ಕರಾವಳಿ

ಜಿಲ್ಲಾಧಿಕಾರಿಗಳಿಗೆ ಕ್ಯಾ. ಕಾರ್ಣಿಕ್ ಪತ್ರ : ಮಂಗಳೂರಿನ ರಾ.ಹೆದ್ದಾರಿಗಳ ಅವ್ಯವಸ್ಥೆ ಬಗ್ಗೆ ಇದರಲ್ಲಿದೆ ಸಂಪೂರ್ಣ ಚಿತ್ರಣ

Pinterest LinkedIn Tumblr

ಮಂಗಳೂರು : ಮಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿದ್ದು, ಸಾಕಷ್ಟು ಅಪಘಾತಗಳಿಗೆ ಕಾರಣವಾಗಿ ಸಾಕಷ್ಟು ಪ್ರಾಣ ಹಾನಿಯಾಗಿರುತ್ತದೆ. ಇದಕ್ಕೆ ಅವೈಜ್ಞಾನಿಕ ನಿರ್ಮಾಣ ಮಾಡಿರುವ ವೃತ್ತಗಳು, ಫ್ಲೈ ಓವರ್ ಕೂಡು ರಸ್ತೆಗಳು ಕಾರಣವಾಗಿವೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತೆಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿ ದ್ದಾರೆ. ಮಾತ್ರವಲ್ಲದೇ ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ಶೀಘ್ರ ಸರಿಪಡಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಆದೇಶ ನೀಡುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಈ ಕೆಳಕಂಡ ಹೆದ್ದಾರಿಯ ಅವ್ಯವಸ್ಥೆಗಳನ್ನು ಸರಿಪಡಿಸಲು ಆಗ್ರಹ:

1.ನಂತೂರು ವೃತ್ತ:

ನಗರದ ನಂತೂರು ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ೬೬ ಹಾಗೂ ರಾಷ್ಟ್ರೀಯ ಹೆದ್ದಾರಿ ೭೫ ರ ಕೂಡುವಿಕೆಯೊಂದಿಗೆ ಕವಲೊಡೆದಿರುವ ವೃತ್ತ ಅತ್ಯಂತ ಅವೈಜ್ಞಾನಿಕವಾಗಿದ್ದು, ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿ ಪ್ರಣಾಪಾಯವಾಗಿರುತ್ತದೆ. ಇಲ್ಲಿ ಸುವ್ಯವಸ್ಥಿತ ಸಿಗ್ನಲ್ ಲೈಟ್ ವ್ಯವಸ್ಥೆಯನ್ನು ಕಲ್ಪಿಸಲು ಅಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಈ ವೃತ್ತವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲು ತಜ್ಞ ಇಂಜಿನಿಯರ್‌ರಿಂಗ ಸಂಸ್ಥೆಗಳಿಂದ ಸಲಹೆಯನ್ನು ಪಡೆದು ವೃತ್ತ/ಫ್ಲೈ‌ಓವರ್ ನಿರ್ಮಾಣ ಮಾಡಲು ಯೋಜನೆ ತಯಾರಿಸುವುದು.

2. ಕೆ.ಪಿ.ಟಿ ವೃತ್ತ:

ನಗರದ ಕೆ.ಪಿ.ಟಿ. ವೃತ್ತ (ಬಸವೇಶ್ವರ ವೃತ್ತ)ದಲ್ಲಿ ಸಿಗ್ನಲ್ ಲೈಟಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದರೂ, ಸಿಗ್ನಲ್ ಲೈಟ್ ಇರುವಾಗಲೇ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆಯನ್ನು ಮಾಡಲು ನಿಯೋಜಿಸಲ್ಪಟ್ಟ ಪೊಲೀಸ್ ರು ಹರಸಾಹಸ ಪಡಬೇಕಾಗಿದೆ. ಅಂತೆಯೇ ಇಲ್ಲಿರುವ ಗುಂಡಿಗಳಿಂದ ಇನ್ನಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ವೃತ್ತವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಲು ಯೋಜನೆ ತಯಾರಿಸುವುದು ಹಾಗೂ ಇಲ್ಲಿರುವ ಗುಂಡಿಗಳನ್ನು ಕೂಡಲೇ ಮುಚ್ಚಿ ಸುಗಮ ಸಂಚಾರಕ್ಕೆ ಅಣಿ ಮಾಡುವಂತೆ ಸಂಬಂಧಿಸಿದವರಿಗೆ ಸೂಚಿಸುವುದು.

3. ಕೋಡಿಕಲ್ ಕ್ರಾಸ್:

ಕೊಟ್ಟಾರದಲ್ಲಿರುವ ಫ್ಲೈ ಓವರ್ ಕೋಡಿಕಲ್ ನಲ್ಲಿ ಅಂತ್ಯಗೊಂಡಿದ್ದು, ಈ ಪ್ರದೇಶದಲ್ಲಿ ಸರ್ವೀಸ್ ರಸ್ತೆಯಿಂದ ಬರುವ ವಾಹನಗಳು, ಕೋಡಿಕಲ್ ನಿಂದ ಬರುವ ವಾಹನಗಳು, ಕೂಳೂರು ಫ್ಲೈ‌ಓವರ್ ನಿಂದ ಬಂದ ವಾಹನಗಳು ತಿರುಗಲು ಹಾಗೂ ಕೊಟ್ಟಾರ ಫ್ಲೈ‌ಓವರ್ ನಿಂದ ಬರುವ ವಾಹನಗಳು ಕೂಡುವ ಪ್ರದೇಶವಾಗಿರುವುದರಿಂದ ಈ ವಲಯ ಅತ್ಯಂತ ಅಪಾಯಕಾರಿ ವಲಯವಾಗಿದೆ. ವಾಹನ ಸವಾರರ ಸುರಕ್ಷತೆಯಿಂದ ಈ ಪ್ರದೇಶವನ್ನು ವೈಜ್ಞಾನಿಕವಾಗಿ ರಚಿಸಬೇಕಾಗಿರುತ್ತದೆ. ಅಂತೆಯೇ ಸುರಕ್ಷಾ ಫಲಕಗಳನ್ನು ಅಳವಡಿಸುವುದು ಸೂಕ್ತವಾಗಿದೆ.

4. ಕೂಳೂರು ಫೈ‌ಓವರ್ ಬಳಿ ಬಸ್ ನಿಲ್ದಾಣದ ಅವ್ಯವಸ್ಥೆ ಹಾಗೂ ಹೊಂಡಗಳಿಂದ ಕೂಡಿದ ಸವೀಸ್ ರಸ್ತೆ:

ಉಡುಪಿ ಕಡೆಯಿಂದ ಬರುವ ಎಕ್ಸ್ ಪ್ರೆಸ್ ಬಸ್ ಗಳು ಕೂಳೂರು ಫ್ಲೈ‌ಓವರ್ ಪ್ರಾರಂಭದಲ್ಲಿ ನಿಲ್ಲುತ್ತಿದ್ದು, ಅಲ್ಲಿ ರಸ್ತೆಯು ಹೊಂಡಗಳಿಂದ ಕೂಡಿದ್ದು, ಮಳೆ ಬಂದು ಕೆಸರು ನೀರು ತುಂಬಿಕೊಂಡಿರುವುದರಿಂದ ನಡೆದಾಡಲು ಅಸಾಧ್ಯವಾಗಿರುತ್ತದೆ. ಅಲ್ಲದೆ ಇಲ್ಲಿ ಯಾವುದೇ ಬೀದಿ ದೀಪದ ವ್ಯವಸ್ಥೆ ಇಲ್ಲದೆ ಇರುವುದರಿಂದ ಕೂಳೂರು ಜಂಕ್ಷನ್ ತಲುಪುವ ಹಾದಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಪ್ರದೇಶವಾಗಿದೆ. ಕೂಳೂರು ಸರ್ವಿಸ್ ರಸ್ತೆ ದುರ್ಗಮವಾಗಿದ್ದು, ಇದರ ದುರಸ್ತಿ ಅತ್ಯಂತ ಜರೂರಾಗಿ ನಡೆಯಬೇಕಾಗಿದೆ.

5. ಸುರತ್ಕಲ್ ನಿಂದ ತಲಪಾಡಿಯವರೆಗೆ ಹಾಗೂ ನಂತೂರಿನಿಂದ ಪಡಿಲ್ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡಗಳನ್ನು ಮುಚ್ಚುವ ಕುರಿತು.

ಸುರತ್ಕಲ್ ನಿಂದ ತಲಪಾಡಿಯವರೆಗೆ ಹಾಗೂ ನಂತೂರಿನಿಂದ ಪಡೀಲ್ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿದ್ದು, ಬಹಳ ಸಮಯದಿಂದ ರಸ್ತೆ ನಿರ್ವಹಣೆ ಕಾರ್ಯ ನಡೆಸದೆ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಈ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದರಿಂದ ರಸ್ತೆಯನ್ನು ಸುಸಜ್ಜಿತವಾಗಿಡುವುದು ಅದ್ಯ ಕರ್ತವ್ಯವಾಗಿದೆ. ರಸ್ತೆಯ ನಿರ್ವಹಣೆ ಇಲ್ಲದೆ ಟೋಲ್ ಸಂಗ್ರಹ ನ್ಯಾಯಸಮ್ಮತವಲ್ಲ. ಈ ಕುರಿತು ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಹೆದ್ದಾರಿ ರಸ್ತೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಸಂಬಂಧಿಸಿದವರಿಗೆ ಆದೇಶಿಸುವುದು.

6. ಎನ್.ಐ.ಟಿ.ಕೆ. ಟೋಲ್ ಗೇಟ್ ಸಮೀಪ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ಸ್ ಸರಿಪಡಿಸುವ ಕುರಿತು.

ಎನ್.ಐ.ಟಿ.ಕೆ. ಟೋಲ್ ಗೇಟ್ ಸಮೀಪ ನಿರ್ಮಿಸಿರುವ ಹಂಪ್ಸ್‌ಗಳು ಅವೈಜ್ಞಾನಿಕವಾಗಿದ್ದು, ವಾಹನಗಳ ತಳಭಾಗಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇಂತಹ ಹಂಪ್ಸಗಳನ್ನು ತೆರವುಗೊಳಿಸಿ ವೈಜ್ಞಾನಿಕ ನೆಲೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸುವುದು.

7. ಪಂಪ್‌ವೆಲ್ ಹಾಗೂ ತೊಕೊಟ್ಟು ಫ್ಲೈ‌ಓವರ್ ಕಾಮಗಾರಿಯನ್ನು ಚುರುಕುಗೊಳಿಸುವುದು.

ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯನ್ನು ಶೀಘ್ರದಲ್ಲಿ ಕರೆದು ಸೂಕ್ತ ನಿರ್ದೇಶನವನ್ನು ನೀಡುವಂತೆ ಜಿಲ್ಲಾಧಿಕಾರಿಗಳನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಆಗ್ರಹಿಸಿದ್ದಾರೆ.

Comments are closed.