ಆರೋಗ್ಯ

ಕುಂಭಾಸಿಯಲ್ಲಿ ಆಯುರ್ವೇದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿದ ಸಚಿವ ಕೋಟ

Pinterest LinkedIn Tumblr

ಕುಂದಾಪುರ: ಆಯುರ್ವೇದಕ್ಕೆ ವಿಶಿಷ್ಟವಾದ ಮಾನ್ಯತೆಯಿದೆ. ನಮ್ಮ ಬದುಕನ್ನು ಆವರಿಸಿಕೊಂಡಿರುವಂತಹ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳ ನಡುವೆ ಆಯುರ್ವೇದ ಎನ್ನುವುದು ಬಹುದೊಡ್ಡ ವ್ಯವಸ್ಥೆಯಾಗಿ ಉಳಿದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಆಯುಷ್ ವಿಭಾಗವನ್ನು ಹೆಚ್ಚು ಮಾಡುವುದರ ಜೊತೆಯಲ್ಲಿ ಆಯುರ್ವೇದಕ್ಕೆ ಹೆಚ್ಚು ಒತ್ತು ನೀಡಬೇಕು. ಆಯುರ್ವೇದವನ್ನು ಬೆಳಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಹಲವು ಯೋಚನೆ ಮತ್ತು ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಈಗಲ್ಸ್ ಕ್ರಿಕೆಟ್ ಕ್ಲಬ್ ಮತ್ತು ಕುಂದಾಪುರ ರೂರಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ
ಕೋಟೇಶ್ವರ ಇವರ ಸಹಯೋಗದಲ್ಲಿ ಕುಂಭಾಸಿ ಗ್ರಾಮ ಪಂಚಾಯತ್ ಪ್ರಾಯೋಜಕತ್ವದಲ್ಲಿ ಕುಂಭಾಸಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಆಯುರ್ವೇದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಸಂದರ್ಭದಲ್ಲಿ ವ್ಯಾಕ್ಸಿನ್ ಬರುವ ಮೊದಲು ಆಯುರ್ವೇದ ಮತ್ತು ಆಯುಷ್‍ಗಳಿಗೆ ಸಂಬಂದಪಟ್ಟ ಮದ್ದುಗಳನ್ನು ಸೇವಿಸಿ ಕೊರೊನಾ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದೇವೆ. ಆದರ ಪರಿಣಾಮದಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗಿರುವುದನ್ನು ವೈದ್ಯಕೀಯ ಕ್ಷೇತ್ರವೇ ಒಪ್ಪಿಕೊಂಡಿರುವುದು ಸತ್ಯವಾಗಿದೆ. ಬೇರೆ ಬೇರೆ ಮೆಡಿಕಲ್ ವಿಭಾಗದಲ್ಲಿ ಗುಣಪಡಿಸಲಾಗದ ಕಾಯಿಲೆಗಳನ್ನು ಆಯುರ್ವೇದದಲ್ಲಿ ಗುಣಪಡಿಸಿದ ಅದೆಷ್ಟೋ ಉದಾಹರಣೆಗಳಿವೆ. ಈ ಕಾರಣದಿಂದ ಆಯುರ್ವೇದಕ್ಕೆ ಮತ್ತಷ್ಟು ಶಕ್ತಿ ನೀಡಬೇಕು ಹಾಗೂ ಅಯುಷ್‍ಗೆ ಹೆಚ್ಚಿನ ಅವಕಾಶಗಳು ಸಿಗುವಂತಾಗಬೇಕು. ಇತಂಹ ಪವಿತ್ರವಾದ ಆಯುರ್ವೇದ ಚಿಕಿತ್ಸಾ ಶಿಬಿರ ಹಮ್ಮಿಕೊಂಡ ಸಂಘಟನೆಗಳ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಕುಂಭಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್
ರಾವ್ ಬಲೂನ್‍ಗಳನ್ನು ಆಗಸಕ್ಕೆ ಹಾರಿ ಬಿಡುವುದರ ಮೂಲಕ ವೈದ್ಯಕೀಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ವೇಳೆ ಕುಂದಾಪುರ ರೂರಲ್ಆ ಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಪ್ರಾಂಶುಪಾಲ ಡಾ.ಶ್ರೀ.ಪ್ರಸನ್ನ ಐತಾಳ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಇವರನ್ನು ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ತೆಕ್ಕಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಶ್ರೀ ಮೂಕಾಂಬಿಕಾ ತಾಲೂಕುಮಹಿಳಾ ಒಕ್ಕೂಟ ಅಧ್ಯಕ್ಷೆ ರಾಧಾದಾಸ್, ಕುಂಭಾಸಿ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ರಾವ್, ಪಿಡಿಒ ಜಯರಾಮ್ ಶೆಟ್ಟಿ, ಸದಸ್ಯ ಸುನೀಲ್ ಶೆಟ್ಟಿ, ಈಗಲ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸುನೀಲ್, ಸಂಘಟಕ ಅರ್ಜುನ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.

ಪ್ರದೀಪ್ ಆಚಾರ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಪ್ರಸನ್ನ ಐತಾಳ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ತೀಕ್ ಕಾಂಚನ್ ಪ್ರಾರ್ಥಿಸಿದರು. ಸಂದೇಶ್ ಶೆಟ್ಟಿ ಸಲ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಯತೀಶ್ ವಂದಿಸಿದರು.

Comments are closed.