪತ್ತೆಯಾಗಿದೆ ಎಂದರು.

ಟ್ರಾವೆಲ್‌ ಹಿಸ್ಟರಿ ಇಲ್ಲದೆ ಓಮಿಕ್ರಾನ್ ಹೇಗೆ ತಗಲಿರಬಹುದು ಎಂಬ ಸಾಧ್ಯತೆ ಬಗ್ಗೆ ತಜ್ಞರಿಂದ ವಿಶ್ಲೇಷಣೆ ನಡೆಯುತ್ತಿದೆ. ಹೊರಗಿನಿಂದ ಬಂದವರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ರೂಪಾಂತರಿ ಓಮಿಕ್ರಾನ್ ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಜಿಲ್ಲೆಯಿಂದ ಇದುವರೆಗೆ ಒಟ್ಟು 167 ಮಾದರಿಗಳನ್ನು ಕಳುಹಿಸಿಕೊಡಲಾಗಿದ್ದು, 33 ವರದಿಗಳು ಬಂದಿವೆ. ಇದರಲ್ಲಿ ಎರಡು ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದೆ. ಓಮಿಕ್ರಾನ್ ಬಗ್ಗೆ ಜನರು ಭಯ ಪಡುವ ಅಗತ್ಯವಿಲ್ಲ, ಕೋವಿಡ್‌ ಮಾರ್ಗಸೂಚಿ ತಪ್ಪದೆ ಪಾಲಿಸಬೇಕು. ಮದುವೆ ಶುಭ ಸಮಾರಂಭ, ಸರಕಾರಿ ಕಾರ್ಯಕ್ರಮ, ಸಿನೆಮಾ ಮಂದಿರ, ಹೆಚ್ಚು ಜನ ಸೇರುವ ಧಾರ್ಮಿಕ ಸ್ಥಳ, ಉತ್ಸವಗಳಲ್ಲಿ ಜನರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೈರಿಸ್ಕ್ ದೇಶದಿಂದ ಬಂದವರು 21 ಮಂದಿ
ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಸಂಪೂರ್ಣ ಇಳಿಕೆಯಾಗುತ್ತಿದ್ದು, ಕಳೆದ 14 ದಿನಗಳಲ್ಲಿ ಸರಾಸರಿ ಪಾಸಿಟಿವಿಟಿ ದರ ಶೇ 0.09, ಕಳೆದ ಏಳು ದಿನಗಳಲ್ಲಿ ಶೇ. 0.11 ಇದೆ. ಕಳೆದ ಒಂದು ವಾರದಲ್ಲಿ ದಿನಕ್ಕೆ 2,713ರಂತೆ ಒಟ್ಟು 18,995 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಮುಂಬಯಿಯಿಂದ ಕಳೆದ ಒಂದು ವಾರದಲ್ಲಿ 370, ಒಂದು ತಿಂಗಳಲ್ಲಿ 565 ಮಂದಿ ಆಗಮಿಸಿದ್ದಾರೆ. ಕೇರಳದಿಂದ ಕಳೆದ ವಾರದಲ್ಲಿ 95, ತಿಂಗಳಲ್ಲಿ 239 ಮಂದಿ ಜಿಲ್ಲೆಗೆ ಬಂದಿದ್ದಾರೆ. ಎಲ್ಲರೂ ಕೋವಿಡ್‌ ನೆಗೆಟಿವ್‌ ವರದಿ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕಳೆದ 7 ದಿನಗಳಲ್ಲಿ ಉಡುಪಿಗೆ ಆಗಮಿಸಿದವರ ಸಂಖ್ಯೆ 43, ಒಂದು ತಿಂಗಳಲ್ಲಿ 61 ಮಂದಿ ಬಂದಿದ್ದು, ಎಲ್ಲರನ್ನು ಪತ್ತೆ ಮಾಡಿ ಪರೀಕ್ಷೆಗೊಳಪಡಿಸಲಾಗಿದೆ. ಹೈರಿಸ್ಕ್ ದೇಶದಿಂದ ಬಂದ 21 ಪ್ರಯಾಣಿಕರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ 34 ಇದ್ದು, 7 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ 3 ಮಂದಿ ಇದ್ದು, ಇಬ್ಬರು ವೆಂಟಿಲೇಟರ್‌ನಲ್ಲಿದ್ದಾರೆ ಎಂದು ತಿಳಿಸಿದರು.

ಜಿ.ಪಂ. ಸಿಇಒ ಡಾ. ನವೀನ್‌ ಭಟ್‌, ಎಡಿಸಿ ಬಾಲಕೃಷ್ಣಪ್ಪ, ಡಿಎಚ್‌ಒ ಡಾ. ನಾಗಭೂಷಣ ಉಡುಪ, ಕೋವಿಡ್‌ ನೋಡಲ್‌ ಅಧಿಕಾರಿ ಡಾ. ಪ್ರಶಾಂತ್‌ ಭಟ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

 

Comments are closed.