ಕರ್ನಾಟಕ

ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರ ಧರಣಿ; ಸಂಕಷ್ಟದಲ್ಲಿ ದೋಸ್ತಿ ಸರಕಾರ

Pinterest LinkedIn Tumblr

ಬೆಂಗಳೂರು: ರಾಜ್ಯ ಸರಕಾರ ಅಲ್ಪ ಮತಕ್ಕೆ ಕುಸಿದ ಹಿನ್ನೆಲೆ, ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲು ಒತ್ತಾಯಿಸಿ ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ರಾಯಲ್ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರಕಾರ ಹಾಗೂ ಸಿಎಂ ವಿರುದ್ಧ ಘೋಷಣೆ ಕೂಗಿದರು. ರಾಜ್ಯದಲ್ಲಿ ಸರಕಾರ ಅಲ್ಪಮತಕ್ಕೆ ಕುಸಿದಿದೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ, ಸ್ವ ಪಕ್ಷದ ಶಾಸಕರೇ , ರಾಜೀನಾಮೆ ಸಲ್ಲಿಸಿದ್ದಾರೆ. ಇಂತಹ ದುರಾಡಳಿತದ ಸರಕಾರ ಇರಬಾರದು, ಈ ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.

ಸಿಎಲ್‌ಪಿ ಸಭೆಗೆ ಬಹುತೇಕರು ಗೈರು
‘ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗಲ್ಲ’ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಆದರೆ, ಅವರ ಪುತ್ರಿ ಸೌಮ್ಯರೆಡ್ಡಿ ಸಭೆಗೆ ಹಾಜರಾಗುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ

ವಿಧಾನಸೌಧದಲ್ಲಿ ನಡೆದ ಈ ಸಭೆಯಲ್ಲಿಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು.

ನಿರೀಕ್ಷೆಯಂತೆ ಮುಂಬಯಿಗೆ ತೆರಳಿರುವ ಅತೃಪ್ತ ಶಾಸಕರು ಸೇರಿದಂತೆ ರಾಮಲಿಂಗಾರೆಡ್ಡಿ, ಡಾ.ಅಂಜಲಿ ನಿಂಬಾಳ್ಕರ್, ಎಂಟಿಬಿ ನಾಗರಾಜ್, ಪಕ್ಷದಿಂದ ಸಸ್ಪೆಂಡ್ ಆಗಿರುವ ರೋಷನ್ ಬೇಗ್ ಸೇರಿದಂತೆ ಹಲವರು ಗೈರು ಹಾಜರಾಗಿದ್ದು, ದೋಸಿ ನಾಯಕರ ತಲೆ ಬಿಸಿಗೆ ಕಾರಣವಾಗಿದೆ.

ಅತೃತ್ತ ಶಾಸಕರು ನೀಡಿರುವ ರಾಜೀನಾಮೆ ಪತ್ರ ಅಂಗೀಕರಿಸುವ ಸಾಧ್ಯತೆ ತೀರ ಕಡಿಮೆ ಇದ್ದು, ಮುಂಬಯಿನಲ್ಲಿ ಠಿಕಾಣಿ ಹೂಡಿರುವ ಶಾಸಕರಿಗೆ ಖದ್ದು ಹಾಜರಾಗುವಂತೆ ಸೂಚಿಸುವ ಸಾಧ್ಯತೆ ಇದೆ.

ರಮೇಶ್ ಕುಮಾರ್ ಮೇಲೆ ಎಲ್ಲರ ಕಣ್ಣು
ಮೈತ್ರಿ ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ಮ್ಯಾರಥಾನ್ ಸಭೆ ಹಾಗೂ ಹಲವು ಬಗೆಯ ಕಸರತ್ತು ನಡೆಸಿರುವುದರ ಜತೆ ಇಂದು (ಮಂಗಳವಾರ) ಕಚೇರಿಗೆ ಆಗಮಿಸಲಿರುವ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಸಮ್ಮಿಶ್ರ ಸರಕಾರದ 13 ಅತೃಪ್ತ ಶಾಸಕರು ಸಲ್ಲಿಸಿರುವ ರಾಜೀನಾಮೆ ಪತ್ರಗಳ ಬಗ್ಗೆ ಸ್ಪೀಕರ್ ಕೈಗೊಳ್ಳುವ ತೀರ್ಮಾನದ ಮೇಲೆ ದೋಸ್ತಿ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ.

ಕಳೆದ ಶನಿವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ 9 ಹಾಗೂ ಜೆಡಿಎಸ್‌ನ ಮೂವರು ಶಾಸಕರು ರಾಜೀನಾಮೆ ಸಲ್ಲಿಸಿದ್ದರು, ಅದಕ್ಕೂ ಮುನ್ನವೇ ಕಾಂಗ್ರೆಸ್‌ನ ಆನಂದ್‌ಸಿಂಗ್‌ ಅವರು ಸಹ ರಾಜೀನಾಮೆ ಸಲ್ಲಿಸಿದ್ದರು. ಇದುವರೆಗೂ 13 ಮಂದಿ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ.

ಇಂದು ಐವರು ಅತೃಪ್ತರು ರಾಜೀನಾಮೆ?
ವಸತಿ ಸಚಿವ ಎಂಟಿಬಿ ನಾಗರಾಜ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಸುಧಾಕರ್, ರೋಷನ್ ಬೇಗ್, ಅಂಜಲಿ ನಿಂಬಾಳ್ಕರ್, ಸೌಮ್ಯರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ ಶಾಸಕರು ನಂದಿ ಬೆಟ್ಟದ ರೆಸಾರ್ಟ್‌ಗೆ ಶಿಫ್ಟ್‌
ಬಿಜೆಪಿ ತಂತ್ರವನ್ನು ವಿಫಲಗೊಳಿಸಿ ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳಲು ಮಿತ್ರಪಕ್ಷಗಳ ನಾಯಕರು ಸರ್ವ ಪ್ರಯತ್ನ ನಡೆಸಿದ್ದು, ಜೆಡಿಎಸ್‌ ತನ್ನ ಶಾಸಕರ ಒಗ್ಗಟ್ಟು ಕಾಯ್ದುಕೊಳ್ಳಲು ರೆಸಾರ್ಟ್‌ ವಾಸ್ತವ್ಯಕ್ಕೆ ಶಿಫ್ಟ್‌ ಮಾಡಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ರಾತ್ರಿ 7ರ ಸುಮಾರಿಗೆ ಪಕ್ಷದ ಶಾಸಕರು ಒಂದೇ ಬಸ್‌ನಲ್ಲಿ ನಂದಿ ಬೆಟ್ಟ ಸಮೀಪದ ಪ್ರೆಸ್ಟೀಜ್‌ ಗಾಲ್ಫ್‌ ರೆಸಾರ್ಟ್‌ಗೆ ತೆರಳಿದರು.

Comments are closed.