ಆರೋಗ್ಯ

ದೇಹದಲ್ಲಿ ನಿರ್ಜಲೀಕರಣವುಂಟಾದಾಗ ಶರೀರವು ನಮಗೆ ನೀಡುವ ಸೂಚನೆಗಳು

Pinterest LinkedIn Tumblr

ಮಾನವನ ಶರೀರದ ಶೇ.60ರಷ್ಟು ಭಾಗವು ನೀರನ್ನೊಳಗೊಂಡಿರುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶರೀರ ಮತ್ತು ಮನಸ್ಸು ಆರೋಗ್ಯಯುತವಾಗಿರಲು ಸಾಕಷ್ಟು ನೀರನ್ನು ಕುಡಿಯುತ್ತಿರಬೇಕು, ಶರೀರದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಶರೀರದಲ್ಲಿ ಕೇವಲ ಶೇ.1.5ರಷ್ಟು ನೀರು ಕಡಿಮೆಯಾದರೂ ನೀವು ನಿರ್ಜಲೀಕರಣಕ್ಕೆ ತುತ್ತಾಗುತ್ತೀರಿ. ನಿರ್ಜಲೀಕರಣವುಂಟಾದಾಗ ಹೆಚ್ಚು ಬಾಯಾರಿಕೆ ಆಗುವುದಷ್ಟೇ ಅಲ್ಲ, ಸಾಕಷ್ಟು ದ್ರವಗಳನ್ನು ಸೇವಿಸುವಂತೆ ಶರೀರವು ನಿಮಗೆ ಇತರ ಹಲವಾರು ಸಂಕೇತಗಳನ್ನೂ ನೀಡುತ್ತಲೇ ಇರುತ್ತದೆ. ಇಂತಹ ಕೆಲವು ಸಂಕೇತಗಳು ಅಥವಾ ಲಕ್ಷಣಗಳ ಕುರಿತು ಮಾಹಿತಿಗಳಿಲ್ಲಿವೆ….

ಸಕ್ಕರೆ ತಿನ್ನಬೇಕೆಂಬ ತುಡಿತ
ಎಂದಾದರೂ ಬಹಳಷ್ಟು ಸಕ್ಕರೆ ತಿನ್ನಬೇಕೆಂಬ ತುಡಿತವುಂಟಾದಾಗ ಹೀಗೇಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಶರೀರದಲ್ಲಿ ನಿರ್ಜಲೀಕರಣ ಕಾರಣವಾಗಿರಬಹುದು. ನಿರ್ಜಲೀಕರಣವು ಹಸಿವೆಯನ್ನು,ವಿಶೇಷವಾಗಿ ಸಕ್ಕರೆಯನ್ನು ತಿನ್ನುತ್ತಲೇ ಇರಬೇಕೆಂಬ ತುಡಿತವನ್ನುಂಟು ಮಾಡುತ್ತದೆ. ನಿರ್ಜಲೀಕರಣಗೊಂಡಾಗ ಶರೀರವು ದಾಸ್ತಾನಿರುವ ಗ್ಲುಕೋಸ್‌ನ್ನು ತ್ವರಿತ ಗತಿಯಲ್ಲಿ ಬಳಸಿಕೊಳ್ಳುತ್ತದೆ ಮತ್ತು ಹಸಿವೆ ಹಾಗೂ ಶಕ್ತಿಗುಂದಿದ ಅನುಭವವಾಗುತ್ತದೆ. ಸಕ್ಕರೆ ತಿನ್ನಬೇಕೆಂಬ ತುಡಿತವುಂಟಾದಾಗ ತಕ್ಷಣ ಒಂದು ಗ್ಲಾಸ್ ನೀರನ್ನು ಕುಡಿಯಬೇಕು ಮತ್ತು ಕೆಲವು ನಿಮಿಷಗಳ ಬಳಿಕ ಅಂತಹ ತುಡಿತ ಮಾಯವಾಗುತ್ತದೆ.

ಒಣ ಮತ್ತು ಪೊರೆಗಳಿಂದ ಕೂಡಿದ ಚರ್ಮ
ಶರೀರದಲ್ಲಿ ನೀರಿನ ಕೊರತೆಯು ಚರ್ಮದ ತೇವಾಂಶದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ನೀರಿನಂಶ ಕಡಿಮೆಯಾಗಿರುವ ಚರ್ಮವು ಬಿಗಿಯಾಗಿರುವ ಅನುಭವವನ್ನು ನೀಡುತ್ತದೆ ಮತ್ತು ತುಂಬ ಪೇಲವ ಹಾಗೂ ನಿರ್ಜೀವವಾಗಿರುತ್ತದೆ. ಚರ್ಮದ ಆರೋಗ್ಯವು ಉತ್ತಮವಾಗಿರಬೇಕೆಂದರೆ ಯಥೇಚ್ಛ ನೀರನ್ನು ಕುಡಿಯಬೇಕು ಮತ್ತು ತಣ್ಣೀರಿನ ಸ್ನಾನವನ್ನು ಮಾಡಬೇಕು. ಬಿಸಿನೀರಿನ ಶವರ್‌ನ ಕೆಳಗೆ ಸ್ನಾನಮಾಡುವುದರಿಂದ ಚರ್ಮವು ತನ್ನೆಲ್ಲ ತೇವಾಂಶವನ್ನು ಕಳೆದುಕೊಳ್ಳುತ್ತದೆ.

ಸಿಡುಕುತನ
ನಿಮ್ಮಲ್ಲಿ ಸಿಡುಕುತನ ಉಂಟಾಗಿ ಪ್ರತಿಯೊಂದು ವಿಷಯದ ಬಗ್ಗೆಯೂ ರೇಗಾಡುತ್ತಿದ್ದೀರಾ? ಹಾಗಿದ್ದರೆ ನೀವು ನಿರ್ಜಲೀಕರಣದ ಸಮಸ್ಯೆಗೆ ಗುರಿಯಾಗಿದ್ದೀರಿ ಎಂದೇ ಅರ್ಥ. ಶರೀರದಲ್ಲಿ ನೀರಿನ ಕೊರತೆಯು ಹಲವಾರು ನರಶಾಸ್ತ್ರೀಯ ತೊಂದರೆಗಳಿಗೆ ಕಾರಣವಾಗುತ್ತದೆ ಮತ್ತು ಕೆರಳುವಿಕೆ ಇದರಲ್ಲಿ ಒಂದಾಗಿದೆ. ಒಳ್ಳೆಯ ಮೂಡ್‌ಗಾಗಿ ಸಾಕಷ್ಟು ನೀರನ್ನು ಕುಡಿಯುತ್ತಿರಿ ಮತ್ತು ಅದು ನಿಮ್ಮ ಚರ್ಮ ಹಾಗೂ ಒಟ್ಟಾರೆ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ನೋಡಿ.

ಸ್ನಾಯುಗಳಲ್ಲಿ ಸೆಳೆತ
ಶರೀರದಲ್ಲಿ ರಕ್ತ ಪರಿಚಲನೆ ನಿಧಾನಗೊಳ್ಳಲು ನಿರ್ಜಲೀಕರಣವು ಒಂದು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಸ್ನಾಯುಗಳಲ್ಲಿ ಬಿಗಿತ ಮತ್ತು ಸೆಳೆತ ಉಂಟಾಗುತ್ತವೆ. ಕಠಿಣ ವ್ಯಾಯಾಮ ಮಾಡುವವರು ಈ ಸ್ಥಿತಿಯಿಂದ ಪಾರಾಗಲು ಯಥೇಚ್ಛ ನೀರನ್ನು ಕುಡಿಯುತ್ತಿರಬೇಕು. ಶರೀರದಲ್ಲಿ ನೀರಿನ ಕೊರತೆಯು ಪೊಟ್ಯಾಷಿಯಂ ಮತ್ತು ಸೋಡಿಯಂ ಮಟ್ಟಗಳಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ವ್ಯಾಯಾಮ ಮಾಡುವವರು ಬೆವರುವಿಕೆ ಮೂಲಕ ಹೆಚ್ಚಿನ ನೀರನ್ನು ಕಳೆದುಕೊಳ್ಳುತ್ತಾರೆ. ನೀರು ಹಸಿವು ಮತ್ತು ಸಕ್ಕರೆ ಸೇವಿಸಬೇಕೆಂಬ ತುಡಿತ,ಇವೆರಡನ್ನೂ ದೂರವಿರಿಸುವುದರಿಂದ ದೇಹತೂಕವನ್ನು ತಗ್ಗಿಸಿಕೊಳ್ಳಲು ಬಯಸುವವರು ಸಾಕಷ್ಟು ನೀರನ್ನು ಸೇವಿಸುತ್ತಿರಬೇಕು.

ಮಾನಸಿಕ ಗೊಂದಲ
ನಿಮಗೆ ಆಗಾಗ್ಗೆ ಮಾನಸಿಕ ಗೊಂದಲ ಕಾಡುತ್ತದೆಯೇ? ಅದು ಶರೀರದಲ್ಲಿ ನಿರ್ಜಲೀಕರಣದ ಸ್ಪಷ್ಟ ಸಂಕೇತವಾಗಿರಬಹುದು. ನಿರ್ಜಲೀಕರಣವು ಮನಸ್ಸಿಗೆ ಮಂಕು ಕವಿದಂತೆ ಮಾಡುತ್ತದೆ ಮತ್ತು ಗೊಂದಲಕ್ಕೆ ಗುರಿ ಮಾಡುತ್ತದೆ.

ಮಲಬದ್ಧತೆ
ನಿರ್ಜಲೀಕರಣವುಂಟಾದಾಗ ಮಲವು ಗಟ್ಟಿಯಾಗುತ್ತದೆ. ಶರೀರಕ್ಕೆ ಸಾಕಷ್ಟು ನೀರು ದೊರೆಯದಿದ್ದಾಗ ಅದು ತನ್ನಲ್ಲಿ ಸಂಗ್ರಹವಾಗಿರುವ ದ್ರವಗಳನ್ನು ಬಳಸಲು ಆರಂಭಿಸುತ್ತದೆ ಮತ್ತು ಇದು ಮಲವು ಗಟ್ಟಿಯಾಗಲು ಕಾರಣವಾಗುತ್ತದೆ. ಇದರಿಂದಾಗಿ ಮಲಬದ್ಧತೆಯ ಸಮಸ್ಯೆಯುಂಟಾಗುತ್ತದೆ. ಯಥೇಚ್ಛ ನೀರನ್ನು ಸೇವಿಸುವುದರಿಂದ ಜೀರ್ಣ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ.

Comments are closed.