ಉಡುಪಿ: ಜಿಲ್ಲೆಯಲ್ಲಿ ಸ್ಥಳೀಯವಾಗಿ ಕೊರೋನ ಪಾಸಿಟಿವ್ ಬಂದಿರುವವರ ಟ್ರಾವೆಲ್ ಹಿಸ್ಟರಿಯನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಪಾಸಿಟಿವ್ ಬಂದವರು ತಮ್ಮ ಪ್ರಾಥಮಿಕ, ಸೆಕೆಂಡರಿ ಸಂಪರ್ಕಗಳ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿದಲ್ಲಿ, ಕೊರೋನ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ತಿಳಿದೂ ಕೂಡಾ ಮಾಹಿತಿಯನ್ನು ನೀಡದೇ ಇರುವವರ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸಿಟಿವ್ ಕಂಡು ಬಂದ ಲ್ಯಾಬ್ ಟೆಕ್ನಿಶಿಯನ್ ಪ್ರಕರಣದಲ್ಲಿ , ಸಂಪರ್ಕದ ಬಗ್ಗೆ ತಪ್ಪು ಮಾಹಿತಿ ನೀಡಿದ್ದು, ನಂತರ ವಿಚಾರಣೆಯಲ್ಲಿ ಅವರು ಮುಂಬೈ ಯಿಂದ ಬಂದವರ ಜೊತೆ ಕಾರ್ಯಕ್ರಮ ನಡೆಸಿರುವುದು ಈಗ ಗೊತ್ತಾಗಿದೆ. ಅವರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾರ್ವಜನಿಕ ಆರೋಗ್ಯದ ದೃಷ್ಠಿಯಿಂದ ಯಾರೇ ಆದರೂ ಮಾಹಿತಿ ಮುಚ್ಚಿಡಬಾರದು, ಪಾಸಿಟಿವ್ ಬಂದವರು ತಮ್ಮ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಕೊರೋನ ನಿಯಂತ್ರಣಕ್ಕೆ ಜಿಲ್ಲಾಡಳಿದೊಂದಿಗೆ ಸಹಕರಿಸಬೇಕು ಎಂದು ಡಿಸಿ ತಿಳಿಸಿದರು.
ಮಹಾರಾಷ್ಟ್ರದಿಂದ ಈಗಲೂ ಪ್ರತಿದಿನ 200-250 ಮಂದಿ ಜಿಲ್ಲೆಗೆ ರೈಲು ಮತ್ತು ಕಾರುಗಳ ಮೂಲಕ ಆಗಮಿಸುತ್ತಿದ್ದಾರೆ. ಎಲ್ಲರನ್ನು ಕೂಡ ಹೋಮ್ ಕ್ವಾರಂಟೇನ್ನಲ್ಲಿ ಇರಿಸಲಾಗುತ್ತಿದೆ. ಇವರಲ್ಲಿ ಗರ್ಭಿಣಿ, ಸಣ್ಣ ಮಕ್ಕಳು ಹಾಗೂ 65 ವರ್ಷಗಳಿಂದ ಮೇಲ್ಪಟ್ಟವರು ಹಾಗೂ ಇತರ ಕಾಯಿಲೆ ಇರುವವರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕ್ವಾರಂಟೈನ್ ಇರುವವರ ಮನೆ ಭೇಟಿಯಲ್ಲಿ ಪ್ರಥಮ ಸ್ಥಾನ : ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೇನ್ ನಿರ್ವಹಣೆ ಅಸಾಧ್ಯವಾಗುವುದರಿಂದ ವಿಶೇಷವಾಗಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಿಂದ ಬಂದವರಿಗೆ ಹೋಮ್ ಕ್ವಾರಂಟೇನ್ ವಿಧಿಸಲು ಸರಕಾರ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಸುಮಾರು ಅಧಿಕಾರಿಗಳು ಶೇ.91ರಷ್ಟು ಹೋಮ್ ಕ್ವಾರಂಟೇನ್ ವಿಧಿಸಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ರಾಜ್ಯದಲ್ಲೇ ಜಿಲ್ಲೆಯು ಮೊದಲ ಸ್ಥಾನ ಪಡೆದುಕೊಂಡಿದೆ. ಹೋಮ್ ಕ್ವಾರಂಟೇನ್ನಲ್ಲಿರುವವರು ಮನೆಯಲ್ಲಿಯೇ ಇದ್ದಾರೆ ಎಂಬುದನ್ನು ದೃಢ ಪಡಿಸಲು ಸೆಲ್ಫಿ ಫೋಟೋ ಕಳುಹಿಸುವುದರಲ್ಲಿ ಉಡುಪಿ ಜಿಲ್ಲೆ ಶೇ.48ರಷ್ಟು ಸಾಧನೆ ಮಾಡಿದೆ. ಇನ್ನು ಹೆಚ್ಚಿನ ಸಾಧನೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
Comments are closed.