Karavali

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಿಂದ ಮತ್ತು ರಾಜ್ಯ ಸಂಯೋಜಕರಿಂದ  ಡಾ. ವೀರೇಂದ್ರ ಹೆಗ್ಗಡೆ ಭೇಟಿ: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ

Pinterest LinkedIn Tumblr

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಏಕೈಕ ಸರಕಾರೇತರ ಸಾಮಾಜಿಕ ಸಂಘಟನೆಯಾದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಹಾಗೂ ರಾಜ್ಯ ಸಂಚಾಲಕ ಕೆ.ಪಿ. ಜಗದೀಶ್ ಅಧಿಕಾರಿ ಅವರು ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ರಾಜ್ಯಸಭಾ ಸದಸ್ಯರೂ ಧರ್ಮಾಧಿಕಾರಿಯೂ ಆಗಿರುವ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಸಮಿತಿಯ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಕಳೆದ 25 ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಸಮಿತಿಯು ನಡೆಸಿಕೊಂಡು ಬರುತ್ತಿರುವ ಹೋರಾಟ, ಪರಿಸರ ಸ್ನೇಹಿ ಕೈಗಾರಿಕೀಕರಣ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತಂತೆ ಸುದೀರ್ಘವಾಗಿ ಚರ್ಚಿಸಲಾಯಿತು.

ಸಮಿತಿಯು ಸ್ಥಾಪನೆಯಾದಂದಿನಿಂದ ಕರಾವಳಿಯ ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸಿ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿ, ಯುವಜನಾಂಗಕ್ಕೆ ಉದ್ಯೋಗಾವಕಾಶ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳನ್ನು ಮಾಡುತ್ತಿರುವ ಕುರಿತು ಡಾ. ಹೆಗ್ಗಡೆಯವರಿಗೆ ವಿವರಿಸಲಾಯಿತು. ಕರಾವಳಿ ಜಿಲ್ಲೆಗಳನ್ನು ಸಂಪದ್ಭರಿತವಾಗಿಸುವುದು, ದೇಶದ ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ರೂಪಿಸುವುದು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಬದುಕಿನ ಅವಕಾಶ ಕಲ್ಪಿಸುವ ಗುರಿಯನ್ನೂ ವಿವರಿಸಲಾಯಿತು.

ಮಾಲೀನ್ಯ ರಹಿತ ಸೂಕ್ತ ಕೈಗಾರಿಕೀಕರಣ, ಪ್ರವಾಸೋದ್ಯಮ ವಿಸ್ತರಣೆ ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿಯು ರೂಪಿಸಿಕೊಂಡಿರುವ ಯೋಜನೆಗಳಿಗೆ ಡಾ. ಹೆಗ್ಗಡೆಯವರು ಅಗತ್ಯ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮತ್ತು ಕೆ.ಪಿ. ಜಗದೀಶ್ ಅಧಿಕಾರಿ ಅವರು ಮೊದಲು ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಡಾ. ಹೆಗ್ಗಡೆಯವರ ಆಶೀರ್ವಾದ ಪಡೆದರು.

ಪತ್ರಕರ್ತರೊಂದಿಗೆ ಮಾತನಾಡಿದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು, “ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ನಮ್ಮ ಸಮಿತಿಗೆ ಆನೆಬಲ ತಂದಿದೆ. ಪರಿಸರವನ್ನು ಕಾಪಾಡಿಕೊಂಡು ಕೈಗಾರಿಕೆಗಳನ್ನು ಬೆಳೆಸುವ ನಮ್ಮ ಆಶಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,” ಎಂದರು.

ರಾಜ್ಯ ಸಂಚಾಲಕ ಕೆ.ಪಿ. ಜಗದೀಶ್ ಅಧಿಕಾರಿ ಅವರು ಮಾತನಾಡಿ, “ಕರಾವಳಿಯ ಅಭಿವೃದ್ಧಿಯ ಧ್ವನಿಯನ್ನು ಸರ್ಕಾರದ ಮಟ್ಟದಲ್ಲಿ ಎತ್ತರಿಸಲು ಹಾಗೂ ಸಮಿತಿಯ ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಲು ಇಂದಿನ ಚರ್ಚೆ ಪೂರಕವಾಗಿದೆ,” ಎಂದು ತಿಳಿಸಿದರು.

Comments are closed.