ಕರಾವಳಿ

ಕೋವಿಡ್ ನಿಯಮಾವಳಿಯಂತೆ ಸಂಪ್ರದಾಯಬದ್ಧವಾಗಿ ಆನೆಗುಡ್ಡೆ ಬ್ರಹ್ಮರಥೋತ್ಸವ ಸಂಪನ್ನ

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ಧ ಕುಂಭಾಸಿ ಶ್ರೀ ಆನೆಗುಡ್ಡೆ ವಿನಾಯಕ ದೇವರ ಬ್ರಹ್ಮರಥೋತ್ಸವವು ವೈಭವದಿಂದ ಶುಕ್ರವಾರ ನಡೆಯಿತು. ರಥೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಪತಿಯಾಗ ಸೇವೆಯೊಂದಿಗೆ ಬ್ರಹ್ಮರಥೋತ್ಸವ ನಡೆಯಿತು.

ದೇವಳದ ವತಿಯಿಂದ ಭಕ್ತರಿಗೆ ಕೋವಿಡ್ ನಿಯಮದಂತೆ ಸಾಮಾಜಿಕ ಅಂತರ ಇನ್ನಿತರ ಕ್ರಮಗಳನ್ನು ಕೈಗೊಂಡು ದೇವರ ದರ್ಶನ ಮತ್ತು ಬ್ರಹ್ಮರಥೋತ್ಸವ ವೀಕ್ಷಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದ ವೇಳೆ ಚಂಡೆ ವಾದನ, ಪಂಚವಾದ್ಯ, ಪಲ್ಲಕ್ಕಿ ಉತ್ಸವಗಳು ರಥೋತ್ಸವದ ಮೆರಗು ಹೆಚ್ಚಿಸಿದವು. ಕೋವಿಡ್-೧೯ ಮಾರ್ಗಸೂಚಿಯಂತೆ ರಥೋತ್ಸವ ನಡೆಸಲು ಹಲವಾರು ಕ್ರಮ ಕೈಗೊಂಡ ಕಾರಣದಿಂದ ಹಬ್ಬದ ಅಂಗಡಿಗಳು ಮತ್ತು ಸುಡುಮದ್ದು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೇ ಸರಳವಾಗಿ ಬ್ರಹ್ಮರಥೋತ್ಸವ ಸಂಪನ್ನಗೊಂಡಿತ್ತು.

ಪರಂಪರೆಗೆ ಒತ್ತು: ಕೊರೋನಾ ಹಿನ್ನೆಲೆ ಸರಕಾರದ ನಿಯಮಾವಳಿಯಂತೆ ಜಿಲ್ಲಾಡಳಿತ ಹಲವು ನಿಬಂಧನೆಗಳನ್ನು ಹಾಕಿತ್ತು. ಹಬ್ಬದ ಪೂರ್ವಭಾವಿಯಾಗಿ ಕಟ್ಟೆ ಪೂಜೆ ಮೊದಲಾದ ಧಾರ್ಮಿಕ ಕಾರ್ಯಗಳು ದೇವಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ನಡೆದವು. ದೇವಸ್ಥಾನದ ಒಳಗೆ ಸರತಿ ಸಾಲಿಗೆ ಅವಕಾಶ ಕಲ್ಪಿಸಲಾಗಿತ್ತು. ಸ್ವಯಂ ಸೇವಕರು, ಪೊಲೀಸರು ಸುವ್ಯವಸ್ಥೆ ಪಾಲನೆಗೆ ಸಹಕರಿಸಿದರು.

ಭಕ್ತರ ಸಂಖ್ಯೆ ಇಳಿಮುಖ, ವ್ಯಾಪಾರಿಗಳಿರಲಿಲ್ಲ: ದೇವಳದ ಪರಿಸರದ ನಿತ್ಯ ತೆರೆಯುವ ಅಂಗಡಿಗಳನ್ನು ಹೊರತುಪಡಿಸಿ ಹಬ್ಬಕ್ಕೆಂದು ಬರುವ ಯಾವುದೇ ಅಂಗಡಿಗಳಿರಲಿಲ್ಲ. ಆಟಿಕೆಗಳ ಮಳಿಗೆ, ಸಿಹಿತಿಂಡಿ ಅಂಗಡಿ, ಫ್ಯಾನ್ಸಿ, ಬಟ್ಟೆ, ಚಪ್ಪಲಿ ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದು ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಈ ಬಾರಿ ಹಬ್ಬಕ್ಕೆ ಮಾರಾಟ ಮಳಿಗೆಗಳು ಇರಲಿಲ್ಲ. ಆಗಮಿಸುವ ಭಕ್ತರು ದೇವರ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ದೃಶ್ಯ ಕಂಡುಬಂತು. ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಳಿಗ್ಗೆನಿಂದ ರಥೋತ್ಸವ ಸಂದರ್ಭ ಆಗಮಿಸಿದ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿತ್ತು.

ದೇವಳದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಪರ್ಯಾಯ ಅರ್ಚಕರ ತಂಡ, ಅರ್ಚಕ ಮಂಡಳಿ ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Comments are closed.