ಉಡುಪಿ: ಕಳೆದ ತಿಂಗಳು ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮೂಲದ ದಂಪತಿ ಸಹಿತ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಯಿ ಝಿಂದಗಿ ನಿವಾಸಿಗಳಾದ ಆಸಿಫ್ ಅಸ್ಫಾಕ್ ಶೇಖ್ (32), ಆತನ ಪತ್ನಿ ನಾಝಿಯಾ (32), ಕುಂಬಾರಿ ಗ್ರಾಮದ ಸೌದಾಗರ್ ದಿಲೀಪ್ ಗೋಂದ್ ಕರ್(35) ಬಂಧಿತ ಆರೋಪಿಗಳು.
ನ.23ರಂದು ಇಬ್ಬರು ಬುರ್ಖಾ ಧರಿಸಿದ ಮಹಿಳೆಯವರು, ಓರ್ವ ಗಂಡಸು ಮಗುವಿನೊಂದಿಗೆ ಗ್ರಾಹಕರ ಸೋಗಿನಲ್ಲಿ ಉಡುಪಿಯ ಸುಲ್ತಾನ್ ಗೋಲ್ಡ್ ಗೆ ಬಂದು ಒಟ್ಟು 60 ಗ್ರಾಂ ತೂಕದ 3,00,000ರೂ. ಮೌಲ್ಯದ 4 ಚಿನ್ನದ ಬಳೆಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಜ್ಯುವೆಲ್ಲರಿ ಆಸುಪಾಸಿನ ಸಿಸಿ ಟಿವಿ ಪುಟೇಜ್ ಪರಿಶೀಲನೆ ನಡೆಸಿದಾಗ, ಎಂಎಚ್-13- ಎಫ್-4599ನೆ ನಂಬರಿನ ತವೇರಾ ಕಾರನ್ನು ಕೃತ್ಯಕ್ಕೆ ಬಳಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು. ಹೀಗೆ ಆರೋಪಿಗಳ ಜಾಡು ಹಿಡಿದು ಮಹಾರಾಷ್ಟ್ರ ರಾಜ್ಯದ ಸೋಲಾಪುರಕ್ಕೆ ತೆರಳಿದ ಪೊಲೀಸರ ತಂಡ, ಡಿ.18ರಂದು ಸಂಜೆ ವೇಳೆ ಸೋಲಾಪುರದ ನಯಿ ಝಿಂದಗಿ ಎಂಬಲ್ಲಿ ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿತು.
ಆರೋಪಿಗಳನ್ನು ಡಿ.19ರಂದು ಸಂಜೆ ಠಾಣೆಗೆ ಕರೆತಂದು ಹಾಜರು ಪಡಿಸಲಾಯಿತು. ಬಂಧಿತರಿಂದ 1 ತವೇರಾ ವಾಹನ, 1 ಮೊಬೈಲ್ ಹಾಗೂ 2,99,792ರೂ. ಮೌಲ್ಯದ 4 ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್ ಆದೇಶದಂತೆ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಸುಧಾಕರ ನಾಯ್ಕ್ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್. ಎಸ್ಸೈ ವಾಸಪ್ಪ ನಾಯ್ಕ್, ಪ್ರೊಬೆಷನರಿ ಎಸ್ಸೈಗಳಾದ ಪ್ರಸಾದ, ಸುಹಾಸ್, ಸಿಬ್ಬಂದಿ ಸತೀಶ್, ಸಂತೋಷ್ ರಾಠೋಡ್, ಗಡ್ಡಯ್ಯ ಹೀರೆಮಠ್, ಮಲ್ಲಯ್ಯ, ನಾಗರತ್ನ, ಬಾಲಕೃಷ್ಣ, ಸುಷ್ಮ, ರಿಯಾಝ್ ಅಹ್ಮದ್, ಲೋಕೇಶ್, ಜೀವನ್ ಕುಮಾರ್, ಆನಂದ ಗಾಣಿಗ, ಹೇಮಂತ್, ಶಿವಕುಮಾರ್ ಹಾಗೂ ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.
Comments are closed.