ಆರೋಗ್ಯ

22 ಲೀಟರ್ ರಕ್ತವನ್ನ ಕುಡಿದ ಕೊಕ್ಕೆ ಹುಳು….?

Pinterest LinkedIn Tumblr

ಉತ್ತರಾಖಂಡದ ಹಲ್ದ್ವಾನಿ ಎಂಬ ಊರಿನ ಹುಗುಗನೊಬ್ಬ ತೀವ್ರವಾಗಿ ತೂಕದಲ್ಲಿ ಗಣನೀಯ ಇಳಿಕೆ ಮತ್ತು ಕುಂಠಿತ ಬೆಳವಣಿಗೆ ಅನುಭವಿಸುತ್ತಿದ್ದ. ಆತನ ಹಿಮೋಗ್ಲೋಬಿನ್ ಪ್ರಮಾಣ ಕೂಡ ಕೇವಲ 5.86, ಅಂದರೆ ತುಂಬಾ ಕಡಿಮೆ ಇತ್ತು. ಇದರ ಸಂಬಂಧವಾಗಿ ಆತನಿಗೆ ಯಾವುದೇ ಹೊಟ್ಟೆ ನೋವಾಗಲಿ, ಜ್ವರ ಅಥವಾ ಬೇಧಿ ಆಗಲಿ ಉಂಟಾಗುತ್ತಿರಲಿಲ್ಲ. 2 ವರ್ಷಗಳ ಕಾಲ ಈತ ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದು, ಈತನಿಗೆ ಚಿಕಿತ್ಸೆಯೊಂದಿಗೆ ಸತತವಾಗಿ ರಕ್ತದ ವರ್ಗಾವಣೆ ಕೂಡ ಮಾಡಬೇಕಿತ್ತು. ಬಹಳಷ್ಟು ತಪಾಸನೆಗಳನ್ನ ನಡೆಸಿದ ನಂತರವೂ ವೈದ್ಯರಿಗೆ ಈ ಹುಡುಗ ರಕ್ತವನ್ನ ಕಳೆದುಕೊಳ್ಳಲು ಕಾರಣ ಏನು ಎಂಬುದೇ ಗೊತ್ತಾಗಿರಲಿಲ್ಲ.

ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿನ ವೈದ್ಯರು ಈ ಹುಡುಗನ ಮೇಲೆ ಕ್ಯಾಪ್ಸುಲ್ ಎಂಡೊಸ್ಕೊಪಿ ಪ್ರಯೋಗಿಸಿದರು. ಕ್ಯಾಪ್ಸುಲ್ ಎಂಡೊಸ್ಕೊಪಿ ಎಂದರೆ ಒಂದು ಸಣ್ಣ ಕ್ಯಾಮೆರವನ್ನ ಒಂದು ವ್ಯಕ್ತಿಯ ಜೀರ್ಣನಾಳಕ್ಕೆ ಕಳುಹಿಸಿ, ಅಲ್ಲಿ ಏನಾಗಿದೆ ಎಂದು ತಿಳಿದುಕೊಳ್ಳುವುದು. ಒಂದು ಚಿಕ್ಕ ವಿಟಮಿನ್ ಕ್ಯಾಪ್ಸುಲ್ ಒಳಗಡೆ ಈ ಚಿಕ್ಕ ಎಂಡೊಸ್ಕೊಪಿ ಕ್ಯಾಮೆರವನ್ನ ಇಟ್ಟು, ರೋಗಿಗೆ ಆ ಕ್ಯಾಪ್ಸುಲ್ ನುಂಗಲು ಹೇಳುತ್ತಾರೆ. ಹೀಗೆ ಈ ಹುಡುಗನಿಗೂ ಈ ಕ್ಯಾಪ್ಸುಲ್ ನುಂಗಿಸಿದಾಗ ಕರುಳಿನ ಮೊದಲರ್ಧ ಭಾಗ ಸಹಜವಾಗಿಯೇ ಇತ್ತು. ಆದರೆ ಉಳಿದ ಅರ್ಧ ಭಾಗ ಪೂರ್ತಿ ರಕ್ತಸಿಕ್ತವಾಗಿತ್ತು. ಇನ್ನೂ ಸ್ವಲ್ಪ ಆಳವಾಗಿ ನೋಡಿದಾಗ, ಕೊಕ್ಕೆ ಹುಳುಗಳು ಸಣ್ಣ ಕರುಳಿನ ಲೋಳೆಯಲ್ಲಿ ಅವಿತು ಕೂತಿರುವುದು ಕಾಣಿಸಿತು. ಇವುಗಳು ಸಕ್ರಿಯವಾಗಿ ರಕ್ತವನ್ನ ಹೀರುತ್ತಲೇ ಇದ್ದದ್ದು ಕಂಡಿತು. ಈ ಕೊಕ್ಕೆಹುಳುಗಳು ರಕ್ತವನ್ನ ಹೀರಿ, ಬೆಳ್ಳನೆ ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿದ್ದವು. ಕೆಲವು ಇನ್ನೂ ರಕ್ತವನ್ನ ಹೀರದೆ ಇದ್ದ ಬಿಳಿ ಬಣ್ಣದ ಕೊಕ್ಕೆಹುಳುಗಳು ಕೂಡ ಸಣ್ಣ ಕರುಳಿನಲ್ಲಿ ಇದ್ದದ್ದನ್ನು ಕಾಣಬಹುದಿತ್ತು.

ಹೀಗೆ 2 ವರ್ಷಗಳಿಂದ ಆತನ ಹೊಟ್ಟೆಯೊಳಗೆ ಸೇರಿಕೊಂಡಿದ್ದ ಈ ಕೊಕ್ಕೆಹುಳುಗಳು ಸುಮಾರು 22 ಲೀಟರ್ ಅಷ್ಟು ರಕ್ತವನ್ನ ಹೀರಿ ಕುಡಿದಿರಬಹುದು. ಈ ಕೊಕ್ಕೆಹುಳು ಸಮಸ್ಯೆ ಭಾರತದಲ್ಲಿ ಸಾಮಾನ್ಯ. ಕೊಳಕಾದ ನೀರು, ಕಲುಷಿತ ಆಹಾರ, ಕೈ ಸರಿಯಾಗಿ ತೊಳೆಯದೆ ಇರುವುದು ಅಥವಾ ಬರಿಗಾಲಿನಲ್ಲಿ ಮರಳಿನಲ್ಲಿ ನಡೆಯುವುದು, ಇವೆಲ್ಲವುಗಳಿಂದ ಕೊಕ್ಕೆಹುಳುಗಳು ಮಾನವನ ದೇಹ ಸೇರಿಕೊಳ್ಳಬಹುದು. ಇದು ಯಾವ ಗೋಚರ ಲಕ್ಷಣಗಳನ್ನ ತೋರ್ಪಡಿಸುವುದಿಲ್ಲ.

ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಯಾವಾಗಲು ತಿನ್ನುವ ಮುನ್ನ ಕೈ ತೊಳೆದುಕೊಳ್ಳಲು, ಹೊರಗಡೆ ಇಂದ ಬಂದೊಡನೆ ಕೈ-ಕಾಲು ತೊಳೆದುಕೊಳ್ಳಲು ಹೇಳಿಕೊಡಬೇಕು. ಅಷ್ಟೇ ಅಲ್ಲದೆ ಅವರಿಗೆ ಹೊರಗಡೆ ಧೂಳಿನಲ್ಲಿ, ಗಲೀಜು ಪ್ರದೇಶಗಳಲ್ಲಿ ನಿಂತು ಪಾನಿ ಪುರಿ ಅಥವಾ ಇನ್ನ್ಯಾವುದೇ ಜಂಕ್ ಫುಡ್ ತಿನ್ನದಂತೆ ಹೇಳಿಕೊಡಬೇಕು.

Comments are closed.