ಆರೋಗ್ಯ

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಆಗದಿರಲು ಜನರ ಸಹಕಾರ ಬೇಕು: ಸಿಎಂ ಬಿ.ಎಸ್. ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕು‌ ಹೆಚ್ಚುತ್ತಿದ್ದು ನಮ್ಮ ಕೈಮೀರುವ ಆತಂಕವಿದ್ದು ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಆಗಬಾರದಾದರೆ ಜನರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಸರಕಾರದ ಜೊತೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಭಾನುವಾರದಂದು ಡಾಲರ್ಸ್‌ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿರುವ ಸಿಎಂ ಬಿ.ಎಸ್.ವೈ., ರಾಜ್ಯದಲ್ಲಿ ಸದ್ಯ ಲಾಕ್‌ಡೌನ್ ಆಗದೆ ಎಲ್ಲಾ ವ್ಯವಹಾರ ಯತಾಸ್ಥಿಯಲ್ಲಿರಬೇಕಾದರೆ ಜನರು ಕೋವಿಡ್ ನಿಯಮಾವಳಿ ಪಾಲಿಸಬೇಕಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಪಾಲನೆಯಾಗಬೇಕು. ಪ್ರಸ್ತುತ ಲಾಕ್ಡೌನ್, ನೈಟ್ ಕರ್ಫ್ಯೂ ಬಗ್ಗೆ ಯಾವುದೇ ಚಿಂತನೆ ಇಲ್ಲ. ಕಳೆದ ಲಾಕ್ಡೌನ್ ಪರಿಣಾಮದಿಂದಲೇ ಸಾಕಷ್ಟು ನಷ್ಟ ಆಗಿದೆ. ಆದರೆ ಈ ಬಾರಿ ಲಾಕ್ಡೌನ್ ಆಗದಿರಲು ಜನರ ಸಹಕಾರ ಅಂತಿಮ ಎಂದಿದ್ದಾರೆ.

ಈ ಬಗ್ಗೆ ನಾಳೆ‌ (ಮಾ.15) ಸಂಜೆ 5 ಗಂಟೆಗೆ ತಜ್ಞರ ಸಭೆ ಕರೆಯಲಾಗಿದ್ದು ಅಲ್ಲಿ ಮಹತ್ವದ ಚರ್ಚೆಗಳು ನಡೆಯಲಿದೆ. ಆ ಸಭೆಯಲ್ಲಿ‌ ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ ಎಷ್ಟು ಜನರು ಇರಬೇಕೆಂಬ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ರೂಪಿಸಲಾಗುತ್ತದೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚಿಸಲಾಗಿದೆ ಎಂದರು.

ಮಹಾರಾಷ್ಟ್ರದಲ್ಲೂ ಕೊರೊನಾ ಹೆಚ್ಚಾಗುತ್ತಿದೆ. ಗಡಿಗಳಲ್ಲಿಯೂ ಬಿಗಿಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಲಾಕ್‌ಡೌನ್ ಮಾಡಲು ಅವಕಾಶ ಕೊಡದಂತೆ ಕ್ರಮಕೈಗೊಳ್ಳುತ್ತೇವೆ ಎಂದರು.

Comments are closed.