ಆರೋಗ್ಯ

ಕೋವಿಡ್-19: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದಿದ್ರೆ ದಂಡ ಖಚಿತ-ಉಡುಪಿ ಡಿಸಿ ಜಿ. ಜಗದೀಶ್

Pinterest LinkedIn Tumblr

ಉಡುಪಿ: ಹೆಚ್ಚುತ್ತಿರುವ ಕೋರೋನಾ ಸೋಂಕಿನ ಹಿನ್ನೆಲೆ ಮಾ.15 (ಸೋಮವಾರ) ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತ್ರತ್ವದಲ್ಲಿ ಉಪಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿಯವರ ಉಪಸ್ಥಿತಿಯಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಅಧೀಕ್ಷಕರ ಪಾಲ್ಗೊಳ್ಳುವಿಕೆಯೊಂದಿಗೆ ಕೋವಿಡ್-19ರ ಟಾಸ್ಕ್ ಫೋರ್ಸ್ ಸಮಿತಿಯ ವಿಡಿಯೋ ಸಂವಾದ ಸಭೆ ನಡೆದಿದ್ದು ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕೆಳಗಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.

 

ನಿಯಮಗಳೇನು…?
ಮಾಸ್ಕ್ ಕಡ್ಡಾಯ….
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಬಸ್‌ಗಳು/ಟ್ರೇನ್‌‌ಗಳು/ಸಿನಿಮಾ ಥಿಯೇಟರ್‌ಗಳು/ಮಾಲ್‌ಗಳು/ಮಾರುಕಟ್ಟೆಗಳು ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡುವಿಕೆಗೆ ಆಧ್ಯತೆ. ಈ ಕ್ರಮಗಳಿಗೆ ತಪ್ಪಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಸಭೆ ಸಮಾರಂಭದ ಬಗ್ಗೆ…
ಸಭೆ/ಸಮಾರಂಭಗಳಲ್ಲಿ ಜನರ ಪಾಲ್ಗೊಳ್ಳುವಿಕೆಯ ಬಗ್ಗೆ ಇತ್ತೀಚಿನ ಸರಕಾರದ ಆದೇಶವನ್ನು ಪಾಲಿಸತಕ್ಕದ್ದು. ತಪ್ಪಿದ್ದಲ್ಲಿ ದಂಡ/ಕಾನೂನು ಕ್ರಮ ತೆಗೆದುಕೊಳ್ಳುವುದು.

ಆರ್‌ಟಿಪಿಸಿಆರ್‌ ವರದಿ ಕಡ್ಡಾಯ…
ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಜಿಲ್ಲೆಗೆ ಬರುವ ಪ್ರಯಾಣಿಕರಿಗೆ 72ಗಂಟೆಗಳೊಳಗೆ ಮಾಡಿದ ಆರ್‌ಟಿಪಿಸಿಆರ್‌ ವರದಿ ಕಡ್ಡಾಯ.

ಇವರಿಗೆ ಕೋವಿಡ್ ಪರೀಕ್ಷೆ ಕಡ್ದಾಯ…
ಎಲ್ಲಾ ಪಾಸಿಟಿವ್ ಪ್ರಕರಣಗಳ ಸಂಪರ್ಕಿಗಳು, ಕೋವಿಡ್ ಸೋಂಕಿನ ಲಕ್ಷಣ ಇರುವವರು, ಬೇರೆ ರಾಜ್ಯಗಳಿಂದ ಪ್ರಯಾಣಿಸಿದವರು, ಹಾಗೂ Vulnerable ಜನರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ.

60ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ 45 ರಿಂದ 59 ವರ್ಷಗಳೊಳಗಿನ ಇತರೆ ಖಾಯಿಲೆ ಹೊಂದಿರುವವರು (Vulnerable) ಆದ್ಯತೆಯ ಮೇರೆಗೆ ಕೋವಿಡ್-19 ಲಸಿಕೆಯ ಎರಡು ಡೋಸ್‌ನ್ನು ತಮ್ಮ ಹತ್ತಿರದ ಸರ್ಕಾರಿ/ ಖಾಸಗಿ ಆಸ್ಪತ್ರೆಯಲ್ಲಿ ಪಡೆಯುವಂತೆ ಸೂಚಿಸಲಾಯಿತು.

ಜಿಲ್ಲಾಧಿಕಾರಿಗಳಿಗೆ ಸ್ವಾಯತ್ತೆ…
ಕೋವಿಡ್-19 ಎರಡನೇ ಅಲೆಯನ್ನು ತಪ್ಪಿಸಲು ಅಗತ್ಯ ಕ್ರಮ ಜರುಗಿಸುವರೇ Epidamic Act 2020ರಡಿಯಲ್ಲಿ ಪ್ರದತ್ತ ಯಾವುದೇ ಅಧಿಕಾರವನ್ನು ಚಲಾಯಿಸಲು ಜಿಲ್ಲಾಧಿಕಾರಿಯವರಿಗೆ ಸಂಪೂರ್ಣ ಸ್ವಾಯತ್ತೆ ನೀಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದರು.

ಸಂಪೂರ್ಣ ಸಭೆಯಲ್ಲಿ ಕೋವಿಡ್-19ರ ಪ್ರಸಕ್ತ ವಿದ್ಯಮಾನದ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು ಹಾಗೂ ಕೆಲವು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುವುದು ಪ್ರಸ್ತುತ ವಿದ್ಯಾಮಾನದ ಹಿನ್ನೆಲೆಯಲ್ಲಿ ಅನಿವಾರ್ಯ ಎಂಬ ಅಭಿಪ್ರಾಯ ಮೂಡಿಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.