ಇದು ಧಾವಂತಹ ಯುಗ. ಎಲ್ಲ ಕೆಲಸಗಳೂ ಚಿಟಿಕೆ ಹೊಡೆಯುವಷ್ಟರಲ್ಲಿ ನಡೆಯಬೇಕು. ಇದರಿಂದಾಗಿಯೇ ನಮಗೆ ಒತ್ತಡ ಬರುತ್ತದೆ… ಮನಸ್ಸಿನ ಒತ್ತಡ ಹೆಚ್ಚಾಗಿದೆಯೆಂದ ಕೂಡಲೇ…ಕಾಫೀ ಅಥವಾ ಟೀ ಕುಡಿಯುತ್ತೇವೆ. ಹೀಗೆ ಕುಡಿಯುವಾಗ ನಿಧಾನವಾಗಿ ಕುಡಿಯದೆ, ಗಮನ ಹರಿಸದೆ, ಗಬಗಬನೆ ಕುಡಿಯುತ್ತೇವೆ. ಟೀ ಎಂದರೆ ಇಷ್ಟ ಪಡದವರು ಯಾರಿದ್ದಾರೆ ಹೇಳಿ.? ಯಾವ ಕಾಲದಲ್ಲೇ ಆಗಲಿ ಬಿಸಿ ಬಿಸಿ ಟೀ ಯನ್ನು ಚಪ್ಪರಿಸಿ ಕುಡಿಯುತ್ತಿದ್ದರೆ, ಅದರಿಂದ ದೊರೆಯುವ ಮಜಾನೇ ಬೇರೆಯಲ್ಲವೇ? ಇಷ್ಟಕ್ಕೂ ಟೀ ಕುಡಿಯುವಾಗ ನೀವು ಯಾವಾಗಲಾದರೂ ಒಂದು ವಿಷಯವನ್ನು ಗಮನಿಸಿದ್ದೀರಾ..? ಟೀ ಯನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನೋಡಿದರೆ, ಅದರ ಮೇಲೆ ಕೆನೆಯಂತಹ ಪದರ ಉಂಟಾಗುತ್ತದೆ. ಹೀಗೆ ಉಂಟಾದ ಕೆನೆಯನ್ನು ತಿಂದರೆ…ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಅನುಮಾನ ಕೆಲವರಲ್ಲಿ ಮೂಡುತ್ತದೆ. ಕೆಲವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೆನೆ ಸಮೇತ ಟೀ ಕುಡಿಯುತ್ತಾರೆ. ಹಾಗಾದರೆ, ಟೀ ಮೇಲಿನ ಕೆನೆಯನ್ನು ಕುಡಿಯುವುದರಿಂದ ಏನಾಗುತ್ತದೆಂದು ತಿಳಿಯೋಣ.
ಅಳತೆ ಮೀರಿದರೆ ಆಪತ್ತು.
ಹಾಲಿಗಿಂತಲೂ ಕೆನೆಯಲ್ಲಿ ಹೆಚ್ಚು ಕೊಬ್ಬಿನಂಶ ಇರುತ್ತದೆ. ಹಾಲಿನಲ್ಲಿರುವುದಕ್ಕಿಂತಲೂ ಶೇ.20-36 ವರೆಗೂ ಅಧಿಕ ಕೊಬ್ಬಿನಂಶ ಇರುತ್ತದೆ. ಅದರಲ್ಲಿ ಸ್ಯಾಚುರೇಟೆಡ್ ಫ್ಯಾಟ್ಸ್, ಟ್ರಾನ್ಸ್ ಫ್ಯಾಟ್ಸ್ ಇರುತ್ತವೆ. ಇವು ನಮ್ಮ ಶರೀರಕ್ಕೆ ಸ್ವಲ್ಪ ಮಟ್ಟಿಗೆ ಅಗತ್ಯವೂ ಕೂಡ. ಹೀಗೆ ಟೀ ಮೇಲೆ ಏರ್ಪಟ್ಟ ಕೆನೆಯನ್ನು ಅಗತ್ಯಕ್ಕಿಂತಲೂ ಹೆಚ್ಚಿಗೆ ಕುಡಿದಲ್ಲಿ, ಈ ಕೊಬ್ಬು ರಕ್ತನಾಳಗಳಲ್ಲಿ ಶೇಖರಗೊಂಡು ಹೃದಯದ ಕಾಯಿಲೆ ಬರುವ ಸಂಭವವಿರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಆದುದರಿಂದ ಟೀ ಸೇವಿಸುವವರು ಕೆನೆಯನ್ನು ತೆಗೆದು ಹಾಕಿ ಕುಡಿದರೇನೇ ಒಳ್ಳೆಯದು. ಪ್ರತಿದಿನ 2 ಗ್ರಾಮುಗಳವರೆಗೂ ತಿಂದರೆ ಏನೂ ತೊಂದರೆಯಿಲ್ಲವಂತೆ. ಈ ಪ್ರಮಾಣ ಮೀರದಂತೆ ನೋಡಿಕೊಳ್ಳಬೇಕು.
ಕೆನೆ ಹೇಗೆ ಉಂಟಾಗುತ್ತದೆ.?
ಸಾಮಾನ್ಯವಾಗಿ ಟೀ ಮೇಲೆ ಉಂಟಾಗುವ ಕೆನೆ ಅದರಲ್ಲಿರುವ ಹಾಲಿನಿಂದ ಬರುತ್ತದೆ. ಹಾಲನ್ನು ಬಿಸಿ ಮಾಡಿದಾಗ ಅದರಲ್ಲಿರುವ ಕೊಬ್ಬಿನಂಶ ಬೇರ್ಪಟ್ಟು ತೆಳು ಪದರ ಮೂಡುತ್ತದೆ. ಈ ರೀತಿ ಹಾಲಿನಿಂದ ಟೀ ಮಾಡಿದಾಗ ಕೆನೆ ಪದರ ಉಂಟಾಗುತ್ತದೆ. ದೀರ್ಘಕಾಲ ಹೀಗೆ ಕೆನೆ ಸಹಿತ ಟೀ ಕುಡಿದರೆ ಅನಾರೋಗ್ಯ ಉಂಟಾಗಬಹುದು. ಆ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ.