ಮಹಿಳೆ ಪ್ರೆಗ್ನೆಂಟ್ ಆಗಿದ್ದಾಳೆ ಅಂತಾ ತಿಳೀತಾ ಇದ್ದ ಹಾಗೆ, ಅವರ ಮನೆಯವರಿಗೆಲ್ಲ ಒಂದೇ ಚಿಂತೆ. ಇವಳಿಗೆ ಚೆನ್ನಾಗಿ ಆಹಾರ ಕೊಡಬೇಕು. ಗರ್ಭದಲ್ಲಿರುವ ಮಗು ಆರೋಗ್ಯವಾಗಿ ಇರಬೇಕು, ಹೀಗಾಗಿ ಅವಳು ಚೆನ್ನಾಗಿ ತಿನ್ನಬೇಕು ಅನ್ನೋದು. ಇದು ಯಾವುದೇ ಕುಟುಂಬದಲ್ಲಾದ್ರೂ ಒಂದು ಅಲಿಖಿತ ನಿಯಮ. ಜೊತೆಗೆ, ಪ್ರೆಗ್ನೆಂಟ್ ಮಹಿಳೆಗೂ, ಹಲವು ಬಯಕೆಗಳು. ಯಾವಾಗಲೂ ವಿಶೇಷವಾಗಿದ್ದನ್ನು ತಿನ್ನಬೇಕು ಅಂತಾ. ಕೆಲವರು ಹಿರಿಯರ ಸಲಹೆಯಂತೆ, ಕೆಲವರು ವೈದ್ಯರ ಸಲಹೆಯಂತೆ ಹಲವು ಪೌಷ್ಠಿಕ ಆಹಾರ ಸೇವಿಸುತ್ತಲೇ ಇರುತ್ತಾರೆ. ಹೀಗಾಗಿ, ಸಹಜವಾಗಿ ತೂಕ ಹೆಚ್ಚಾಗಿಯೇ ಆಗುತ್ತೆ. ಗರ್ಭಿಣಿಯಾದಾಗ ಸರಿ ಸುಮಾರು 11 ರಿಂದ 13 ಕೆಜಿ ತೂಕ ಹೆಚ್ಚಾದರೆ, ಅದು ಸಹಜ ಎಂದೇ ಈ ವೇಳೆಯಲ್ಲಿ ಪರಿಗಣಿಸಲಾಗುತ್ತೆ. ಕೆಲವರಿಗೆ ಇನ್ನೂ ಹೆಚ್ಚು ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಬಹುತೇಕ ಮಹಿಳೆಯರಿಗೆ ಮಗುವಾದ ಮೇಲೆ ಈ ತೂಕ ಇಳಿಸೋದು ಹೇಗೆ? ಅನ್ನೋದೇ ಬಲುದೊಡ್ಡ ಪ್ರಶ್ನೆಯಾಗಿ ಕಾಡುತ್ತಿರುತ್ತೆ. ಇದೇ ಭಯದ ಕಾರಣದಿಂದ ಎಷ್ಟೋ ಮಹಿಳೆಯರು ಮಗು ಪಡೆಯೋದಕ್ಕೂ ಹಿಂದೆ ಮುಂದೆ ಯೋಚಿಸುವ ಸ್ಥಿತಿ ಇದೆ. ಹಾಗಂತ ಚಿಂತಿಸಬೇಕಿಲ್ಲ. ನಿಶ್ಚಿಂತೆಯಿಂದ ಇರಿ. ಇಲ್ಲಿ ನೀಡಿರುವ ಟಿಪ್ಸ್ ಪಾಲಿಸಿ, ಈಸಿಯಾಗಿ ತೂಕ ಇಳಿಸಿಕೊಳ್ಳಿ.
ಚೆನ್ನಾಗಿ ಊಟ ಮಾಡಿ
ಮಗು ಜನನದ ನಂತರ ಒತ್ತಡಕ್ಕೆ ಒಳಗಾಗುವ ತಾಯಿ, ಊಟ ತಿಂಡಿ ಕಡೆ ಹೆಚ್ಚಿನ ಗಮನ ಹರಿಸಲ್ಲ. ಸಮಯಕ್ಕೆ ಸರಿಯಾಗಿ, ತಿನ್ನದೇ ಸಮಯ ಸಿಕ್ಕಾಗ ಏನೇನೋ ತಿನ್ನುತ್ತಾಳೆ. ಹೀಗೆ ಮಾಡಬೇಡಿ. ಒತ್ತಡ ನಿವಾರಿಸಿಕೊಂಡು, ಚೆನ್ನಾಗಿ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಿ. ಹಸಿವಾದಾಗ, ಹೊಟ್ಟೆ ತುಂಬಾ ಸೇವಿಸಿ. ಅದ್ರಲ್ಲೂ ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಇದು ಸಹಜವಾಗಿ ತೂಕ ಇಳಿಯಲು ಸಹಾಯಕವಾಗುತ್ತದೆ.
ಬ್ಯಾಲೆನ್ಸ್‌ಡ್ ಆಹಾರ ಸೇವನೆ
ದೇಹಕ್ಕೆ ಬೇಕಾದಷ್ಟು ಪ್ರೋಟಿನ್ ಸೇವಿಸಲು ಗಮನ ನೀಡಿ. ಹಾಗಂತ ನೀವು ಪ್ರೋಟಿನ್ ಪೌಡರ್ ಸೇವಿಸಬೇಕು ಅಂತೇನೂ ಇಲ್ಲ. ಬದಲಿಗೆ ಉತ್ತಮ ಪ್ರೋಟಿನ್ ಇರುವ ಹಾಲು, ಮೊಸರು, ಬೀನ್ಸ್, ಮೀನು, ಮೊಟ್ಟೆ, ಬಾದಾಮಿ, ಬೀಜ ಪದಾರ್ಥಗಳು, ಮಾಂಸ ಮುಂತಾದವುಗಳನ್ನು ಅಗತ್ಯವಿರುವಷ್ಟು ಸೇವಿಸಿದ್ರೆ ಸಾಕು. ಹೆಚ್ಚಾಗಿ ದ್ರವಪದಾರ್ಥಗಳನ್ನು ಸೇವಿಸಬೇಕು.
ಎಣ್ಣೆ ಪದಾರ್ಥ ದೇಹಕ್ಕೆ ಅಗತ್ಯ. ಆದ್ರೆ, ಅದು ಮಿತಿಯಲ್ಲಿರಲಿ. ಜೊತೆಗೆ ಯಥೇಚ್ಚವಾಗಿ ಹಣ್ಣುಗಳನ್ನು ಸೇವಿಸಿ. ಸಿಟ್ರಿಕ್ ಆ್ಯಸಿಡ್ ಇರುವಂಥ ಲಿಂಬು, ಮೂಸಂಬಿ, ಕಿತ್ತಳೆ ಮುಂತಾದ ಹಣ್ಣುಗಳು ನಿಮ್ಮ ಡಯಟ್ ಭಾಗವಾಗಿರಲಿ. ಇನ್ನು ದೇಸಿ ಪದಾರ್ಥಗಳಾದ ಸಾಂಪ್ರದಾಯಿಕ ಲಾಡೂ, ದೇಸಿ ತುಪ್ಪ ಕೂಡ ದೇಹಕ್ಕೆ ಒಳ್ಳೆಯದು. ಆದ್ರೆ, ಮಿತಿಯಲ್ಲಿರಲಿ.
ದ್ರವಾಹಾರ ಸೇವಿಸಿ
ಸಾಕಷ್ಟು ಪ್ರಮಾಣದಲ್ಲಿ ದ್ರವಾಹಾರ ಸೇವಿಸಿ. ಇದು ನಿಮ್ಮ ಮಗುವಿಗೆ ಮಿಲ್ಕ್ ಫೀಡ್ ಮಾಡಲು ಸಹಾಯಕವಾಗುತ್ತದೆ. ಜೊತೆಗೆ, ಹೆಚ್ಚು ನೀರು ಕುಡಿಯಿರಿ. ತೂಕ ಇಳಿಕೆಗೆ ಇದು ದೊಡ್ಡ ಸಾಥ್ ನೀಡುತ್ತೆ. ಊಟದ ಜೊತೆಗೆ, ಒಂದು ಲೋಟ ಬಿಸಿ ನೀರು ಸೇವಿಸಿ. ಇದು ಜೀರ್ಣಕ್ರಿಯೆ ಸುಗಮಗೊಳಿಸಿ, ತೂಕ ಇಳಿಯಲು ಸಹಾಯ ಮಾಡುತ್ತದೆ. ಜೊತೆಗೆ ಸಕ್ಕರೆ ರಹಿತ ಜ್ಯೂಸ್, ಶರಬತ್ಗಳನ್ನು ಸಹ ಸೇವಿಸುತ್ತಿರಿ.
ಆ್ಯಕ್ಟಿವ್ ಆಗಿ
ಹೌದು. ಬರೀ ಊಟದಿಂದ ಮಾತ್ರ ತೂಕ ಇಳಿಸುವುದು ಸಾಧ್ಯವಿಲ್ಲ. ಅದಕ್ಕೆ ತಕ್ಕನಾಗಿ, ವ್ಯಾಯಾಮ ಕೂಡ ಇರಲಿ. ನಿಮ್ಮದು ನಾರ್ಮಲ್ ಡೆಲೆವರಿ ಆಗಿದ್ದು, ಇದಕ್ಕೂ ಮುನ್ನ ನೀವು ವ್ಯಾಯಾಮ ಮಾಡುವ ರೂಢಿ ಹೊಂದಿದ್ದರೆ, ಡೆಲೆವರಿ ಆಗಿ 2-3 ವಾರಗಳಲ್ಲಿ ಲಘು ವ್ಯಾಯಾಮ ಆರಂಭಿಸಬಹುದು. ತಜ್ಞರ ಸಲಹೆ ಪಡೆದು, ಅವರು ಹೇಳಿದ ವ್ಯಾಯಾಮಗಳನ್ನು ಅನುಸರಿಸಬಹುದು. ಇನ್ನು ಕೆಲ ತಜ್ಞರ ಅಭಿಪ್ರಾಯದಂತೆ, ವ್ಯಾಯಾಮಕ್ಕೂ ಮುನ್ನ ನಿಮ್ಮ ಮಗುವಿಗೆ ಬ್ರೆಸ್ಟ್ ಫೀಡ್ ಮಾಡಿ. ಇದರಿಂದ ಫಿಗರ್ ಕೂಡ ಸರಿ ಹೋಗುತ್ತೆ.
ಚೆನ್ನಾಗಿ ನಿದ್ದೆ ಮಾಡಿ:
ನಿದ್ರಾ ಹೀನತೆ ಹೊಸ ತಾಯಂದರಲ್ಲಿ ಸಹಜ. ಆದ್ರೆ, ತೂಕ ಇಳಿಸಲು ಅದು ತೊಂದರೆ ನೀಡುತ್ತದೆ. ನಿದ್ರಾಹೀನತೆಯಿಂದಾಗಿ ಉಂಟಾಗುವ ಆಯಾಸದಿಂದ ದೇಹದಲ್ಲಿ ಕಾರ್ಟಿಸೊಲ್ ಅನ್ನೋ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ತೂಕ ಏರಲು ಪ್ರಮುಖ ಕಾರಣ. ಹೀಗಾಗಿ ಆಯಾಸ ಕಮ್ಮಿಮಾಡಿಕೊಳ್ಳೋದು ಮುಖ್ಯ.
ತಾಯ್ತನ ಅನ್ನೋದು ಯಾವುದೇ ಹೆಣ್ಣಿಗಾದರೂ ಅತಿ ಸಂತಸಕರ ಘಟ್ಟ. ತಾಯ್ತನ ಪಡೆದ ನಂತರ, ವಾರಕ್ಕೆ ಕನಿಷ್ಟ ಪಕ್ಷ ಒಂದು ಕೆ.ಜಿ ತೂಕ ಇಳಿಸುವ ಗುರಿಯನ್ನಾದರೂ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ, ಮತ್ತೆ ನಿಮ್ಮ ಮೊದಲಿನ ಫಿಗರ್ಗೆ ನೀವು ಬೇಗ ಮರಳುತ್ತೀರಿ. ಆಲ್ ದಿ ಬೆಸ್ಟ್ ನ್ಯೂ ತಾಯಂದಿರೇ..!
Comments are closed.