ಕರಾವಳಿ

ಸಾಮಾಜಿಕ ಕಳಕಳಿಯಿಲ್ಲದೇ ವಿಪಕ್ಷ ಕಾಂಗ್ರೆಸ್ ಪಲಾಯನ: ಕುಂದಾಪುರ ಪುರಸಭೆ ಬಿಜೆಪಿ ಸದಸ್ಯರ ಆರೋಪ

Pinterest LinkedIn Tumblr

ಕುಂದಾಪುರ: ಕುಂದಾಪುರ ಪುರಸಭೆಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರದಂದು ಕುಂದಾಪುರ ಪುರಸಭಾ ವ್ಯಾಪ್ತಿಯ ಆಸ್ತಿ ತೆರಿಗೆ ಕುರಿತ ವಿಶೇಷ ಸಭೆ ಜರುಗಿತು. ಮೊದಲಿಗೆ ಕಟ್ಟಡಗಳಿಗೆ ಚಾಲ್ತಿ ದರದ ತೆರಿಗೆ ಹಾಗೂ ಪರಿಷ್ಕೃತ ತೆರಿಗೆ ವಿಚಾರದ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸಭೆಗೆ ಮಾಹಿತಿ ನೀಡಿದರು.

ವಿಪಕ್ಷ ಕಾಂಗ್ರೆಸ್ ಗೈರು..!
ತೆರಿಗೆ ವಿಚಾರದ ವಿಶೇಷ ಸಭೆಯನ್ನು ಬಹಿಷ್ಕರಿಸುವುದಾಗಿ ಅಧ್ಯಕ್ಷರಿಗೆ ಸವಿಸ್ತಾರವಾಗಿ ಪತ್ರ ಬರೆದ ವಿರೋಧ ಪಕ್ಷವಾದ ಕಾಂಗ್ರೆಸ್ ಸರ್ವ ಸದಸ್ಯರು ವಿಶೇಷ ಸಭೆಗೆ ಗೈರಾಗಿದ್ದರು.

ಸಭೆಯ ಆರಂಭದಲ್ಲಿ ಸದಸ್ಯ ಮೋಹನದಾಸ್ ಶೆಣೈ ಮಾತನಾಡಿ, ತೆರಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿ ಆ ಬಳಿಕ ಅಸಮಾಧಾಮವಿದ್ದರೆ ಸಭಾ ತ್ಯಾಗ ಮಾಡುವುದು ಬಿಟ್ಟು ಸಭೆಯಲ್ಲಿ ಚರ್ಚೆ ಆಗದಿದ್ದು ಸಭಾ ತ್ಯಾಗ ಮಾಡುವುದು ಎಷ್ಟು ಸರಿ? ಎಂದು ಹಿರಿಯ ಪುರಸಭಾ ಸದಸ್ಯ ಮೋಹನದಾಸ ಶೆಣೈ ಸಭೆಯಲ್ಲಿ ಮಾತನಾಡಿದರು‌. ತೆರಿಗೆ ಜನರ ವಿರೋಧಿಯಾಗಿ ಹೋಗಬಾರದು. ಪುರಸಭೆಗೆ ತೊಂದರೆಯಾಗದಂತೆ ತೆರಿಗೆ ಜನರಿಗೆ ಹೊರೆಯಾಗದಂತೆ ಮುಂದುವರೆಯುವುದು ಉತ್ತಮ ಎಂದು ಸಲಹೆ ನೀಡಿದರು‌.

ಪುರಸಭಾ ಸದಸ್ಯ ಗಿರೀಶ್ ದೇವಾಡಿಗ ಮಾತನಾಡಿ, ಈ ಸಭೆಗೆ ವಿರೋಧ ಪಕ್ಷದವರು ಗೈರಾಗಿರುವುದು ಬೇಸರದ ವಿಚಾರ. ಸಾರ್ವಜನಿಕರ ಬಗ್ಗೆ ಕಳಕಳಿ ಇದ್ದರೆ ಅವರು ಈ ವಿಶೇಷ ಸಭೆಗೆ ಹಾಜರಾಗಬೇಕಿತ್ತು. ವಿರೋಧ ಪಕ್ಷದವರ ಪಲಾಯನ ವಾದ ಮಾಡಿದ್ದು ಇದಕ್ಕೆ ನಮ್ಮ ವಿರೋಧವಿದೆ. ಮುಂದಿನ ಮೂರು ವರ್ಷದವರೆಗೆ ಈ ಹಿಂದಿನ ತೆರಿಗೆ ವ್ಯವಸ್ಥೆ ಮುಂದುವರಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳೋಣ ಎಂದಿದ್ದು ಮತ್ತೋರ್ವ ಸದಸ್ಯ ಪ್ರಭಾಕರ್ ಇದಕ್ಕೆ ಧ್ವನಿಗೂಡಿಸಿದರು.

ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಸಭೆ ಅಧ್ಯಕ್ಷತೆ ವಹಿಸಿದ್ದು ವೇದಿಕೆಯಲ್ಲಿ ಸ್ಥಾಯಿ ಸಮಿತಿ ಸದಸ್ಯ ಶೇಖರ್ ಪೂಜಾರಿ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.