ಆರೋಗ್ಯ

ಮಣಿಪಾಲ ಕೆ.ಎಂ.ಸಿ, ಉಡುಪಿ ಟಿಎಂಎ ಪೈ ಆಸ್ಪತ್ರೆಯ ಒಪಿಡಿ ಸೌಲಭ್ಯ ಇಂದಿನಿಂದ ಬಂದ್

Pinterest LinkedIn Tumblr

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಹಾಗೂ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಎಲ್ಲಾ ಹೊರರೋಗಿ, ಒಳರೋಗಿ ಮತ್ತು ತುರ್ತುಸೇವೆ ವಿಭಾಗವನ್ನು ಇಂದಿನಿಂದ ರದ್ದುಪಡಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯು ಕರೋನಾ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮಾ.27 ರಿಂದ ಎ.15ರವರೆಗೆ ಹೊರರೋಗಿ ವಿಭಾಗದ ಚಿಕಿತ್ಸೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅದಾಗಿಯೂ, ವೈದ್ಯಕೀಯ ತುರ್ತು ಚಿಕಿತ್ಸೆ ಮತ್ತು ತ್ವರಿತ ಅವಶ್ಯಕ ಚಿಕಿತ್ಸೆಯಲ್ಲಿ ಬದಲಾವಣೆ ಸೂಚಿಸಿದೆ.

ಜ್ವರ, ಕೆಮ್ಮು ಮತ್ತು ಇನ್ನಿತರೆ ಅಗತ್ಯ ತಪಾಸಣೆಗೆ ಬರುವ ರೋಗಿಗಳು ನೇರವಾಗಿ ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡತಕ್ಕದ್ದು. ಮುಂದಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಆಸ್ಪತ್ರೆಯ ಸಂಬಂಧಿತ ವಿಭಾಗದಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು. ಕೀಮೋಥೆರಪಿ ಮತ್ತು ರೇಡಿಯೋಥೆರಪಿ ರೋಗಿಗಳು ನೇರವಾಗಿ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಗೆ ಬರತಕ್ಕದ್ದು. ಗರ್ಭಿಣಿ ಸ್ತ್ರೀಯರು ನೇರವಾಗಿ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಬರತಕ್ಕದ್ದು. ಡಯಾಲಿಸಿಸ್‍ನಲ್ಲಿರುವವರು ನೇರವಾಗಿ ಡಯಾಲಿಸಿಸ್ ಕೇಂದ್ರಕ್ಕೆ ಬರತಕ್ಕದ್ದು. ಪ್ರಯೋಗಾಲಯ ಪರೀಕ್ಷಾ ಸೇವೆಯು ತುರ್ತು ಸಂದರ್ಭಕ್ಕೆ ಮಾತ್ರ ಅನ್ವಯಿಸುವುದು. ಮಕ್ಕಳಿಗೆ ಕೊಡಲಾಗುವ ಲಸಿಕಾ ಸೌಲಭ್ಯ ಕೂಡಾ ಎ.15 ಇರುವುದಿಲ್ಲ ಎಂದು ತಿಳಿಸಿದೆ.

ಇವೆಲ್ಲದರ ಹೊರತಾಗಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ತಿಳಿಸಿದೆ.

27 ಮಾರ್ಚ್ 2020 ಶುಕ್ರವಾರದಿಂದ ಅನ್ವಯವಾಗುವಂತೆ ಡಾ. ಟಿಎಂಎ ಪೈ ಆಸ್ಪತ್ರೆ, ಉಡುಪಿ ಯಲ್ಲಿ ಎಲ್ಲಾ ಹೊರರೋಗಿ, ಒಳರೋಗಿ ಮತ್ತು ತುರ್ತುಸೇವೆ ವಿಭಾಗವನ್ನು ಮುಚ್ಚಲಾಗುವುದು. ತುರ್ತುಸೇವೆ ಅವಶ್ಯವಿರುವ ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿಯ ಎಲ್ಲಾ ರೋಗಿಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಭೇಟಿ ನೀಡುವಂತೆ ಈ ಮೂಲಕ ತಿಳಿಸಿದೆ.

Comments are closed.