ಆರೋಗ್ಯ

ಹಗಲಲ್ಲೂ ನಿದ್ರೆ ಬರುತ್ತಾ? ಕಾರಣ, ಪರಿಹಾರವೇನು?

Pinterest LinkedIn Tumblr


ಈಗೀಗ ಜನರಿಗೆ ನಿದ್ರೆ ಮಾಡಲೂ ಪುರುಸೊತ್ತಿಲ್ಲದಂಥ ಒತ್ತಡ. ಇದರಿಂದ ಸೃಷ್ಟಿಯಾಗೋ ಸಮಸ್ಯೆಗಳು ಮಾತ್ರ ಒಂದೆರಡಲ್ಲ. ಅಲ್ಲಿ ಕೆಲಸದಲ್ಲೂ ಏಕಾಗ್ರತೆ ಸಾಧಿಸಲಾಗದೇ, ಇಲ್ಲಿ ಮನೆಯಲ್ಲೂ ಖುಷ್, ಖುಷಿಯಾಗಿ ಇರಲಾದರೇ, ಯಾತನೆ ಅನುಭವಿಸುತ್ತಾರೆ.

ಇಂಧ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ದರೆ, ಇನ್ಸೋಮಿಯಾ ರೋಗದಿಂದ ಬಳಲುತ್ತಿದ್ದೀರಿ ಎಂದರ್ಥ. ಯಾವುದೇ ರೋಗ ಲಕ್ಷಣವಿಲ್ಲದೆ ನಿದ್ರಾ ಅಭಾವ ಕಂಡುಬಂದರೆ ಅದು ಪ್ರಾಥಮಿಕ ಹಂತ. ನಾನಾ ರೀತಿಯ ರೋಗ ಲಕ್ಷಣಗಳಿಂದ ಬಳಲುತ್ತಿದ್ದರೆ ಅದು ಪ್ರೌಢ ಹಂತ.

ನಿದ್ರಾಹೀನತೆ ಕಾಡುವ ಕಾಲಕ್ಕೆ ತಕ್ಕಂತೆ, ಅಶಾಶ್ವತ ನಿದ್ರಾಭಾವ, ಅಲ್ಪಾವಧಿ ನಿದ್ರಾಭಾವ ಮತ್ತು ತೀವ್ರ ನಿದ್ರಾಭಾವ ಎಂಬುದಾಗಿ ಗುರುತಿಸಲಾಗಿದೆ. ಅಶಾಶ್ವತ ನಿದ್ರಾಭಾವ ಏಳು ದಿನಕ್ಕಿಂತ ಕಡಿಮೆ ಇದ್ದರೆ, ಅಲ್ಪಾವಧಿ ನಿದ್ರಾಭಾವ ಒಂದರಿಂದ ಮೂರು ವಾರಗಳ ತನಕ ಕಾಡುತ್ತದೆ. ಮೂರು ತಿಂಗಳಿಗೂ ಹೆಚ್ಚಾಗಿ ಕಾಡುವ ನಿದ್ರಾಭಾವವನ್ನು ಕ್ರಾನಿಕ್ ಅಥವಾ ತೀವ್ರ ನಿದ್ರಾಭಾವ ಎನ್ನುತ್ತಾರೆ.

ಯಾವಾಗ ವೈದ್ಯರನ್ನು ಭೇಟಿಯಾಗೋದು ಅಗತ್ಯ?

– ಮೂರ್ನಾಲ್ಕು ವಾರಗಳಿಂದ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ.
– ರಾತ್ರಿ ವೇಳೆಯಲ್ಲಿ ಉಸಿರಾಟದ ತೊಂದರೆ ಹೆಚ್ಚಿದ್ದರೆ.
– ದಿನಚರಿಯಲ್ಲಿ ವ್ಯತ್ಯಾಸ ಕಂಡು ಬಂದು, ಉದಾಸೀನತೆ ಇದ್ದರೆ ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ.

ನಿದ್ರಾಹೀನತೆಗೆ ಕಾರಣಗಳೇನು?

– ಅಶಾಶ್ವತ, ಅಲ್ಪಾವಧಿ ನಿದ್ರಾಭಾವಕ್ಕೆ ಕಾರಣ ಬದಲಾಗುತ್ತಿರುವ ಕೆಲಸದ ಪಾಳಿ.
– ಅಳತೆ ಮೀರಿದ ಅಥವ ಕಿರಿಕಿರಿ ಎಂದೆನಿಸುವ ಶಬ್ದ.
– ಕೊಠಡಿಯಲ್ಲಿನ ಉಷ್ಣತೆಯ ಹೆಚ್ಚಳ.
– ಒತ್ತಡದ ಪರಿಸ್ಥಿತಿ.
– ಜೀವನದಲ್ಲಿನ ತಿರುವುಗಳ ಸಂದರ್ಭ. ಅಂದರೆ ಪರೀಕ್ಷಾ ಸಿದ್ಧತೆ, ಪ್ರೀತಿ ಪಾತ್ರರನ್ನು ಕಳೆದುಕೊಂಡ ವೇದನೆ, ನಿರುದ್ಯೋಗ, ವಿಚ್ಛೇದನದ ಆಘಾತದಂಥ ಒತ್ತಡ.
– ಮಾದಕ ದ್ರವ್ಯ, ಆಲ್ಕೋಹಾಲ್ ನಿಲ್ಲಿಸಿದ ಕೆಲವು ದಿನಗಳ ಕಾಲ.
– ಕೆಲವು ಔಷಧಗಳ ಪ್ರಭಾವ

ಲಕ್ಷಣಗಳೇನು?

– ಆತಂಕ.
– ಖಿನ್ನತೆ.
– ಮಾನಸಿಕ, ಭಾವನಾತ್ಮಕ ಹಾಗೂ ಸಾಂದರ್ಭಿಕ ಒತ್ತಡದಿಂದ ಸ್ಕಿಜೋಫ್ರೆನಿಯಾ/ಉಸಿರಾಟಕ್ಕೆ ಸಂಬಂಧಿಸಿದ ರೋಗ
– ಸಂದಿ ನೋವುಗಳಿಂದ ಬಳಲುತ್ತಿದ್ದರೆ, ತೀವ್ರ ದೈಹಿಕ ನೋವು.
– ಹೃದಯಾಘಾತದ ಲಕ್ಷಣಗಳಿದ್ದಾಗ ಅಥವಾ ಹೃದ್ರೋಗ ಸಮಸ್ಯೆಯಿದ್ದರೆ, ಎದೆ ನೋವು.
– ಆಸ್ತಮಾದಂಥ ಕಾಹಿಲೆಗಳಿಂದ ಬಳಲುತ್ತಿದ್ದರೆ, ಉಸಿರಾಟದ ತೀವ್ರ ಸಮಸ್ಯೆ.
– ಅಜೀರ್ಣ, ವಾಯು ಪ್ರಕೋಪಗಳಲ್ಲಿದ್ದರೆ, ಅದರ ಸಮಸ್ಯೆ ತೀವ್ರವಾಗಿ ಕಾಡುತ್ತದೆ.
– ಪಾರ್ಶ್ವ ವಾಯುವಿನಂಥ ರೋಗ ಲಕ್ಷಣಗಳಿದ್ದಾಗ, ಸಮಸ್ಯೆಯ ತೀವ್ರತೆ ಕಾಡುತ್ತದೆ.
– ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರೆ, ನರ ಸಮಸ್ಯೆ ತೀವ್ರವಾಗುತ್ತದೆ.
– ರಾತ್ರಿ ವೇಳೆ ನಿದ್ರೆ ಬಾರದಿರುವುದ, ನಿದ್ರೆಯಲ್ಲಿ ನಡೆಯುವುದು.
– ಹಗಲು ಹೊತ್ತಲ್ಲಿ ಕಾಡುವ ಸುಸ್ತು, ನಿದ್ರೆ ಬರುವುದು.

ಚೆನ್ನಾಗಿ ನಿದ್ರೆ ಬರಲು ಕಾರಣವೇನು?

– ನಿದ್ರಾ ವೇಳಾಪಟ್ಟಿ ನಿರ್ಮಿಸಿ ಮತ್ತು ಅದನ್ನು ಪಾಲಿಸಿ.
– ನಿದ್ದೆ ಬಾರದಿದ್ದಾಗ ಸುಮ್ಮನೆ ಹೊರಳಾಡದೆ ಎದ್ದು ಬಿಡಿ.
– ಮಲಗುವ ಕೋಣೆಯನ್ನು ಸೆಕ್ಸ್ ಮತ್ತು ನಿದ್ರೆಗಾಗಿ ಮಾತ್ರ ಬಳಸಿ.
– ಓದುವುದು, ಟೀವಿ ನೋಡುವುದು, ಊಟಮಾಡುವುದು ಇತ್ಯಾದಿ ಕಾರ್ಯಗಳಿಗೆ ಹಾಸಿಗೆ ಬಳಸಬೇಡಿ.
– ನಿದ್ರೆಗೆ ಜಾರುವ ಮುನ್ನ ಬೆಚ್ಚನೆ ನೀರಿನಲ್ಲಿ ಸ್ನಾನ ಮಾಡಿ.
– ಉದ್ದ ಲೋಟದಲ್ಲಿ ಹಾಲುಕುಡಿಯುವ ರೂಢಿ ಇದ್ದರೆ, ನಿದ್ರೆಗೆ ಹೆಚ್ಚು ಪುಷ್ಟಿ ದೊರೆಯುತ್ತದೆ.
– ದಿನದಲ್ಲಿ 20ರಿಂದ 30 ನಿಮಿಷಗಳವರೆಗಾದರೂ ನಿಯಮಿತ ವ್ಯಾಯಾಮ ಮಾಡಿ.
– ವಿಪರೀತ ಕಾಫಿ, ಟೀ ಸೇವನೆ, ಆಲ್ಕೋಹಾಲ್‌ಗೆ ಗುಡ್‌ ಬೈ ಹೇಳಿದರೆ ಒಳಿತು.
– ಮಲಗುವ ಮುನ್ನ ಹಿತಮಿತ ಆಹಾರ ಸೇವಿಸಿ.

 

ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಿ

– ಒತ್ತಡದಿಂದ ಹೊರಬರಲು ದೀರ್ಘ ಉಸಿರಾಟ ಅಭ್ಯಾಸ ಮಾಡಿ.
– ಆಪ್ತ ಸಲಹೆ ಮೂಲಕ ಗೊಂದಲಗಳನ್ನು ಹೊರ ಹಾಕಿ.
– ಒಳ್ಳೆಯ, ಶಿಸ್ತಿನ ನಿದ್ರಾಭ್ಯಾಸ ಅನುಸರಿಸಿ.
– ಬಸ್ಸು ಮತ್ತಿತರ ವಾಹನಗಳಲ್ಲಿ ಪಯಣಿಸುವಾಗ, ಕೆಲಸ ಮಾಡುವ ವೇಳೆಯಲ್ಲಿ ನಿದ್ರೆ ಮಾಡದಂತೆ ಎಚ್ಚರ ವಹಿಸಿ. ನಿಗದಿತ ಸಮಯದಲ್ಲಿ ಮಾತ್ರ ನಿದ್ರೆ ತಪ್ಪಿಸಬೇಡಿ.
– ಪ್ರತಿ ದಿನವೂ ನಿಗದಿತ ವೇಳೆಯಲ್ಲೇ ಮಲಗಿಬಿಡಿ.
– ಲೈಟ್ ಥೆರಪಿ ಮೂಲಕವೂ ನಿದ್ರಾಹೀನತೆಗೆ ಬ್ರೇಕ್ ಹಾಕಬಹುದು.

ವೈದ್ಯಕೀಯ ಚಿಕಿತ್ಸೆ

ವೈದ್ಯರ ಸಲಹೆಯಂತೆ ನಿದ್ದೆ ಗುಳಿಗೆಗಳನ್ನು ಸೇವಿಸುವುದು ಇದಕ್ಕಿರುವ ಪರಿಹಾರ. ಆದರೆ ಸಾಮಾನ್ಯವಾಗಿ ಅಡ್ಡ ಪರಿಣಾಮಗಳಿರುವುದರಿಂದ, ವೈದ್ಯರು ಮಾತ್ರೆ ಸೇವಿಸಲು ಹೇಳುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಷ್ಟೇ ಮಾತ್ರೆ ಸೇವಿಸಲು ವೈದ್ಯರು ಅನುಮತಿ ನೀಡುತ್ತಾರೆ. ನಿದ್ದೆ ಮಾತ್ರೆ ಸೇವನೆಯಿಂದ ಅಲ್ಲದ ಅರೆ ನಿದ್ರಾವಸ್ಥೆ, ಬಾಯಿ ಒಣಗುವಿಕೆ, ಸರಿಯಾಗಿ ವಸ್ತುಗಳು ಕಾಣದಿರುವಿಕೆಗಳಂಥ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ.

Comments are closed.