ಆರೋಗ್ಯ

ಅತಿಯಾದ ದೇಹತೂಕ ಮಧುಮೇಹ ಬರಲು ಕಾರಣವಾಗಬಹುದೇ ತಿಳಿಯಿರಿ

Pinterest LinkedIn Tumblr

ಮಧುಮೇಹವು ಗಂಭೀರ ಚಯಾಪಚಯ ಕಾಯಿಲೆಯಾಗಿದ್ದು, ರಕ್ತದಲ್ಲಿ ಗ್ಲುಕೋಸ್ ಮಟ್ಟ ಅತ್ಯಂತ ಹೆಚ್ಚಾದಾಗ ಈ ಸ್ಥಿತಿಯುಂಟಾ ಗುತ್ತದೆ. ಮಧುಮೇಹದ ಬಗ್ಗೆ ಸಾಕಷ್ಟು ವಿಷಯಗಳು, ಉದಾಹರಣೆಗೆ ಅದನ್ನು ನಿರ್ವಹಿಸುವುದು ಮತ್ತು ಅದರೊಂದಿಗೆ ಬದುಕುವುದು ಹೇಗೆ ಕಷ್ಟವಾಗಬಹುದು ಮತ್ತು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ಹೃದ್ರೋಗ,ಮೂತ್ರಪಿಂಡ ಕಾಯಿಲೆ,ಅಂಧತ್ವ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿದೆ. ಆದರೂ ಮಧುಮೇಹ ಕುರಿತು ಕೆಲವು ಮಿಥ್ಯೆಗಳು ಈಗಲೂ ಜನಮಾನಸದಲ್ಲಿ ಹರಿದಾಡುತ್ತಿವೆ ಮತ್ತು ಇಂತಹ ತಪ್ಪುಗ್ರಹಿಕೆಗಳು ಈ ರೋಗವನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ಪ್ರಮುಖ ಅಡಚಣೆಗಳಾಗಿವೆ. ಇಂತಹ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ…..

ಸಕ್ಕರೆಯನ್ನು ತಿನ್ನುವುದರಿಂದ ಮಧುಮೇಹ ಬರುತ್ತದೆ
-ಸುಳ್ಳು. ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿರುವ ಯಾವುದೇ ಆಹಾರವು ರಕ್ತದಲ್ಲಿ ಗ್ಲುಕೋಸ್‌ನ ಮಟ್ಟವನ್ನು ಹೆಚ್ಚಿಸುತ್ತದೆ. ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ನಮ್ಮ ಶರೀರಕ್ಕೆ ಸಾಧ್ಯವಾಗದಿದ್ದಾಗ ಅಥವಾ ಆಹಾರವನ್ನು ಸಂಶ್ಲೇಷಿಸಲು ಮತ್ತು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಸಮರ್ಪಕವಾಗಿ ಕೆಲಸ ಮಾಡದಿದ್ದಾಗ ಮಧುಮೇಹ ಕಾಯಿಲೆಯುಂಟಾಗುತ್ತದೆ.

ಅತಿಯಾದ ದೇಹತೂಕವಿದ್ದರೆ ಮಧುಮೇಹವಿದೆ ಎಂದು ಅರ್ಥ
-ಅತಿಯಾದ ದೇಹತೂಕ ಮತ್ತು ಬೊಜ್ಜು ಖಂಡಿತವಾಗಿಯೂ ಮಧುಮೇಹದ ಮಟ್ಟಿಗೆ ಅಪಾಯದ ಅಂಶಗಳಾಗಿವೆ ನಿಜ. ಆದರೆ ಅತಿಯಾದ ದೇಹತೂಕವಿದೆಯೆಂಬ ಮಾತ್ರಕ್ಕೆ ಅದು ಸ್ವಯಂಚಾಲಿತವಾಗಿ ಮಧುಮೇಹವನ್ನುಂಟು ಮಾಡುವುದಿಲ್ಲ. ವಾಸ್ತವದಲ್ಲಿ ಅತಿಯಾದ ದೇಹತೂಕವು ಅಧಿಕ ರಕ್ತದೊತ್ತಡ,ಹೃದ್ರೋಗ,ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್)ನಂತಹ ಇತರ ಕಾಯಿಲೆಗಳಿಗೂ ಕಾರಣವಾಗಬಹುದು. ಇನ್ನೊಂದೆಡೆ ಅತಿಯಾದ ದೇಹತೂಕವನ್ನು ಹೊಂದಿರದ ವ್ಯಕ್ತಿಗಳಿಗೂ ಮಧುಮೇಹವಿರಬಹುದು.

ಮಧುಮೇಹಿಗಳು ಸಿಹಿ ತಿನ್ನುವಂತಿಲ್ಲ
-ನೀವು ಮಧುಮೇಹಿಯಾಗಿದ್ದರೂ ಯಾವುದೇ ಆರೋಗ್ಯಕರ, ಕಡಿಮೆ ಜಿಐ ಹೊಂದಿರುವ ಆಹಾರವನ್ನು ಸಣ್ಣ ಸಣ್ಣ ಪ್ರಮಾಣಗಳಲ್ಲಿ ಸೇವಿಸಬಹುದು. ಸಿಹಿತಿಂಡಿಗಳು,ಕೇಕ್,ಚಾಕ್ಲೇಟ್ ಇತ್ಯಾದಿಗಳು ಯಾರದೇ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಮಧುಮೇಹವಿರಲಿ, ಇಲ್ಲದಿರಲಿ…ಇಂತಹ ಆಹಾರಗಳ ಸೇವನೆಗೆ ಒಂದು ಮಿತಿಯಿರಬೇಕು.

ಮಧುಮೇಹಿಗಳು ಕಾರ್ಬೊಹೈಡ್ರೇಟ್‌ಗಳನ್ನು ಸೇವಿಸಬಾರದು
– ಹೆಚ್ಚಿನ ಕಾರ್ಬೊಹೈಡ್ರೇಟ್‌ಗಳು ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುತ್ತವೆ ಮತ್ತು ಇದೇ ಕಾರಣದಿಂದ ಮಧುಮೇಹಿಗಳು ಅವುಗಳನ್ನು ಸೇವಿಸಬಾರದು ಎಂಬ ಭಾವನೆಯಿದೆ. ಆದರೆ ಸಮತೋಲಿತ ಆಹಾರದ ಅಂಗವಾಗಿ ಮಧುಮೇಹಿಗಳು ಸ್ವಲ್ಪ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್‌ಗಳನ್ನು ಸೇವಿಸುವಂತೆ ತಜ್ಞರೇ ಶಿಫಾರಸು ಮಾಡಬಹುದು. ಹೀಗಾಗಿ ಕಾರ್ಬೊಹೈಡ್ರೇಟ್ ಸೇವನೆಯ ಬಗ್ಗೆ ವೈದ್ಯರನ್ನು ಭೇಟಿಯಾಗಿ ಯಾವ ಕಾರ್ಬೊಹೈಡ್ರೇಟ್‌ಗಳನ್ನು ಯಾವ ಪ್ರಮಾಣದಲ್ಲಿ ಸೇವಿಸಬಹುದು ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಮಧುಮೇಹಿಗಳು ಆಗಾಗ್ಗೆ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ
-ನಿಮಗೆ ಮಧುಮೇಹ ಇದೆ ಎಂಬ ಮಾತ್ರಕ್ಕೆ ನೀವು ಕೆಮ್ಮು,ಶೀತ,ಫ್ಲೂ ಇತ್ಯಾದಿ ಸಮಸ್ಯೆಗಳಿಗೆ ಹೆಚ್ಚು ಗುರಿಯಾಗುವ ಸಾಧ್ಯತೆಗಳಿಲ್ಲ. ಆದರೆ ಇತರ ಯಾವುದೇ ಕಾಯಿಲೆಯುಂಟಾದಾಗ ಮಧುಮೇಹವನ್ನು ನಿಭಾಯಿಸುವುದು ಹೆಚ್ಚು ಕಷ್ಟವಾಗಬಹುದು ಮತ್ತು ಮಧುಮೇಹವಿದ್ದಾಗ ಇಂತಹ ಕಾಯಿಲೆಗಳು ತೀವ್ರಗೊಳ್ಳುವ ಸಾಧ್ಯತೆಗಳಿರುತ್ತವೆ.

Comments are closed.