ಆರೋಗ್ಯ

ಜಿಲ್ಲೆಯಲ್ಲಿ ಮೊದಲಿಗೆ 17641 ಮಂದಿಗೆ ಕೋವಿಡ್ ಲಸಿಕೆ ನೀಡಲು ಸಿದ್ದತೆ: ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 17641 ಮಂದಿಗೆ ಪ್ರಥಮ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಅವರು ಶುಕ್ರವಾರ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಗೆ 2021 ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕೋವಿಡ್19 ಲಸಿಕೆ ಸರಬರಾಜು ಆಗುವ ನಿರೀಕ್ಷೆಯಿದ್ದು, ಈ ಲಸಿಕೆಯನ್ನು ಪ್ರಾಥಮಿಕವಾಗಿ ಕರೋನಾ ವಿರುದ್ದ ಹೋರಾಡುತ್ತಿರುವ ಫ್ರಂಟ್ಲೈನ್ ವರ್ಕರ್ ಗಳಾದ ಆರೋಗ್ಯ ಕ್ಷೇತ್ರದಲ್ಲಿನ ಸಿಬ್ಬಂದಿಗೆ ನೀಡಬೇಕಾಗಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 17641 ಮಂದಿಯ ಡಾಟಾ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಲಸಿಕೆ ನೀಡಲು ಗುರುತಿಸಲಾಗಿರುವ ಪ್ರತಿಯೊಬ್ಬರಿಗೂ 2 ಡೋಶ್ ಲಸಿಕೆ ನೀಡಲು ನಿರ್ಧರಿಸಲಗದಿದು, ಲಸಿಕೆ ನೀಡುವ ಕುರಿತಂತೆ ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ, ಲಸಿಕೆ ಸಂಗ್ರಹ ಕೊಠಡಿ ಸಿದ್ದಪಡಿಸಲಾಗಿದ್ದು, ಲಸಿಕೆ ಸಾಗಾಟಕ್ಕೆ 1324 ವಾಹನಗಳನ್ನು ಗುರುತಿಸಿದ್ದು, 100 ಮಂದಿಗೆ ಒಂದು ಸ್ಥಳದಲ್ಲಿ ಲಸಿಕೆ ನೀಡಲು ನಿರ್ಧರಿಸಿದ್ದು, 342 ಸರ್ಕಾರಿ ಮತ್ತು 18 ಖಾಸಗಿ ಸ್ಥಳಗಳನ್ನು ಗುರುತಿಸಲಾಗಿದೆ, ಪ್ರತಿ ಲಸಿಕಾ ಕೇಂದ್ರದಲ್ಲಿ 5 ಮಂದಿ ಕರ್ತವ್ಯ ನಿರ್ವಹಿಸಲಿದ್ದು, ಲಸಿಕೆ ಪಡೆಯುಲು ಬರವವರಿಗೆ ನಿರೀಕ್ಷಣಾ ಕೊಟಡಿ, ಲಸಿಕೆ ನೀಡುವ ಕೊಠಡಿ ಮತ್ತು ಲಸಿಕೆ ನೀಡಿದ ನಂತರ ಅಬ್ರ್ವೇಷನ್ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಜಗದೀಶ್ ವಿವರಿಸಿದರು.

ಈಗಾಗಲೇ ಗುರುತಿಸಲಾಗಿರುವ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಲಸಿಕೆ ನೀಡುವ ಸ್ಥಳ, ಸಮಯದ ಕುರಿತು ಎಸ್.ಎಂ.ಎಸ್ ಮೂಲಕ ಸಂದೇಶ ಬರಲಿದ್ದು, ಇದರಲ್ಲಿ ಯಾವ ಲಸಿಕೆ ನೀಡಲಾಗುವುದು ಎಂಬ ಬಗ್ಗೆ ಸಂಪೂರ್ಣ ವಿವರ ಇರಲಿದ್ದು, ಎರಡು ಹಂತದ ಡೋಸ್ ಲಸಿಕೆ ನೀಡಿದ ಬಳಿಕ, ಅವರಿಗೆ ಲಸಿಕೆ ಪಡೆದ ಕುರಿತು ಪ್ರಮಾಣಪತ್ರ ಸಹ ವಿತರಿಸಲಾಗುವುದು ಎಂದು ಡಿಸಿ ಹೇಳಿದರು.

ಸಂಪೂರ್ಣ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಲಸಿಕೆ ನೀಡಲು ಕ್ರಮ ಕೈಗೊಂಡಿದ್ದು, ಲಸಿಕೆ ನೀಡಿದ ನಂತರ ಸಿರೆಂಜ್ ಇತ್ಯಾದಿ ತ್ಯಾಜ್ಯ ಉಪಕರಣಗಳನ್ನು ಅತ್ಯಂತ ಸುರಕ್ಷಿತವಾಗಿ ವಿಲೇವಾರಿ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ, ಲಸಿಕೆ ನೀಡಲು ಗುರುತಿಸಲಾಗಿರುವ ಕೊಠಡಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿರುವ ಬಗ್ಗೆ ಪರಿಶೀಲಿಸಲು ನೋಡೆಲ್ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಕೋವಿಡ್ ಲಸಿಕೆ ನೀಡುವ ಕುರಿತಂತೆ ಈಗಾಗಲೇ ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಿದ್ದು, ತಾಲೂಕು ಕೇಂದ್ರಗಳಲ್ಲಿ ತರಬೇತಿ ನೀಡುವ ಬಗ್ಗೆ ದಿನಾಂಕ ನಿಗಧಿಪಡಿಸಿದೆ , ಡಿಸೆಂಬರ್ ಅಂತ್ಯದ ವೇಳಗೆ ಸಂಪೂರ್ಣವಾಗಿ ಎಲ್ಲಾ ತರಬೇತಿ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಲಾಗುವುದು ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ. ಎಂ.ಜಿ.ರಾಮ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಡಿ.ಹೆಚ್.ಓ.ಡಾ.ಸುದೀರ್ ಚಂದ್ರ ಸೂಡಾ, ಆರೋಗ್ಯ ಇಲಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.