ಕರಾವಳಿ

ಮಹಿಳೆ-ಮಗುವಿನ ಮೇಲಿನ ಆಯಸಿಡ್ ದಾಳಿ ಪ್ರಕರಣ: ಪೊಲೀಸರ ವರ್ತನೆ ಬಗ್ಗೆ ಸಿಡುಮಿಡಿಗೊಂಡ ಎನ್‌ಸಿಡಬ್ಲ್ಯೂ ಸದಸ್ಯೆ ಶ್ಯಾಮಲಾ ಕುಂದರ್

Pinterest LinkedIn Tumblr

ಮಂಗಳೂರು, ಫೆಬ್ರವರಿ.12: ಪುತ್ತೂರಿನಲ್ಲಿ ಮಹಿಳೆ-ಮಗುವಿನ ಮೇಲೆ ನಡೆದ ಆಯಸಿಡ್ ದಾಳಿ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ನಡೆದುಕೊಂಡ ವರ್ತನೆ ಕ್ಷಮಿಸಲಾಗದು. ಈ ಪ್ರಕರಣದಲ್ಲಿ ಪೊಲೀಸರಿಂದ ಕ್ಷಮಿಸಲಾರದಷ್ಟು ಕರ್ತವ್ಯ ಲೋಪವಾಗಿರುವುದು ಸತ್ಯ. ಸಂತ್ರಸ್ತೆ ಪೊಲೀಸರ ಮೇಲಿಟ್ಟ ಭರವಸೆ ಇಲ್ಲಿ ಹುಸಿಯಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.

ಪುತ್ತೂರಿನಲ್ಲಿ ಮಹಿಳೆ-ಮಗುವಿನ ಮೇಲೆ ನಡೆದ ಆಯಸಿಡ್ ದಾಳಿಯಿಂದ ನಗರದ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಯಸಿಡ್ ದಾಳಿ ಸಂತ್ರಸ್ತೆಯನ್ನು ಅವರು ಮಂಗಳವಾರ ಭೇಟಿಯಾಗಿ ಸಮಸ್ಯೆ ಆಲಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಹಿಳೆ-ಮಗುವಿನ ಮೇಲೆ ನಡೆದ ಆಯಸಿಡ್ ದಾಳಿ ಖಂಡನೀಯ. ಸಂತ್ರಸ್ತೆ ಆಯಸಿಡ್ ಉರಿ ತಾಳದೇ ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ನಡೆದುಕೊಂಡ ವರ್ತನೆ ಕ್ಷಮಿಸಲಾಗದು. ಈ ಪ್ರಕರಣದಲ್ಲಿ ಪೊಲೀಸರು ಮಾನವೀಯತೆ ಇಲ್ಲದ ಕುರುಡರಾಗಿದ್ದರು ಎಂದು ಶ್ಯಾಮಲಾ ಕುಂದರ್ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯಲ್ಲಿ ಕಿಟಕಿಯಿಂದ ಆಯಸಿಡ್ ದಾಳಿ ನಡೆಸಲಾಗಿದೆ . ಉರಿಯನ್ನು ತಾಳಲಾಗದೇ ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಸಂತ್ರಸ್ತರು ಅನ್ಯಾಯವಾದಾಗ, ರಕ್ಷಣೆ ನೀಡಲು ಕೂಡಲೇ 100 ನಂಬರ್‌ಗೆ ಕರೆ ಮಾಡುತ್ತಾರೆ. ಆದರೆ ಇಲ್ಲಿ ಕರೆಗೆ ಸ್ಪಂದಿಸದಿದ್ದಾಗ ಮಹಿಳೆ ಘಟನೆ ಸ್ಥಳದಿಂದ ಮೂರು ಕಿ.ಮೀ. ದೂರದ ಪೊಲೀಸ್ ಠಾಣೆಗೆ ಉರಿ ತಾಳಿಕೊಂಡು ನಡೆದುಕೊಂಡೇ ತೆರಳಿದ್ದಾರೆ. ಈ ಸಂದರ್ಭ ದೂರನ್ನು ಲಿಖಿತವಾಗಿ ಬರೆದು ಕೊಡಲು ಸೂಚಿಸಿದ್ದರು. ‘ಉರಿ ತಾಳಲಾಗುತ್ತಿಲ್ಲ; ಬರೆದುಕೊಡಲಾಗಲ್ಲ’ ಎಂದು ಅಂಗಲಾಚುತ್ತಿದ್ದರೂ ಕೂಡಲೇ ಸ್ಪಂದಿಸಿಲ್ಲ. ಸಂತ್ರಸ್ತೆಯನ್ನು ಪೊಲೀಸರು ಆಸ್ಪತ್ರೆಗೆ ಕಳುಹಿಸಲು ವಾಹನ ವ್ಯವಸ್ಥೆ ಮಾಡಿ ಬಳಿಕ ದೂರು ಪಡೆಯಬಹುದಿತ್ತು. ಈ ವೇಳೆ ಪೊಲೀಸರ ಮಾನವೀಯತೆ ಮಣ್ಣಾಗಿತ್ತೇ ಎಂದು ಪ್ರಶ್ನಿಸಿದರು.

ಪೊಲೀಸರ ಒತ್ತಡದ ಕೆಲಸದ ಬಗ್ಗೆ ಕನಿಕರವಿದೆ. ಮಾನವೀಯತೆ ಮೆರೆಯಬೇಕಾದ ಸಂದರ್ಭವೇ ಮನಸುಗಳು ಕಲ್ಲಾದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಸಂತ್ರಸ್ತೆಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಸಂತ್ರಸ್ತೆಗೆ ‘ಹೆಣ್ಣಾಗಿಯೇ ಹುಟ್ಟಿದ್ದು ತಪ್ಪು’ ಎನ್ನುವ ಭಾವನೆ ಬರುತ್ತಿದೆ. ಮಾನಸಿಕವಾಗಿ ಸ್ಥೈರ್ಯ ನೀಡಿದ್ದೇನೆ. ಸಂತ್ರಸ್ತೆ ಗುಣಮುಖರಾಗುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ನಿನ್ನ ಜತೆ ಇರಲಿದೆ ಎಂದು ಧೈರ್ಯ ಹೇಳಿದ್ದೇನೆ ಎಂಬುದಾಗಿ ಅವರು ತಿಳಿಸಿದರು.

ಆಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಡಬ್ಲ್ಯೂನಿಂದ ಸುಮೊಟೊ ಕೇಸು ದಾಖಲಿಸಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ಸಲಹೆ-ಸೂಚನೆ ನೀಡಿದ್ದೇನೆ. ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಪತ್ರ ಬರೆದು, ಶೀಘ್ರ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.

ಪ್ರಕರಣದ ತನಿಖೆ ಹಾಗೂ ಕರ್ತವ್ಯ ಲೋಪ ಎಸಗಿರುವ ಪೊಲೀಸರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಂದ ಮಾಹಿತಿ ಪಡೆದು, ಸೂಚನೆ ನೀಡಲಾಗಿದೆ. ಒಂದು ತಿಂಗಳು ನಂತರ ಪ್ರಕರಣದ ಬೆಳವಣಿಗೆಯ ಮಾಹಿತಿಯನ್ನು ಪಡೆಯಲಿದ್ದೇನೆ ಎಂದರು.

ಮಹಿಳಾ ಸಬಲೀಕರಣವು ಕೇವಲ ಭಾಷಣ ಮಾಡಿದರೆ ಕಾರ್ಯರೂಪಕ್ಕೆ ಬರುವುದಿಲ್ಲ. ಆಯಸಿಡ್ ದಾಳಿ ನಡೆಯುವ ಪ್ರಕರಣಗಳು ಬುದ್ಧಿವಂತರ ಜಿಲ್ಲೆಯಲ್ಲಿ ನಡೆಯುತ್ತಿರುವುದು ಖೇದಕರ. ಸಂತ್ರಸ್ತೆಗೆ ಆಕೆಯ ಕುಟುಂಬ ಹಾಗೂ ಪತಿಯ ಸಹೋದರನಿಂದಲೇ ಅನ್ಯಾಯ ಆಗಿದೆ. ಪತಿಯ ಸಹೋದರ ತನ್ನೊಂದಿಗೆ ನಿರಂತರವಾಗಿ ಕೆಟ್ಟದಾಗಿ ವರ್ತಿಸುತ್ತಿದ್ದ. ಪತಿ ವಿಯೋಗದ ನಂತರವೂ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ ಎಂಬುದಾಗಿ ಸಂತ್ರಸ್ತೆ ನೋವು ಹಂಚಿಕೊಂಡಿದ್ದಾರೆ ಎಂದರು.

ಆಯಸಿಡ್ ದಾಳಿ ಸಂತ್ರಸ್ತೆಯ ಮೂವರು ಹೆಣ್ಣುಮಕ್ಕಳಿಗೆ ಶಿಕ್ಷಣ ಸಹಿತ ಎಲ್ಲ ಸೌಕರ್ಯ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಯಸಿಡ್ ಎರಚಿ ರಾಕ್ಷಸೀಯ ವರ್ತನೆ ತೋರಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ ಸಹಕಾರ ನೀಡಲಾಗುವುದು. ಮಾನಸಿಕ ಸ್ಥೈರ್ಯ ತುಂಬಲು ಸಖೀ ಕೇಂದ್ರದಿಂದ ಕೌನ್ಸಿಲರ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆ ಸ್ವಾಭಿಮಾನದಿಂದ ಬದುಕುವಷ್ಟು ಸೌಲಭ್ಯವನ್ನು ನೀಡಲು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚುವರಿ ಪೊಲೀಸ್ ರಕ್ಷಣೆ ನೀಡಲೂ ನಿರ್ದೇಶಿಸಲಾಗಿದೆ ಎಂದು ಎನ್‌ಸಿಡಬ್ಲ್ಯೂ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.

ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎ.ಉಸ್ಮಾನ್, ವೆನ್ಲಾಕ್ ಆಸ್ಪತ್ರೆಯ ಸರ್ಜನ್ ಶಿವಪ್ರಕಾಶ್,  ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.