ಆರೋಗ್ಯ

ಭಯದ ನಡುವೆಯೇ ಮುಗಿದೇ ಹೊಯ್ತು ಎಸ್ಸೆಸ್ಸೆಲ್ಸಿ ಎಕ್ಸಾಂ: ವಿದ್ಯಾರ್ಥಿಗಳು, ಪೋಷಕರು ಖುಷ್..!(Video)

Pinterest LinkedIn Tumblr

ಕುಂದಾಪುರ: ಕೊರೋನಾ ಸೋಂಕಿನ ಆತಂಕದ ನಡುವೆಯೇ ಆರು‌ ಪರೀಕ್ಷೆಗಳನ್ನು ಮುಗಿಸಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು‌ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಜೂನ್ 25ಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು ಉಡುಪಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು‌ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿತ್ತು. ಕೊರೋನಾ ಆತಂಕದ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕರೆತರುವುದು ಮತ್ತು‌ ಪೋಷಕರನ್ನು ಮನವೊಲಿಸುವುದು ತ್ರಾಸದಾಯಕವಾಗಿದ್ದರೂ ಕೂಡ ಜಿಲ್ಲಾಡಳಿತ ಹಮ್ಮಿಕೊಂಡ ಕಾರ್ಯಕ್ರಮಗಳಿಂದ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು ಜು.3 ಶುಕ್ರವಾರ ಹಿಂದಿ‌ ಪರೀಕ್ಷೆ ಬರೆಯುವ ಮೂಲಕ ಆರು ಪರೀಕ್ಷೆ ಪೂರೈಸಿ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ. ಪರೀಕ್ಷೆ ಮುಗಿದ ಹಿನ್ನೆಲೆ ಪೋಷಕರೂ‌ ಕೂಡ ಆತಂಕದಿಂದ ಹೊರಬಂದಿದ್ದಾರೆ.

ಶಾಲೆಗಳ ಕಾರ್ಯವೈಖರಿಗೆ ಡಿಸಿ ಮೆಚ್ಚುಗೆ….
ಸರಕಾರದ ಆದೇಶದಂತೆ ಜಿಲ್ಲಾದ್ಯಂತ ಉತ್ತಮ ರೀತಿಯಲ್ಲಿ ಹತ್ತನೆ ತರಗತಿ ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆದಿದೆ. ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ನಗರದ ದೊಡ್ಡ ಪರೀಕ್ಷಾ ಕೇಂದ್ರವಾಗಿರುವ ಜ್ಯೂನಿಯರ್ ಕಾಲೇಜು ಸಹಿತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ‌ ಮೂಡಿಸುವ ಕೆಲಸವನ್ನು ಆಯಾಯ ಪರೀಕ್ಷಾ ಕೇಂದ್ರದಲ್ಲಿನ ಶಿಕ್ಷಕರು‌ ಮಾಡಿದ್ದಾರೆ. ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು (ಜ್ಯೂನಿಯರ್ ಕಾಲೇಜು) ಪರೀಕ್ಷಾ ಕೇಂದ್ರದಲ್ಲಿನ ಸುವ್ಯವಸ್ಥೆ ಬಗ್ಗೆ ಉಡುಪಿ ಡಿಸಿ ಜಿ. ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೋಷಕರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಫುಲ್ ಖುಷ್..!
ಮೊದಲಿಗೆ ಕೊರೋನಾ ಸೋಂಕಿನ ಭಯವಿತ್ತು, ಆದರೂ ಪರೀಕ್ಷೆ ಬರೆದೆವು. ಶಿಕ್ಷಕರು ಮತ್ತು ಪೋಷಕರು ಧೈರ್ಯ ತುಂಬಿದ ಹಿನ್ನೆಲೆ ಭಯ ಕಡಿಮೆಯಾಗಿದೆ. ಪರೀಕ್ಷೆಗಳು ತುಂಬಾ ಸುಲಭವಾಗಿ ಮುಗಿದಿದೆ. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದಲ್ಲದೆ ಎಂದು ವಿದ್ಯಾರ್ಥಿಗಳಾದ ಅವಿನಾಶ್ ಹಾಗೂ ಮೇಘನಾ ಹೇಳುತ್ತಾರೆ.

ಕೊರೋನಾ ಹಿನ್ನೆಲೆ ಮುಂಜಾಗೃತೆಯ ಸಲುವಾಗಿ ಉತ್ತಮ ಕ್ರಮಕೈಗೊಂಡಿದ್ದರಿಂದ ಮಕ್ಕಳನ್ನು ಕಳಿಸಲು ಮುಂದಾದೆವು.‌ ಶಿಕ್ಷಣ ಸಚಿವರು, ಜಿಲ್ಲಾಡಳಿತ ನೀಡಿದ ಧೈರ್ಯದಿಂದ ಕೊರೋನಾ ಭಯ ಇರಲಿಲ್ಲ. ಶಾಲೆ, ಕಾಲೇಜು ಮರು ಆರಂಭ ಎರಡು ತಿಂಗಳ ಬಳಿಕ ಆಗುವುದೇ ಉತ್ತಮ ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ ಪೋಷಕರಾದ ಗಿರಿಧರ ಪ್ರಭು.

ಪರೀಕ್ಷಾ ಕೇಂದ್ರದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಪಾಸಿಟಿವ್ ಬಂದರೂ ಕೂಡ ಆರು ಪರೀಕ್ಷೆಗಳಿಗೆ ಎಲ್ಲಾ ವಿದ್ಯಾರ್ಥಿಗಳು ಹಾಜಾರಾಗಿದ್ದಾರೆ. ಹತ್ತನೆ ತರಗತಿ ಪರೀಕ್ಷೆ ಯಶಸ್ವಿಯಾಗಿ‌ ಮುಗಿಯಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಪೊಲೀಸ್, ಆರೋಗ್ಯ ಇಲಾಖೆ ಕಾರ್ಯವೈಖರಿಯಿಂದ ಸಾಧ್ಯವಾಗಿದೆ. ಆಶಾ ಕಾರ್ಯಕರ್ತೆಯರು, ಸ್ಕೌಟ್ ಆಂಡ್ ಗೈಡ್ಸ್ ಸ್ವಯಂ ಸೇವಕರ ಶ್ರಮಾದಾನ ಇಲ್ಲಿ ಗಮನಾರ್ಹ ವಿಚಾರ ಎಂದು ಶಿಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.