ಉಡುಪಿ: ಉಡುಪಿ ಜಿಲ್ಲೆಯಲ್ಲಿ ನವೇಲ್ ಕೊರೋನಾ ಸೋಂಕಿನ ಆರ್ಭಟ ದಿನೇದಿನೇ ಹೆಚ್ಚುತ್ತಿದ್ದು ಸಾವಿನ ಸಂಖ್ಯೆಯೂ ಕೂಡ ಏರುತ್ತಿದೆ.
ಕಾರ್ಕಳ ತಾಲೂಕಿನ 60 ವರ್ಷದ ವ್ಯಕ್ತಿಯನ್ನು ಕೋವಿಡ್ 19 ಲಕ್ಷಣಗಳೊಂದಿಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪಾಸಿಟಿವ್ ಬಂದ ಬಳಿಕ ಡಾ| ಟಿಎಂಎ ಪೈ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರು ಸೋಮವಾರ ಮೃತಪಟ್ಟರು. ಅವರಲ್ಲಿ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎನ್ನಲಾಗಿದೆ. ಕಾರ್ಕಳ ನೇಜಾರಿನ 44 ವರ್ಷದ ವ್ಯಕ್ತಿ ಹೃದ್ರೋಗ ಸಮಸ್ಯೆಯಿಂದ ಕಲ್ಯಾಣಪುರ ಆಸ್ಪತ್ರೆಗೆ ಸೇರಿದ್ದರು. ಆರೋಗ್ಯ ಸ್ಥಿತಿ ಗಂಭೀರವಿದ್ದ ಕಾರಣ ಶನಿವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ನಿಧನ ಹೊಂದಿದರು. ಮೊದಲಿನ ಸಾಮಾನ್ಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಸಾವಿನ ಬಳಿಕ ಪರೀಕ್ಷಿಸಿದಾಗ ಪಾಸಿಟಿವ್ ವರದಿಯಾಗಿದೆ. ಕುಂದಾಪುರ ತಾಲೂಕು ಶಂಕರ ನಾರಾಯಣದ 45 ವರ್ಷದವರೊಬ್ಬರನ್ನು ಕುಂದಾಪುರ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಸೋಮವಾರ ಕರೆದುಕೊಂಡು ಬರುವಾಗ ಕೊನೆಯುಸಿರೆಳೆದರು. ಪರೀಕ್ಷೆಯಲ್ಲಿ ಪಾಸಿಟಿವ್ ವರದಿಯಾಗಿದೆ. ಕುಂದಾಪುರ ಆಸ್ಪತ್ರೆಯಲ್ಲಿ 60 ವರ್ಷದವರೊಬ್ಬರನ್ನು ದಾಖಲಿಸಿಕೊಳ್ಳಲಾಗಿತ್ತು. ಐಸಿಯು ಬೆಡ್‌ಗಾಗಿ ಬ್ರಹ್ಮಾವರಕ್ಕೆ ಕರೆತರುವಾಗ ಅವರು ಮೃತಪಟ್ಟರು.ಕುಂದಾಪುರ ತಾಲೂಕಿನ ಉಳ್ಳೂರು-74 ಗ್ರಾಮದ 40 ವರ್ಷದ ವ್ಯಕ್ತಿ ಜು. 24ರಂದು ಬೆಂಗಳೂರಿನಿಂದ ಆಗಮಿಸಿದ್ದರು. ಬಳಿಕ ಜ್ವರ ಕಾಣಿಸಿಕೊಂಡಿತ್ತು. ಭಾನುವಾರ ಕೋವಿಡ್ 19 ಸೋಂಕು ದೃಢವಾಗಿದ್ದು, ಕೂಡಲೇ ಕುಂದಾಪುರದ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ.
Comments are closed.