ಆರೋಗ್ಯ

ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್’ಗೆ ಕ್ರಮ- ಬ್ಯಾರಿಕೇಡ್ ಅಳವಡಿಕೆ, ಕ್ರಿಮಿನಾಶಕ ಸಿಂಪಡಣೆ (Video)

Pinterest LinkedIn Tumblr

ಕುಂದಾಪುರ: ಮುಂಬೈನಿಂದ ಲಾರಿಯಲ್ಲಿ ಕುಂದಾಪುರ-ಉಡುಪಿ‌ ಮಾರ್ಗವಾಗಿ ಮಂಡ್ಯಕ್ಕೆ ತೆರಳಿದ್ದ ಕೊರೋನಾ ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಲಾರಿ ನಿಲ್ಲಿಸಿ‌ ಊಟ ಮತ್ತು‌ ಸ್ನಾನ‌ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಸೀಲ್ ಡೌನ್ ಮಾಡಲಾಗಿದೆ.‌ಅಲ್ಲದೇ ಪೆಟ್ರೋಲ್ ಬಂಕ್ ಮಾಲಿಕ, ಸಿಬ್ಬಂದಿ, ಸಾಸ್ತಾನ ಟೋಲ್ 6 ಮಂದಿ ಸಿಬ್ಬಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ.

ಸೀಲ್ ಡೌನ್…ಇಲಾಖೆಯಿಂದ ಕ್ರಮ…
ಸೋಂಕಿತ ವ್ಯಕ್ತಿ ಪೆಟ್ರೋಲ್ ಬಂಕ್ ನಲ್ಲಿ ಉಳಿದ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಪೆಟ್ರೋಲ್ ಪಂಪ್ ಸೀಲ್ ಡೌನ್ ಮಾಡಿ ಸೋಮವಾರ ರಾತ್ರಿಯೇ ಜಿಲ್ಲಾಡಳಿತ ಆದೇಶ ನೀಡಿದೆ. ಈ ಹಿನ್ನೆಲೆ ಮಂಗಳವಾರ ಬೆಳಿಗ್ಗೆ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸುತ್ತ ಕೋಟ ಪೊಲೀಸರಿಂದ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಬ್ಯಾಂಡ್ ಹಾಕಿ ಸೀಲ್ ಡೌನ್ ಮಾಡಲಾಗಿದೆ‌. ಇನ್ನು ಪುರಸಭೆ ಕಾರ್ಮಿಕರಿಂದ ಪೆಟ್ರೋಲ್ ಪಂಪ್ ಸುತ್ತ ಔಷದೀಯ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.

ಟ್ರಾವೆಲ್ ಹಿಸ್ಟರಿ ಮೂಲಕ ಪ್ರಕರಣ ಬೆಳಕಿಗೆ….
ಮುಂಬೈನಿಂದ ರಾಷ್ಟ್ರೀಯ ಹೆದ್ದಾರಿ‌ ಮಾರ್ಗವಾಗಿ ಖರ್ಜೂರ ಸಾಗಾಟದ ಲಾರಿಯಲ್ಲಿ ಬಂದ ಸೋಂಕಿತನು ಎ.21 ಸಂಜೆ 4.55ಕ್ಕೆ ಶಿರೂರು ಚೆಕ್ ಪೋಸ್ಟ್ ಮೂಲಕ ಸಾಗಿ ತ್ರಾಸಿ, ತಲ್ಲೂರು ಮಾರ್ಗವಾಗಿ 6.46ಕ್ಕೆ ತೆಕ್ಕಟ್ಟೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕಿಗೆ ಬಂದಿದ್ದ. ಈ ವೇಳೆ ಇನ್ನೆರಡು ಲಾರಿಗಳಿದ್ದು ಅದಕ್ಕೆ ಅಲ್ಲಿ ಡಿಸೆಲ್ ತುಂಬಿಸಲಾಗಿತ್ತು. ಮೂರು‌ ಲಾರಿಗಳು ಪೆಟ್ರೋಲ್ ಬಂಕ್ ನಿಂದ ತೆರಳಿದೆ. ಆದರೆ ರಾತ್ರಿ 9.45ರ ಸುಮಾರಿಗೆ ಮತ್ತೆ ಅದೇ ಮೂರು ಲಾರಿಗಳು ವಾಪಾಸ್ ಪೆಟ್ರೋಲ್ ಬಂಕ್ ಆವರಣಕ್ಕೆ ಬಂದು‌ ನಿಲ್ಲಿಸಿದ್ದು ಅಲ್ಲಿಯೇ ಊಟ, ಸ್ನಾನ ಮಾಡಿ ಲಾರಿಯಲ್ಲಿಯೇ ಮಲಗಿದ್ದಾರೆ. ಬೆಳಿಗ್ಗೆ 3 ಗಂಟೆ ಸುಮಾರಿಗೆ ಎದ್ದು ಪೆಟ್ರೋಲ್ ಬಂಕ್ ನ ಶೌಚಾಲಯದಲ್ಲಿ ನಿತ್ಯ ಕರ್ಮಾಧಿಗಳನ್ನು ಮುಗಿಸಿ ಮುಂಜಾನೆ 3.30ಕ್ಕೆ ಅಲ್ಲಿಂದ ಹೊರಟು ಸಾಸ್ತಾನ ಟೋಲ್ ಗೇಟ್ ಅನ್ನು 3.38ಕ್ಕೆ ದಾಟಿ ಹೋಗಿದ್ದರು. ಇದೆಲ್ಲವೂ ಆಸ್ಪತ್ರೆಗೆ ದಾಖಲಾಗಿ ಕೊರೋನಾ ಪಾಸಿಟಿವ್ ವರದಿ ಬಂದ ಬಳಿಕ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ‌ ಮೂಲಕ ತಿಳಿದುಬಂದಿತ್ತು. ಪೆಟ್ರೋಲ್ ಬಂಕ್ ಹುಡುಕಾಟದ ವೇಳೆ ತೆಕ್ಕಟ್ಟೆ ಎಂಬುದು ತಿಳಿದಿದ್ದು ಸಿಸಿ ಟಿವಿ ದಾಖಲೆಗಳ ಪರಿಶೀಲನೆ ವೇಳೆ ಅದೇ ಲಾರಿ ಬಂಕ್ ನಲ್ಲಿ ಉಳಿದಿರುವುದು ದೃಢವಾಗಿತ್ತು.

ಆರೋಗ್ಯ ಇಲಾಖೆಯಿಂದಲೂ ಕ್ರಮ…
ಸೋಮವಾರ ತಡರಾತ್ರಿಯೇ ಕುಂದಾಪುರ ತಾ. ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ಬೈಂದೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು. ಮಂಗಳವಾರ ಬೆಳಿಗ್ಗೆ ಆಶಾ ಕಾರ್ಯಕರ್ತೆಯರು ಪೆಟ್ರೋಲ್ ಬಂಕ್ ಆಸುಪಾಸಿನ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಕ್ವಾರೆಂಟೈನ್ ಆಗಬೇಕಿರುವ ವಿವರಗಳನ್ನು ಸಂಗ್ರಹವನ್ನು ಮಾಡುವ ಕಾರ್ಯವಾಗುತ್ತಿದೆ.

ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್ ವಿಚಾರದಲ್ಲಿ ಜನರು ಯಾವುದೇ ಭಯಪಡುವುದು ಬೇಡ ಎಂದು ಜಿಲ್ಲಾಡಳಿತ ತಿಳಿಸಿದೆ.

(ವರದಿ- ಯೋಗೀಶ್ ಕುಂಭಾಸಿ)

ಇದನ್ನು ಓದಿರಿ-

Big Breaking: ತ್ರಾಸಿಯಲ್ಲ….ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್, ಹಲವರು ಕ್ವಾರೆಂಟೈನ್‌ಗೆ

 

Comments are closed.