ಆರೋಗ್ಯ

ಆಹಾರ ಸೇವನೆ ನಿಧಾನವಾಗಿದರೆ ಆರೋಗ್ಯವು ಉತ್ತಮವಾಗಿರುವುದು, ನಿಜನಾ ತಿಳಿಯಿರಿ..!

Pinterest LinkedIn Tumblr

ಆಹಾರದ ಪ್ರತಿಯೊಂದು ತುತ್ತಿನ ಸ್ವಾದವನ್ನು ಅನುಭವಿಸುತ್ತ ಊಟ ಮಾಡಿದರೆ ಅದು ನಮ್ಮ ಹೊಟ್ಟೆಯನ್ನು ಸೇರಿದ ಬಳಿಕ ತೃಪ್ತಿಯನ್ನುಂಟು ಮಾಡುತ್ತದೆ. ಇದು ಇಂದಿನ ದಿನಗಳಲ್ಲಿ ನಾವೆಲ್ಲರೂ ಮರೆಯುತ್ತಿರುವ ಮುಖ್ಯ ವಿಷಯವಾಗಿದೆ. ಸಮಯಾಭಾವ ಮತ್ತು ದೈನಂದಿನ ಚಟುವಟಿಕೆಗಳ ಒತ್ತಡದಿಂದಾಗಿ ನಾವು ಆಹಾರ ಸೇವನೆಯಲ್ಲಿಯೂ ಅವಸರವನ್ನು ಪ್ರದರ್ಶಿಸುತ್ತೇವೆ. ದಿಢೀರ್ ಆಹಾರದಂತೆ ನಮಗೆ ಎಲ್ಲವೂ ದಿಢೀರ್ ಆಗಬೇಕು. ಗಡಿಬಿಡಿಯ ಜೀವನದಲ್ಲಿ ನಾವು ನಮ್ಮ ಹಸಿವೆಯನ್ನು ನೀಗಿಸಿಕೊಳ್ಳಲು ಊಟ ಮಾಡುತ್ತಿದ್ದೇವೆಯೇ ಹೊರತು ತೃಪ್ತಿಗಲ್ಲ್ಲ ಮತ್ತು ಇದು ಕಳವಳದ ವಿಷಯವಾಗಿದೆ.

ಕೆಲವರು ಎಷ್ಟೊಂದು ಅವಸರದಲ್ಲಿರುತ್ತಾರೆಂದರೆ ಅವರಿಗೆ ತಾವು ಸೇವಿಸಿದ ಆಹಾರದ ರುಚಿಯೂ ಗೊತ್ತಾಗುವುದಿಲ್ಲ. ಅವರ ರುಚಿಮೊಗ್ಗುಗಳು ರುಚಿಯನ್ನು ಗ್ರಹಿಸುವ ಮೊದಲೇ ಊಟದ ಬಟ್ಟಲು ಖಾಲಿಯಾಗಿರುತ್ತದೆ. ಆಹಾರವು ಪೂರ್ಣವಾಗಿ ವಿಭಜನೆಗೊಳ್ಳಲು ಮತ್ತು ಅದರಲ್ಲಿನ ಪೌಷ್ಟಿಕಾಂಶಗಳು ಶರೀರದಲ್ಲಿ ಸಮಾನವಾಗಿ ಹಂಚಿಕೆಯಾಗಲು ನೆಮ್ಮದಿಯಿಂದ ನಿಧಾನವಾಗಿ ಊಟವನ್ನು ಮಾಡುವುದು ಅಗತ್ಯವಾಗಿದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಆಹಾರವನ್ನು ಚೆನ್ನಾಗಿ ಜಗಿಯುತ್ತ ನಿಧಾನವಾಗಿ ಊಟ ಮಾಡಲು ನಾವು ಸಮಯವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.

ನಿಧಾನ ಆಹಾರ ಸೇವನೆಯ ಲಾಭಗಳು

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಸಣ್ಣ ಸಣ್ಣ ತುತ್ತುಗಳನ್ನು ತೆಗೆದುಕೊಂಡು ಚೆನ್ನಾಗಿ ಜಗಿಯುತ್ತ ಊಟ ಮಾಡಿದರೆ ಜಠರದಲ್ಲಿ ಆಹಾರ ಜೀರ್ಣಗೊಳ್ಳುವ ಪ್ರಕ್ರಿಯೆ ಸುಗಮವಾಗುತ್ತದೆ. ತಾಂತ್ರಿಕವಾಗಿ ಹೇಳಬೇಕೆಂದರೆ ನಾವು ಬಾಯಿಗಿಟ್ಟ ಒಂದು ತುತ್ತನ್ನು ಕನಿಷ್ಠ 20 ಸಲವಾದರೂ ಜಗಿಯಬೇಕು. ನಾವು ಆಹಾರವನ್ನು ಹೆಚ್ಚು ಜಗಿದಷ್ಟೂ ಅದನ್ನು ವಿಭಜಿಸಲು ಜೀರ್ಣಾಂಗಕ್ಕೆ ಸುಲಭವಾಗುತ್ತದೆ. ಅವಸರದಿಂದ ಊಟ ಮಾಡುವವರು ಆಗಾಗ್ಗೆ ಹೊಟ್ಟೆಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಜಠರದ ಮೇಲಿನ ಒತ್ತಡ ಕಡಿಮೆಯಾದಷ್ಟೂ ಅಜೀರ್ಣವುಂಟಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ತೂಕ ಇಳಿಕೆಗೆ ಸಹಕಾರಿ
ನಿಧಾನವಾಗಿ ಆಹಾರವನ್ನು ಸೇವಿಸುವುದು ಶರೀರದ ತೂಕ ಇಳಿಕೆಗೆ ನೆರವಾಗುತ್ತದೆ ಎನ್ನುವುದನ್ನು ಹಲವಾರು ಸಂಶೋಧನೆಗಳು ತೋರಿಸಿವೆ. ಸಣ್ಣ ತುತ್ತುಗಳನ್ನು ತೆಗೆದುಕೊಂಡು 20 ಬಾರಿ ಜಗಿಯುತ್ತಿದ್ದರೆ ನೀವು ಸಾಕಷ್ಟು ಸುಸ್ತು ಹೊಡೆದಿರುತ್ತೀರಿ ಮತ್ತು ನಿಮ್ಮ ಹೊಟ್ಟೆ ತುಂಬಿದೆ ಎಂದು ಮಿದುಳು ಭಾವಿಸುತ್ತದೆ. ಇದು ನೀವು ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯುತ್ತದೆ ಮತ್ತು ತೂಕ ಇಳಿಕೆಗೆ ನೆರವಾಗುತ್ತದೆ.

ಒತ್ತಡವನ್ನು ನಿವಾರಿಸುತ್ತದೆ
ನೀವು ನಿಧಾನವಾಗಿ ಊಟ ಮಾಡುತ್ತಿದ್ದಾಗ ನಿಮ್ಮ ಗಮನವೆಲ್ಲ ಆಹಾರದ ಮೇಲೆಯೇ ಇರುತ್ತದೆ. ಇದು ಒತ್ತಡ ಮತ್ತು ಋಣಾತ್ಮಕ ಚಿಂತನೆಗಳನ್ನು ದೂರವಿಡಲು ನೆರವಾಗುತ್ತದೆ. ನೀವು ಊಟ ಮುಗಿಸಿದಾಗ ನಿಮ್ಮ ಮನಸ್ಸು ನಿರಾಳವಾಗಿರುತ್ತದೆ ಮತ್ತು ನೀವು ಯಾವುದೇ ಒತ್ತಡಕ್ಕೆ ಸಿಲುಕದೆ ಅಗತ್ಯ ವಿಷಯಗಳ ಮೇಲೆ ಸುಲಭವಾಗಿ ಗಮನವನ್ನು ಕೇಂದ್ರೀಕರಿಸಬಹುದು.

ಊಟದ ನಿಜವಾದ ಅನುಭವವನ್ನು ನೀಡುತ್ತದೆ
ಊಟದ ಆನಂದವನ್ನು ಅನುಭವಿಸಲು ನೀವು ಖುಷಿಖುಷಿಯಾಗಿ ಆಹಾರ ಸೇವಿಸುವುದು ಮುಖ್ಯವಾಗುತ್ತದೆ. ನೀವು ಅವಸರವಸರವಾಗಿ ತಿಂದಾಗ ನಿಮ್ಮಿಷ್ಟದ ಆಹಾರವಾಗಿದ್ದರೂ ಅದರ ನಿಜವಾದ ರುಚಿ ನಿಮಗೆ ದೊರೆಯುವುದಿಲ್ಲ,ತೃಪ್ತಿಯೂ ಸಿಗುವುದಿಲ್ಲ. ನೀವು ನಿಧಾನ ವಾಗಿ,ಶಾಂತಚಿತ್ತದಿಂದ ಊಟ ಮಾಡಿದಾಗ ಅದು ಸಾಮಾನ್ಯವಾಗಿದ್ದರೂ ಆಪ್ಯಾಯಮಾನವೆನಿಸುತ್ತದೆ.

ಜೀವನದತ್ತ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ
ಸುಖದ ಬದುಕು ಬಹುಶಃ ನಿಧಾನವಾಗಿ ಆಹಾರ ಸೇವನೆಗೆ ಮುಖ್ಯ ಕಾರಣವಾಗಿದೆ. ನೀವು ಆಹಾರದ ರುಚಿಯನ್ನು ಅನುಭವಿಸು ತ್ತಿರುವಾಗ ನಿಮ್ಮ ಜೀವನದಲ್ಲಿ ಆಹಾರದ ಪ್ರಮುಖ ಪಾತ್ರ ಗೊತ್ತಾಗುತ್ತದೆ. ನೀವು ವಿವಿಧ ಸ್ವಾದಗಳನ್ನು ಸವಿಯುತ್ತಿದ್ದರೆ ನಿಮ್ಮ ರುಚಿಮೊಗ್ಗುಗಳು ಹೆಚ್ಚು ಕ್ಷಮತೆಯನ್ನು ಪಡೆಯುತ್ತವೆ ಮತ್ತು ಆಹಾರ ಸೇವನೆಯನ್ನು ನೀವು ಆನಂದಿಸುತ್ತೀರಿ. ಕೆಲವೊಮ್ಮೆ ಇದು ಅಡಿಗೆ ಮಾಡುವ ಆಸಕ್ತಿಯನ್ನೂ ಮೂಡಿಸುತ್ತದೆ ಮತ್ತು ಅಡಿಗೆ ಕಲೆ ಬದುಕಿನಲ್ಲಿ ಮುಖ್ಯವಾಗಿರುವ ಕೌಶಲ್ಯವೂ ಹೌದು. ಅಡುಗೆ ತಯಾರಿಯು ಅತ್ಯುತ್ತಮ ಒತ್ತಡ ನಿವಾರಕಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಇದರರ್ಥ,ನೀವೆಂದಾದರೂ ಒತ್ತಡಕ್ಕೆ ಗುರಿಯಾದಾಗ ಇನ್ನೇನೂ ಮಾಡುವುದು ಬೇಡ,ಸುಮ್ಮನೆ ಕಿಚನ್‌ಗೆ ತೆರಳಿ ಅಡುಗೆ ಆರಂಭಿಸಿ. ನಿಮ್ಮನ್ನು ಕಾಡುವ ಒತ್ತಡ ಮಾಯವಾಗುತ್ತದೆ. ನಿಮ್ಮ ಜೀವನ ಹೆಚ್ಚು ಆನಂದಪೂರ್ಣ ಮತ್ತು ಆರೋಗ್ಯಪೂರ್ಣವಾಗಿರುತ್ತದೆ.

Comments are closed.