ಆರೋಗ್ಯ

ವಾಯುಮಾಲಿನ್ಯದಿಂದ ಹೃದಯಾಘಾತ….?

Pinterest LinkedIn Tumblr

ನಿಮ್ಮ ರಕ್ತ ಎ,ಬಿ ಅಥವಾ ಎಬಿ ಗುಂಪಿಗೆ ಸೇರಿದ್ದಾಗಿದ್ದರೆ ಗಂಭೀರ ವಾಯುಮಾಲಿನ್ಯದ ಸಂದರ್ಭಗಳಲ್ಲಿ ಹೃದಯಾಘಾತಕ್ಕೆ ಗುರಿಯಾಗುವ ಅಪಾಯ ‘ಒ’ ರಕ್ತದ ಗುಂಪಿನವರಿಗಿಂತ ಹೆಚ್ಚಾಗಿರುತ್ತದೆ ಎಂದು ನೂತನ ಅಧ್ಯಯನವೊಂದು ಬೆಳಕಿಗೆ ತಂದಿದೆ.

ವಾಯುಮಾಲಿನ್ಯವು ಪ್ರತಿ ಘನ ಮೀಟರ್ಗೆ 25 ಮೈಕ್ರೋಗ್ರಾಮ್ ಮಟ್ಟಕ್ಕೆ ತಲುಪಿದರೆ ಅದು ಎ,ಬಿ ಮತ್ತು ಎಬಿ ಗುಂಪಿನ ರಕ್ತ ಹೊಂದಿದವರಿಗೆ ಅಪಾಯವನ್ನು ಹೆಚ್ಚಿಸುತ್ತದೆ.ಮಾಲಿನ್ಯವು ಈ ಮಟ್ಟವನ್ನು ದಾಟಿದ ನಂತರ ಪ್ರತಿ ಘನ ಮೀಟರ್ಗೆ 10 ಮೈಕ್ರೋಗ್ರಾಮ್ಗಳ ಹೆಚ್ಚುವರಿ ಮಾಲಿನ್ಯವು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತಲೇ ಹೋಗುತ್ತದೆ ಎನ್ನುತ್ತಾರೆ.

ಸಂಶೋಧಕರು ‘ಒ’ ಮಾದರಿಯ ರಕ್ತಗುಂಪು ಮತ್ತು ಅದಕ್ಕೆ ಹೊರತಾದ ರಕ್ತಗುಂಪುಗಳ, ಅಂದರೆ ಪಾಸಿಟಿವ್ ಮತ್ತು ನೆಗೆಟಿವ್ ಎ,ಬಿ ಹಾಗೂ ಎಬಿ ಮಾದರಿಗಳ ನಡುವಿನ ವಂಶವಾಹಿ ವ್ಯತ್ಯಾಸಗಳನ್ನು ತಮ್ಮ ಅಧ್ಯಯನಕ್ಕೊಳಪಡಿಸಿದ್ದರು. ‘ಒ’ ಗುಂಪಿನ ರಕ್ತ ಹೊಂದಿದವರು ಹೃದಯಾಘಾತದ ಕಡಿಮೆ ಅಪಾಯ ಮತ್ತು ಇತರ ಗುಂಪುಗಳ ರಕ್ತವನ್ನು ಹೊಂದಿರುವರು ಹೆಚ್ಚು ಅಪಾಯದ ಸಾಧ್ಯತೆಯನ್ನು ಹೊಂದಿರುತ್ತಾರೆ ಎನ್ನುವುದು ಅಧ್ಯಯನದಲ್ಲಿ ಕಂಡು ಬಂದಿದೆ.

ಆದರೆ ‘ಒ’ಗುಂಪಿಗಿಂತ ಭಿನ್ನ ಗುಂಪಿನ ರಕ್ತ ಹೊಂದಿರುವ ರೋಗಿಗಳಲ್ಲಿ ಹೃದಯಾಘಾತ ಮತ್ತು ವಾಯುಮಾಲಿನ್ಯಕ್ಕೂ ಇರುವ ನಂಟಿನಿಂದ ಆತಂಕ ಪಟ್ಟುಕೊಳ್ಳಬೇಕಿಲ್ಲ, ಆದರೆ ಆ ಬಗ್ಗೆ ಅರಿವಿದ್ದರೆ ಸೂಕ್ತ ಮುನ್ನೆಚ್ಚರಿಕೆ ವಹಿಸಬಹುದಾಗಿದೆ ಎಂದು ಹಾರ್ನ್ ಹೇಳಿದ್ದಾರೆ.

ಆದರೆ ವಾಯುಮಾಲಿನ್ಯ ಅತ್ಯಂತ ಹೆಚ್ಚಾಗಿದ್ದಾಗ ‘ಒ’ ರಕ್ತಗುಂಪಿನವರೂ ಹೃದಯಾಘಾತ ಅಥವಾ ನಿರಂತರ ಎದೆನೋವಿಗೆ ಗುರಿಯಾಗುವ ಅಪಾಯದಿಂದ ಹೊರತಲ್ಲ. ಆದರೆ ಅವರಲ್ಲಿ ಈ ಅಪಾಯದ ಮಟ್ಟವು ಕಡಿಮೆಯಾಗಿರುತ್ತದೆ. ಇತರ ರಕ್ತಗುಂಪಿನವರಲ್ಲಿ ಪ್ರತಿ ಘನ ಮೀಟರ್ಗೆ 10 ಮೈಕ್ರೋಗ್ರಾಮ್ನ ಹೆಚ್ಚುವರಿ ಮಾಲಿನ್ಯವು ಈ ಅಪಾಯವನ್ನು ಶೇ.25ರಷ್ಟು ಹೆಚ್ಚಿಸಿದರೆ, ‘ಒ’ ಗುಂಪಿನವರಲ್ಲಿ ಇದು ಶೇ.10ರಷ್ಟಿರುತ್ತದೆ. ಅಂದರೆ ಪ್ರತಿ ಘನ ಮೀಟರ್ಗೆ 65 ಮೈಕ್ರೋಗ್ರಾಮ್ ವಾಯುಮಾಲಿನ್ಯ ಮಟ್ಟವಿದ್ದಾಗ ‘ಒ’ ರಕ್ತಗುಂಪಿನವರು ವಾಯುಮಾಲಿನ್ಯವಿಲ್ಲದಿದ್ದ ಸಂದರ್ಭಕ್ಕೆ ಹೋಲಿಸಿದರೆ ಶೇ.40ರಷ್ಟು ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.

ಅಧ್ಯಯನ ವರದಿಯ ಪ್ರಕಾರ ವಿಪರೀತ ವಾಯುಮಾಲಿನ್ಯವಿದ್ದಾಗ ಹೊರಗೆ ಹೋಗದಿರುವುದು, ಮನೆಯಲ್ಲಿಯೇ ವ್ಯಾಯಾಮ ಮಾಡುವುದು ಮತ್ತು ಹೃದಯ ಸಮಸ್ಯೆಯಿದ್ದವರು ಔಷಧಿಗಳನ್ನು ಸರಿಯಾಗಿ ಸೇವಿಸುವದರಿಂದ ಹೃದಯಾಘಾತದ ಅಪಾಯವನ್ನು ತಗ್ಗಿಸಬಹುದು ಎಂದೂ ವರದಿಯು ಹೇಳಿದೆ.

Comments are closed.