ಬೆಂಗಳೂರು: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ನೇಗ್ಲೇರಿಯಾ ಫೌಲೇರಿಯಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರಿಗೆ ರಾಜ್ಯದ ಆರೋಗ್ಯ ಇಲಾಖೆ ಮಂಗಳವಾರ ಸಲಹಾ ಮಾರ್ಗಸೂಚಿಯನ್ನು ಹೊರಡಿಸಿದೆ.

ಶಬರಿಮಲೆ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮಗಳನ್ನು ಪಾಲಿಸುವ ಕುರಿತು ಅಗತ್ಯ ಸಲಹೆಗಳನ್ನು ನೀಡಲಾಗಿದೆ.
* ಕೇರಳದಲ್ಲಿ ಕಲುಶಿತ ನೀರು, ನಿಂತ ನೀರು ಅಥವಾ ಈಜು ಕೊಳದ ನೀರಿನಿಂದ ಉಂಟಾಗುವ ‘ಮೆದುಳು ತಿನ್ನುವ ಅಮೀಬಾ’ ಸೋಂಕು ಕಂಡುಬಂದಿದ್ದು, ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ. ಹಾಗಾಗಿ ರಾಜ್ಯದಿಂದ ಶಬರಿಮಲೆಗೆ ಹೋಗುವ ಯಾತ್ರಿಕರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.
* ಈ ‘ಮೆದುಳು ತಿನ್ನುವ ಅಮೀಬಾ’ ಜೀವಿಯು ಮೂಗಿನಿಂದ ನೇರವಾಗಿ ಮೆದುಳು ಪ್ರವೇಶಿಸಿ ಸೋಂಕು ಹರಡುವುದರಿಂದ ಜೀವಾಪಾಯ ಹೆಚ್ಚು. ಹಾಗಾಗಿ ಯಾತ್ರೆಯ ವೇಳೆ, ಕಲುಶಿತ/ನಿಂತ ನೀರಿನಿಂದ ಅಥವಾ ಈಜುಕೋಳದ ನೀರಿನಿಂದ ಸ್ನಾನ ಮಾಡುವುದನ್ನು ಆದಷ್ಟು ನಿಯಂತ್ರಿಸಿ. ಇಲ್ಲದಿದ್ದಲ್ಲಿ ಮೂಗಿನ ಕ್ಲಿಪ್‌ಗಳನ್ನು ಅಥವಾ ಮೂಗನ್ನು ಬಿಗಿಹಿಡಿದು ಸ್ನಾನ ಮಾಡುವುದು ಸೂಕ್ತ.
* ಯಾತ್ರೆಯ ವೇಳೆ ಸ್ನಾನ ಮಾಡಿದ ಏಳು ದಿನಗಳಲ್ಲಿ ವಿಪರೀತ ಜ್ವರ, ತೀವ್ರ ತಲೆನೋವು, ವಾಕರಿಕೆ/ವಾಂತಿ, ಕುತ್ತಿಗೆ ಬಿಗಿತ, ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ.
* ಭಯ ಬೇಡ, ಕಲುಶಿತ ನೀರಿನಿಂದ ಹರಡುವ ‘ಮೆದುಳು ತಿನ್ನುವ ಅಮೀಬಾ’ ಸೋಂಕಿನ ಬಗ್ಗೆ ಎಚ್ಚರ ಇರಲಿ ಎಂದು ಇಲಾಖೆ ತಿಳಿಸಿದೆ.
Comments are closed.