ಕರಾವಳಿ

ಅರಣ್ಯಾಧಿಕಾರಿಗಳಿಂದಾದ ಅನ್ಯಾಯ; 3 ದಶಕಗಳಿಂದಲೂ ನ್ಯಾಯಕ್ಕೆ ಅಲೆದಾಡುತ್ತಿರುವ ದಲಿತ ಗಿಡ್ಡಯ್ಯ

Pinterest LinkedIn Tumblr

ಉಡುಪಿ: ಹೊಳೆನರಸೀಪುರ ಡಾ|| ಅಂಬೇಡ್ಕರ್ ಕಾಲೋನಿಯ 87 ವರ್ಷದ ಗಿಡ್ಡಯ್ಯ ತಮ್ಮ ಕುಟುಂಬಕ್ಕೆ ಅರಣ್ಯ ಅಧಿಕಾರಿಗಳಿಂದಾಗಿರುವ ಅನ್ಯಾಯಗಳ ವಿರುದ್ಧ 36 ವರ್ಷಗಳಿಂದ ಸತತವಾಗಿ ಹೋರಾಡುತ್ತಲೇ ಇದ್ದಾರೆ. ರೆಂಜ್ ಫಾರೆಸ್ಟ್ ಆಫೀಸರ್ ರಿಂದ ಹಿಡಿದು ಅರಣ್ಯ ಮಂತ್ರಿಗಳವರೆಗೆ ಪ್ರತಿಯೋರ್ವರಿಗೂ ಮನವಿ, ಬೇಡಿಕೆ, ಶಿಫಾರಸ್ಸು ಪತ್ರಗಳನ್ನು ಸಲ್ಲಿಸತ್ತಲೇ ಆಯಸ್ಸು ಕಳೆದಿರುವ ಈ ಕುಟುಂಬ ಇದೀಗ ನ್ಯಾಯ ಪಡೆಯಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದೆ.

ಅರಣ್ಯ ವೀಕ್ಷಕ ನರಸಿಂಹಮೂರ್ತಿ
ದಿನಗೂಲಿಯಾಗಿ ಗಿಡ್ಡಯ್ಯ ನವರ ಅಲ್ಪ ಆಧಾಯದಿಂದ ಅವರ ೯ ಸದಸ್ಯರ ಕುಟುಂಬದ ಪಾಲನೆ ಕಷ್ಟವಾಗುತ್ತಿತ್ತು. ಇದಕ್ಕಾಗಿ ಶಾಲಾ ದಿನಗಳಲ್ಲೇ ಶಿಕ್ಷಣಕ್ಕೆ ವಿಧಾಯ ಹೇಳಿದ ೨ನೇ ಮಗ ನರಸಿಂಹಮೂರ್ತಿ ಕೂಲಿನಾಲಿ ಮಾಡಿ ತಂದೆಗೆ ನೆರವಾಗುತ್ತಿದ್ದ. 1-04-1984ರಲ್ಲಿ ದಿನಗೂಲಿ ಅರಣ್ಯ ವೀಕ್ಷಕನಾಗಿ ಅರಣ್ಯ ಇಲಾಖೆ ಸೇರಿಕೊಂಡರು. 1-07-1984ರ ಮೊದಲು ಕೆಲಸಕ್ಕೆ ಸೇರಿದ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯಬಾರದೆಂಬ ಸುಪ್ರೀಂಕೋರ್ಟ್‌ನ ಸ್ಪಷ್ಟ ಆದೇಶವಿದ್ದರೂ ಕರ್ನಾಟಕ ಸರ್ಕಾರದ ಸುತ್ತೋಲೆ ಇದ್ದರೂ 14-01-1988ರಂದು ನರಸಿಂಹಮೂರ್ತಿಯವರನ್ನು ಅರಣ್ಯ ಇಲಾಖೆ ಹೊರಹಾಕಿತ್ತು. ಹಲವು ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗದಿದ್ದಾಗ ದಾವೆ ಹೂಡಿದರು.

03-07-1991ರ ತೀರ್ಪಿನಲ್ಲಿ ಕಾರ್ಮಿಕ ನ್ಯಾಯಾಲಯವು ನರಸಿಂಹಮೂರ್ತಿಯವರನ್ನು ಮರುನೇಮಕ ಮಾಡಿಕೊಂಡು ನಿರುಧ್ಯೋಗದ ದಿನಗಳನ್ನು ಸೇವಾವಧಿ ಎಂದು ಪರಿಗಣಿಸಿ ಸಂಬಳವನ್ನೂ ನೀಡುವಂತೇ ಆದೇಶಿಸಿತ್ತು.ಅಧಿಕಾರಿಗಳು ಕೆಲಸಕ್ಕೆ ಮರುನೇಮಿಸಿದರೂ ಸಂಬಳ ಮಾತ್ರ ನೀಡಲಿಲ್ಲ. ಪುನ: ದಾವೆ ಹೂಡಲಾಯಿತು. ಪುನಃ ಮೂರು ವರ್ಷಗಳ ತನಿಖೆ. 2001ರಲ್ಲಿ ತನ್ನ ಪರ ತೀರ್ಪು ಪಡೆದರೂ ಮೂರ್ತಿಯವರಿಗೆ ಸಿಕ್ಕಿದ ಏಳು ವರ್ಷಗಳ ಸಂಬಳ ರೂ.45944/-ಗಳು. ಮಾತ್ರ. ಅದೂ ನಾಲ್ಕು ವರ್ಷಗಳ ಕಾಲ ಸತಾಯಿಸಿದ ಅನಂತರ.

ಇನ್ನೊಂದು ಸುಪ್ರಿಂಕೋರ್ಟ್ ಆದೇಶದ ಉಲ್ಲಂಘನೆ
1994ರಲ್ಲಿ ಸುಪ್ರಿಂಕೋರ್ಟ್‌ನ ನಿರ್ದೇಶನ ಆಧಾರದಲ್ಲಿ ರಾಜ್ಯ ಸರ್ಕಾರ ಇನ್ನೊಂದು ಸುತ್ತೋಲೆ ಹೊರಡಿಸಿ 1-07-1984ರ ಮೊದಲು ಸೇವೆಗೆ ಸೇರಿದ ದಿನಗೂಲಿ ನೌಕರರು ಸತತವಾಗಿ 10 ವರ್ಷಗಳ ಕಾಲ 2400 ದಿನಗಳ ನಿರಂತರ ಸೇವೆ ಸಲ್ಲಿಸಿದ್ದಲ್ಲಿ ಅವರ ಸೇವೆಯನ್ನು ಶಾಶ್ವತ ನೌಕರರೆಂದು ಪರಿಗಣಿಸಬೇಕು”ಎಂದು ಸೂಚಿಸಿತು. ಅರಣ್ಯ ಇಲಾಖೆಯು ಈ ವಿಚಾರದಲ್ಲೂ ಆದೇಶವನ್ನು ಉಲ್ಲಂಘಿಸಿ ಮೂರ್ತಿಯವರ ಸೇವೆಯನ್ನು ಖಾಯಂಗೊಳಿಸಲಿಲ್ಲ. ಈ ಆದೇಶದ ಆಧಾರದಲ್ಲಿ ಸಾವಿರಾರು ಟೆಂಪರರಿ ನೌಕರರು ಪ್ರಯೋಜನ ಪಡೆದರೂ ಮೂರ್ತಿಯವರ ನಿರುದ್ಯೋಗದ ಅವಧಿಯನ್ನು ಸೇವಾವಧಿ ಎಂದು ಪರಿಗಣಿಸಲು ಸ್ಪಷ್ಟ ಆದೇಶವಿದ್ದಾಗಲೂ ಅನ್ಯಾಯವೆಸಗಿ ಅವರನ್ನು ಖಾಯಂಗೊಳಿಸಲಿಲ್ಲ.

ಇದೇ ವೇಳೆ, ಅರಣ್ಯ ಅಧಿಕಾರಿಗಳು ಕ್ಷಮೆಗೂ ಅರ್ಹವಲ್ಲದ ಇನ್ನೊಂದು ಅಪರಾಧ ಮಾಡಿತು. ಇವರ ಸೇವಾವಧಿಯನ್ನುಇನ್ನೋರ್ವ ಎಸ್.ನರಸಿಂಹಮೂರ್ತಿಯವರ ಸೇವಾವಧಿ ಎಂದು ಪರಿಗಣಿಸಿ ಅವರ ಸೇವಯನ್ನು ಖಾಯಂಗೊಳಿಸಿತು. ಇದರಿಂದ ಖಿನ್ನತೆಗೊಳಗಾದ ನರಸಿಂಹಮೂರ್ತಿಯವರು ವೃದ್ಧ ತಂದೆ-ತಾಯಿ, ಅವಿವಾಹಿತ ಸಹೋದರ ಸಹೋದರಿಯರನ್ನು ಬಿಟ್ಟು ದಿ:೨೮.೦೪.೨೦೦೭ರಲ್ಲಿ ಇಹಲೋಕ ತ್ಯಜಿಸಿದರು. ಅದೂ ಅನುಮಾನಾಸ್ಪದ ಘಟನೆಯಲ್ಲಿ!

ಹೇಮಲತಾಳಿಗೆ ಚಿತ್ರಹಿಂಸೆ ನೀಡಿದರು
ಇದೇ ವೇಳೆ, ಗಿಡ್ಡಯ್ಯನವರ ಎರಡನೇ ಮಗಳು ಕು|| ಹೇಮಲತಾ ಬಿ.ಎ ಪದವಿ ಮುಗಿಸಿದ್ದಳು. ಮೂರು ವರ್ಷದ ಕಂಪ್ಯೂಟರ್ ಸರ್ಟಿಫಿಕೇಟನ್ನೂ ಪಡೆದಿದ್ದಳು. 2007ರಲ್ಲಿ ಹೊಳೆನರಸೀಪುರದ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಯೊಂದು ಖಾಲಿಯಿದ್ದಾಗ ಹೇಮಲತಾ ಅರ್ಜಿ ಸಲ್ಲಿಸಿದ್ದಳು. 2004ರಲ್ಲಿ ಹೊಳೆನರಸೀಪುರದಲ್ಲಿ ಕಂಪ್ಯೂಟರ್ ತರಬೇತಿಯಾದವರು ಯಾರೂ ಇಲ್ಲದಿದ್ದಾಗ ಹೇಮಲತಾಳ ಸಂಬಳ ತಿಂಗಳಿಗೆ ರೂ.1000/- ಎಂದು ನಿಗದಿಗೊಳಿಸಲಾಯಿತು. ಆದರೆ ಪ್ರತಿ ಬಾರಿ ಸಂಬಳವನ್ನು ನಗದಾಗಿಯೇ ನೀಡಿದ್ದರು!

2007ರ ಏಪ್ರಿಲ್ ತಿಂಗಳಲ್ಲಿ ಆಕೆಯ ಅಣ್ಣ ನರಸಿಂಹಮೂರ್ತಿಯವರು ನಿಧನವಾದಾಗ ಗಿಡ್ಡಯ್ಯನವರು ಮಗನ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಿ, ಮೃತ ಮಗನ ಸೇವೆಯನ್ನು ಖಾಯಂಗೊಳಿಸಿ, ಉಳಿದ ೮ ಮಂದಿ ಮಕ್ಕಳಲ್ಲಿ ಯಾರಿಗಾದರೊಬ್ಬರಿಗೆ ಉದ್ಯೋಗ ನೀಡುವಂತೆ ಮನವಿ ಸಲ್ಲಿಸಿದರು. ಹಾಸನದಲ್ಲಿದ್ದ ಉಪ ಸಂರಕ್ಷಣಾಧಿಕಾರಿ ಬಾಲಚಂದರ್ ಅವರು “ನಿಮ್ಮ ಮಗ 1984ರಿಂದ 10 ವರ್ಷದ ಸೇವೆ ಪೂರೈಸಿಲ್ಲವಾದುದರಿಂದ ಅನುಕಂಪದ ಆಧಾರದಲ್ಲಿ ಕೆಲಸ ಕೊಡಲು ಬರುವುದಿಲ್ಲ ಎಂದು ಹಿಂಬರಹ ನೀಡಿದರು. ಆದರೆ ಮಾನವೀಯತೆಯ ದೃಷ್ಟಿಯಿಂದ ಕಂಪ್ಯೂಟರ್ ಆಪರೇಟರ್ ಆಗಿ ಉದ್ಯೋಗ ನೀಡುತ್ತಿದ್ದೇವೆ” ಎಂದರು.
2007ರಿಂದ 2016 ರವರೆಗೆ ಪುನಃ ಆದೇ ಕಛೇರಿಯಲ್ಲಿ ಹೇಮಲತಾ ದುಡಿದರು. ಅದೂ ತಿಂಗಳಿಗೆ ರೂ.1000/-ಗಳ ಸಂಬಳದಲ್ಲಿ! ಅದಾಗಲೇ 9 ವರ್ಷ ದುಡಿದ ಹೇಮಲತಾ ತನಗೆ ಅರಣ್ಯ ಇಲಾಖೆಯ ದರಪಟ್ಟಿಯಂತೆ ಸಂಬಳ ನೀಡಲು ವಿನಂತಿಸಿದಳು. ಆಗ ಉತ್ತರಿಸಿದ ಅಧಿಕಾರಿಗಳು “ನಿನ್ನ ಅಣ್ಣನ ಪ್ರಕರಣದಲ್ಲಿ ಆತನ ಸೇವೆ ಸಕ್ರಮವಾದಾಗ ನಿನ್ನನ್ನು ಸಹಜವಾಗಿ ಖಾಯಂ ಆಗಿ ನೇಮಿಸಲಾಗುವುದು” ಎಂದು ಭರವಸೆ ನೀಡಿದರು.

ಇಲಾಖಾ ದರಪಟ್ಟಿಯಂತೆ ಸಂಬಳ ಕೇಳಿದ ಒಂದೇ ಕಾರಣಕ್ಕಾಗಿ 2016ನೇ ನವೆಂಬರ್ ತಿಂಗಳಲ್ಲಿ ಹೇಮಲತಾಳನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಅದರ ನಂತರದ ಅವಧಿಯಲ್ಲಿ ನೀಡಿದ ಯಾವುದೇ ಮನವಿಗಳಿಗೆ ಅರಣ್ಯ ಇಲಾಖಾಧಿಕಾರಿಗಳು ಸ್ಪಂದಿಸಲಿಲ್ಲ.

ಇದೀಗ ಗಿಡ್ಡಯ್ಯನವರು ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘವನ್ನು ಸಂಪರ್ಕಿಸಿ ತನ್ನ ಕುಟುಂಬಕ್ಕಾದ ಅನ್ಯಾಯವನ್ನು ತೋಡಿಕೊಂಡರು. ಈ ಸಂಘದ ಮೂಲಕ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಆಗ್ರಹಿಸಿದಾಗ ಹಾಸನ ವಿಭಾಗದ ಸಾಮಾಜಿಕ ಅರಣ್ಯ ವಲಯ ಕಛೇರಿಯಲ್ಲಿ 2017ರ ಜನವರಿಯಲ್ಲಿ ಉದ್ಯೋಗ ನೀಡಲಾಯಿತು. ನಾಲ್ಕು ತಿಂಗಳಾದರೂ ಸಂಬಳ ನೀಡದಿದ್ದಾಗ “ಅನುಧಾನವಿಲ್ಲ ಬಂದಾಗ ಕೊಡುತ್ತೇವೆ” ಎಂಬ ವಾಗ್ದಾನ ಸಿಕ್ಕಿತು. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಅದೇ ಕಛೇರಿಯಲ್ಲಿ “ಅಕ್ಷರಸ್ಥ್ತ ಸಹಾಯಕ” ಹುದ್ದೆಗೆ ಪ್ರಶಾಂತ ಕುಮಾರ್ ಎಂಬುವರ ಹೆಸರಿನಲ್ಲಿ ಪ್ರತಿ ತಿಂಗಳಲ್ಲಿ ರೂ. 10043/- ವೇತನದ ಬಿಲ್ ಸರಕಾರಕ್ಕೆ ಸಲ್ಲಿಸಲಾಗುತ್ತಿತ್ತು. ಆದರೆ ಅಂತಹ ವ್ಯಕ್ತಿಯೇ ಕಛೇರಿಯಲ್ಲಿರಲಿಲ್ಲ !

ಇದನ್ನು ಪ್ರಶ್ನಿಸಿದಾಗ ಹೇಮಲತಾಳನ್ನೇ ಕೆಲಸದಿಂದ ತೆಗೆದು ಹಾಕಲಾಯಿತು. ಹೇಮಲತ ನೇರವಾಗಿ ಅರಣ್ಯ ಇಲಾಖೆಯ ಅಧೀನ ಕಾರ್ಯದರ್ಶಿಗೆ ಪತ್ರ ಬರೆದು ಈ ಎಲ್ಲಾ ವಿಚಾರಗಳನ್ನು ನಿವೇದಿಸಿದಳು. ಈ ಪತ್ರಕ್ಕೆ ಸ್ಪಂದಿಸಿದ ಹಿರಿಯ ಅಧಿಕಾರಿ ಹೇಮಲತಾಗೆ ನ್ಯಾಯ ನೀಡಲು ಅಧಿಕಾರಿಗಳನ್ನು ಆದೇಶಿಸಿದರು. ನ್ಯಾಯ ಪಡೆಯುವ ಬದಲಾಗಿ 2017ರ ಸೆಪ್ಟಂಬರ್‌ನಲ್ಲಿ ಕೆಲಸವನ್ನೇ ಕಳೆದುಕೊಂಡರು ಅದರೊಂದಿಗೆ ಕರ್ತವ್ಯ ನಿರ್ವಹಿಸಿದ 9 ತಿಂಗಳ ಅವಧಿಗೆ ಸಂಬಳವನ್ನೂ ಕಳೆದುಕೊಂಡಳು. ಗಿಡ್ಡಯ್ಯನವರು ಪುನಃ ಪುನಃ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ ನಾಲ್ಕು ತಿಂಗಳ ಸಂಬಳ ಎಂದು ರೂ.37530/-ಗಳ ಚೆಕ್ ಅವರ ಮನೆಗೆ ಕಳುಹಿಸಿಕೊಟ್ಟಿದ್ದರು.

ನಂತರದ ಅವಧಿಯಲ್ಲಿ ಮೇಲಿನ ಅಧಿಕಾರಿಯವರ ಆದೇಶದಂತೆ (ದಿ:24-09-2018) ಹೊಳೆನರಸೀಪುರ ಸಾಮಾಜಿಕ ಅರಣ್ಯ ವಲಯ ಕಛೇರಿಯಲ್ಲಿ ಕೆ.ಪಿ.ಬಸವರಾಜು ದಿನಗೂಲಿ ಜಾಗದಲ್ಲಿ ಹೇಮಲತಾಳನ್ನು ಮುಂದುವರೆಸಲು ಸಾಧ್ಯವಿಲ್ಲ. ಪ್ರಸ್ತುತ ಶ್ರೀಮತಿ ಸಹನಾ ರವರು ಕಛೇರಿ ಸಹಾಯಕಿಯಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಿಯೋನಿಕ್ಸ್ ಬೆಂಗಳೂರು ಮುಖಾಂತರ ಕರ್ತವ್ಯ ನಿರ್ವಹಿಸುತ್ತಿರುತ್ತಾರೆಂದು ಹೇಳಿ ಹೇಮಲತಾ ರವರಿಗೆ 14 ತಿಂಗಳ ನಂತರ ದಿ:4-11-2019ರಂದು ಕೆಲಸ ನೀಡಿದರು. ಈ ಅವಧಿಗೆ ಸಂಬಳ ನೀಡದೇ ಕೆಲಸದಿಂದ ತೆಗೆದಿರುತ್ತಾರೆ. ಹೀಗೆ ಬೇರೆಯವರ ಹೆಸರಿನಲ್ಲಿ ಸಂಬಳ ಮಾಡುವುದು, ಅದರಲ್ಲಿ ಸ್ವಲ್ಪವನ್ನು ಹೇಮಲತಾಗೆ ನೀಡುವುದು ಮುಂತಾದ ಅಕ್ರಮಗಳು ಇಂದಿನವರೆವಿಗೂ ಪುನರಾವರ್ತನೆಯಾಗುತ್ತಲೇ ಇದೆ.

Comments are closed.