ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸದ್ಯ 160 ಮಂದಿ ಕೊರೋನಾ ಸೋಂಕಿತರು ಆಸ್ಪತ್ರೆಯಲ್ಲಿದ್ದು ಅವರ ಪೈಕಿ ನಾಲ್ವರಿಗೆ ಮಾತ್ರ ಗಂಭೀರ ಸ್ಥಿತಿಯಿದೆ. ಒಬ್ಬರು ಮಾತ್ರ ವೆಂಟಿಲೆಟರ್ ಅಳವಡಿಕೆಯಲ್ಲಿದ್ದು ಉಳಿದ ಮೂವರು ಒಂದೆರಡು ದಿನದಲ್ಲಿ ಡಿಶ್ಚಾರ್ಜ್ ಆಗಲಿದ್ದಾರೆಂದು ಉಡುಪಿ ಡಿಸಿ ಜಿ. ಜಗದೀಶ್ ಹೇಳಿದ್ದಾರೆ.
ಕುಂದಾಪುರ ಜ್ಯೂನಿಯರ್ ಕಾಲೇಜಿಗೆ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಪರೀಕ್ಷಾ ಕೊಠಡಿಗಳನ್ನು ವೀಕ್ಷಿಸಿದ್ದು ಅಧಿಕಾರಿಗಳು ಮತ್ತು ಶಿಕ್ಷಕರು ವಹಿಸಿದ ಮುಂಜಾಗೃತಾ ಕ್ರಮವನ್ನು ಶ್ಲಾಘಿಸಿದರು.
ಪ್ರತಿನಿತ್ಯ ವೈದ್ಯರ ಜೊತೆ ಚರ್ಚೆ ನಡೆಸುತ್ತಿದ್ದು ಕೊರೋನಾ ಸೋಂಕಿತರೆಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಸಮಾಧಾನದ ವಿಚಾರವಾಗಿದೆ. ಯಾರಿಗಾದರೂ ಜ್ವರ, ಶೀತ, ಕೆಮ್ಮದಂತಹ ಲಕ್ಷಣಗಳಿದ್ದರೆ ಮಾತ್ರೆ ತೆಗೆದುಕೊಂಡು ಸುಮ್ಮನಾಗದೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಜನರು ಜೀವದ ಬಗ್ಗೆ ಜಾಗೃತೆ ವಹಿಸುವ ಅನಿವಾರ್ಯತೆ ಎಂದು ಡಿಸಿ ಹೇಳಿದರು.
ಸೂಕ್ತ ಮುಂಜಾಗೃತಾ ಕ್ರಮಗಳೊಂದಿಗೆ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ನಿಬಾಯಿಸಲಾಗಿದೆ. ಮನೆಯವರ ಮೂಲಕವಾಗಿ ಮೂವರು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಹರಡಿದ್ದು ಉಳಿದಂತೆ ಉಡುಪಿ ಜಿಲ್ಲೆಯ ಪರೀಕ್ಷಾ ಕೇಂದ್ರದಿಂದ ಯಾವುದೇ ವಿದ್ಯಾರ್ಥಿಗಳಿಗೆ ಸೋಂಕು ಹರಡಿಲ್ಲ. ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಮೇಲೆ ನಂಬಿಕೆಯಿಟ್ಟು ಪೋಷಕರು ಮಕ್ಕಳನ್ನು ಪರೀಕ್ಷೆಗೆ ಕಳಿಸಿದ್ದು ಆ ನಂಬಿಕೆಯನ್ನು ಉಳಿಸಿಕೊಂಡು ಮಕ್ಕಳನ್ನು ಸುರಕ್ಷಿತವಾಗಿ ಕಳಿಸಿದ್ದೇವೆ. ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಕೋವಿಡ್ ಪರೀಕ್ಷೆ ಮಾಡಲು ಇಚ್ಚಿಸಿದರೆ ಅದಕ್ಕೂ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಡಿಸಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ರಾಜು, ಶಿಕ್ಷಕರು ಉಪಸ್ಥಿತರಿದ್ದರು.
Comments are closed.