ಆರೋಗ್ಯ

ತ್ಯಾಜ್ಯ ವಿಲೇವಾರಿಯಿಂದ ಬರುವ ಆದಾಯ , ಆರೋಗ್ಯ ಸೇವೆಯ ಬಳಕೆಗೆ

Pinterest LinkedIn Tumblr

ಉಡುಪಿ(ವಿಶೇಷ ವರದಿ): ಕೆರೆಯ ನೀರನ್ನು ಕರೆಗೆ ಚೆಲ್ಲಿ ಎಂಬಂತೆ, ಎಲ್ಲಿಂದ ಆದಾಯ ಬರುವುದೋ, ಆ ಆದಾಯವನ್ನು ಆದಾಯ ತಂದುಕೊಡುವ ಸಂಸ್ಥೆಯ ಅಭಿವೃದ್ದಿಗೆ ಬಳಸುತ್ತಿರುವುದು ಉಡುಪಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರಂಭಿಸಲಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಹೆಗ್ಗಳಿಕೆ..

ಉಡುಪಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ಕೇಂದ್ರಗಳ ಯಶೋಗಾಥೆಗಳು ಒಂದು ಕೇಂದ್ರಕ್ಕಿಂತ ಒಂದು ಭಿನ್ನ, ಕೆಲವೆಡೆ ಗ್ರಾಮಗಳಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಗ್ರಾಮದಲ್ಲಿ ಸ್ವಚ್ಛತೆಗೆ ಕಾರಣವಾಗಿದ್ದರೆ, ಹಲವು ಗ್ರಾಮಗಳಲ್ಲಿ ಕೇಂದ್ರಗಳ ಸಿಬ್ಬಂದಿಗೆ ಆದಾಯ ತಂದುಕೊಡುವ ಮೂಲಗಳಾಗಿವೆ, ಆದರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭವಾಗಿರುವ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ಕೇಂದ್ರವು ಆಸ್ಪತ್ರೆ ಪರಿಸರದಲ್ಲಿ ಸ್ವಚ್ಛತೆ ಮೂಡಿಸುವುದರ ಜೊತೆಗೆ, ಸಂಗ್ರಹಗೊಂಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಮಾರಾಟ ಮಾಡುವ ಮೂಲಕ ದೊರೆಯುವ ಆದಾಯವನ್ನು ಜಿಲ್ಲಾ ಆರೋಗ್ಯ ರಕ್ಷಾ ಕವಚ ನಿಧಿಗೆ ನೀಡುವ ಮೂಲಕ, ಆಸ್ಪತ್ರೆಯ ಅಭಿವೃದ್ಧಿಗೆ ಅಗತ್ಯವಿರುವ ಔಷಧ ಮತ್ತು ಯಂತ್ರೋಪಕರಣಗಳು ಹಾಗೂ ರೋಗಿಗಳಿಗೆ ಒದಗಿಸುವ ಸೌಲಭ್ಯಗಳ ಖರೀದಿಗೆ ಬಳಸಲಾಗುತ್ತಿದೆ.

ಆಸ್ಪತ್ರೆಯ ತ್ಯಾಜ್ಯ ಎಂದರೆ ರೋಗಿಯ ರಕ್ತಸಿಕ್ತ ಬ್ಯಾಂಡೇಜ್, ಹತ್ತಿ, ಸಿರೆಂಜ್‍ಗಳು ಎಂಬ ಭಾವನೆ ಇದೆ, ಆದರೆ ಈ ತ್ಯಾಜ್ಯಗಳು ವೈದ್ಯಕೀಯ ತ್ಯಾಜ್ಯವಾಗಿ ಬೇರೆಡೆ ತೆರಳುತ್ತವೆ, ಆದರೆ ಆಸ್ಪತ್ರೆಯಲ್ಲಿ ಬಳಸುವ ಸಿರೆಂಜ್ ಪ್ಯಾಕೆಟ್ ಮೇಲಿನ ಕವರ್‍ಗಳು, ಮಾತ್ರೆಗಳ ಮೇಲಿನ ಕವರ್, ಔಷಧದ ಪ್ಯಾಂಕಿಂಗ್ ಬಾಕ್ಸ್‍ಗಳು, ರಟ್ಟಿನ ಬಾಕ್ಸ್‍ಗಳು, ಖಾಲಿ ಗ್ಲುಕೋಸ್ ಬಾಟೆಲ್‍ಗಳು, ಆಸ್ಪತ್ರೆ ಆವರಣದಲ್ಲಿ ದೊರೆಯುವ ಖಾಲಿ ನೀರಿನ ಬಾಟೆಲ್‍ಗಳು ಮುಂತಾದ ನಿರುಪಯುಕ್ತ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಬೇರ್ಪಡಿಸಿ ಅವುಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಿ, ಆದಾಯವನು ಗಳಿಸಲಾಗುತ್ತಿದೆ.
ಪ್ರಾರಂಭದಲ್ಲಿ ಪ್ರತಿ ತಿಂಗಳು 250 ಕೆ.ಜಿ ಯಷ್ಟು ಘನ ತ್ಯಾಜ್ಯ ಆಸ್ಪತ್ರೆಯಲ್ಲಿ ದೊರೆಯುತ್ತಿದ್ದು, ಪ್ರಸ್ತುತ ಪ್ರತಿ ತಿಂಗಳು 1 ಟನ್ ನಷ್ಟು ತ್ಯಾಜ್ಯ ದೊರೆಯುತ್ತಿದೆ, ಇದನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿ ಮಾರಾಟಕ್ಕೆ ಸಿದ್ದಪಡಿಸುತ್ತಿದ್ದು, ಕಳೆದ ಬಾರಿ ಸುಮಾರು 5 ಟನ್ ನಷ್ಟು ಮಾರಾಟ ಮಾಡಿ ರೂ. 33000 ಗಳಿಸಿದ್ದು, ಇದನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ಕವಚದ ಬಳಕೆಗೆ ನೀಡಲಾಗಿದೆ, ಪ್ರಸ್ತುತ ಸುಮಾರು 7 ಟನ್ ನಷ್ಟು ತ್ಯಾಜ್ಯ ಸಂಗ್ರಹಿಸಿದ್ದು, ಕಳೆದ ಬಾರಿಗಿಂತ ಈ ಬಾರಿ ಸಂಗ್ರಹಗೊಂಡ ತ್ಯಾಜ್ಯವನ್ನು ಹೆಚ್ಚಿನ ಮುತುವರ್ಜಿ ವಹಿಸಿ, ಸಮರ್ಪಕ ರೀತಿಯಲ್ಲಿ ವಿಂಗಡಿಸಿದ್ದು, ಸುಮಾರು ರೂ.60000.00 ದ ಆದಾಯ ನಿರೀಕ್ಷಿಸಿದ್ದು, ವಸ್ತುಗಳ ಹರಾಜು ಕುರಿತಂತೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎನ್ನುತ್ತಾರೆ ಈ ಕೇಂದ್ರದ ಮೇಲ್ವಿಚಾರಕಿ ಜ್ಯೋತಿ, ಇವರಿಗೆ ಸಹಾಯಕರಾಗಿ ರೇವತಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲದೇ ಆಸ್ಪತ್ರೆ ಮುಂದಿರುವ ಪಾರ್ಕ್‍ನಲ್ಲಿ ಸಂಗ್ರಹವಾಗುವ ಮರಗಿಡಗಳ ಕಸವನ್ನು ಸಂಗ್ರಹಿಸಿ ಗೊಬ್ಬರ ತಯಾರಿಸಲು, ಈ ಕೇಂದ್ರದಲ್ಲಿ ಘಟಕವನ್ನು ಆರಂಭಿಸಿದ್ದು, ಇಲ್ಲಿ ತಯಾರಾದ ಗೊಬ್ಬರವನ್ನು ಪ್ರತಿ ಬುಟ್ಟಿಗೆ ರೂ.20 ರಂತೆ ಮಾರಾಟ ಮಾಡಲಾಗುತ್ತಿದ್ದು, ಈಗಾಗಲೇ ಸಂಗ್ರಹಗೊಂಡಿದ್ದ ಗೊಬ್ಬರವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಖರೀದಿಸಿದ್ದು, ಮತ್ತೊಮ್ಮೆ ಗೊಬ್ಬರ ತಯಾರಿಕೆ ಆರಂಭಗೊಂಡಿದೆ, ಅಲ್ಲದೇ ಇದೇ ಗೊಬ್ಬರವನ್ನು ಬಳಸಿ ಕೇಂದ್ರದಲ್ಲಿ ಚಿಕ್ಕ ಕೈತೋಟ ಹಾಗೂ ಔಷಧಿಯ ಗಿಡಗಳನ್ನು ಬೆಳೆಸಲಾಗುತ್ತಿದೆ.

ತ್ಯಾಜ್ಯ ಎಂದರೆ ಮೂಗು ಮುಚ್ಚುವವರು ಒಮ್ಮೆ ಈ ಕೇಂದ್ರಕ್ಕೆ ಭೇಟಿ ನೀಡಬೇಕು, ತ್ಯಾಜ್ಯದ ಯಾವುದೇ ದೃಶ್ಯ ಹಾಗೂ ದುರ್ವಾಸನೆ ಈ ಕೇಂದ್ರದಲ್ಲಿಲ್ಲ, ಪಕ್ಕದಲ್ಲೇ ಸರ್ಕಾರಿ ಕಚೇರಿಗಳಿದ್ದರೂ ಯಾರಿಗೂ ಈ ಕೇಂದ್ರದಿಂದ ತೊಂದರೆಯಾಗಿಲ್ಲ, ವಾಸ್ತವವಾಗಿ ಇಲ್ಲಿ ತ್ಯಾಜ್ಯ ವಿಂಗಡನೆ ನಡೆಯುತ್ತದೆ ಎನ್ನುವುದೇ ಹೊರ ನೋಟಕ್ಕೆ ಕಾಣುವುದಿಲ್ಲ. ಮುಂದಿನ ಹಂತದಲ್ಲಿ ಆಸ್ಪತ್ರೆಯಲ್ಲಿನ ಹಸಿ ತ್ಯಾಜ್ಯ ಎಂದರೆ ಉಳಿದ ಊಟ, ಹಣ್ಣಿನ ಸಿಪ್ಪೆಗಳು ಮುಂತಾದವುಗಳನ್ನು ವಿಲೇವಾರಿ ಮಾಡಲು ಬಯೋಗ್ಯಾಸ್ ಘಟಕ ಆರಂಭಗೊಳ್ಳಲಿದ್ದು ಇದರಿಂದ ಆಸ್ಪತ್ರೆಯ ಬಳಕೆಗೆ ಗ್ಯಾಸ್ ಹಾಗೂ ಉತ್ತಮ ಗೊಬ್ಬರ ಸಹ ದೊರೆಯಲಿದೆ.
ಮಹಿಳೆಯರೇ ನಿರ್ವಹಿಸುತ್ತಿರುವ ಈ ಎಸ್.ಎಲ್.ಆರ್.ಎಂ ಘಟಕದಲ್ಲಿ ತ್ಯಾಜ್ಯವೆಂದರೆ ಕಸವಲ್ಲ ಅದು ಸಂಪನ್ಮೂಲ ಎಂಬುವುದು ಅಕ್ಷರ ಸಹ ಕಾಣಬಹುದಾಗಿದೆ.

Comments are closed.