ಉಡುಪಿ: ದಿನಪೂರ್ತಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ರಸ್ತೆ ಅಭಿವೃದ್ಧಿ, ಮೀನುಗಾರಿಕಾ ರಸ್ತೆ, ಕಡಲತೀರ ಸಂರಕ್ಷಣಾ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮಲ್ಪೆ ಸುತ್ತಮುತ್ತಲ ಬೊಬ್ಬರ್ಯಪಾದೆ ಬಳಿ ಮೀನುಗಾರಿಕಾ ಜೆಟ್ಟಿ 2.40 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ತಿಂಗಳೊಳಗಾಗಿ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದು ಐತಿಹಾಸಿಕವೆಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು. ಇದಕ್ಕೆ ಪೂರಕವಾಗಿ ಸಂಪರ್ಕ ರಸ್ತೆಯನ್ನು 0.55 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದೂ ಸಚಿವರು ಹೇಳಿದರು.
ಡ್ರೆಜ್ಜಿಂಗ್ ನಾಳೆಯಿಂದ ಆರಂಭವಾಗಲಿದ್ದು, 1.30 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ತಡೆಗೋಡೆ ಕುತ್ಪಾಡಿಯಲ್ಲಿ ಆರಂಭವಾಗಿದೆ. ಕಡಲಕೊರೆತದಿಂದಾಗಿ ಇಲ್ಲಿನ ಮೀನುಗಾರಿಕೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ರಿಪೇರಿಗೆ ಸೂಚನೆಯನ್ನು ಸಚಿವರು ನೀಡಿದರು.
ಬಂದರು ಮತ್ತು ಮೀನುಗಾರಿಕಾ ವ್ಯಾಪ್ತಿಯಡಿ ಕೈಗೊಂಡ ಕಾಮಗಾರಿಗಳಲ್ಲಿ 11 ಕೋಟಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ್ದು, 9 ಕೋಟಿ ಕಾಮಗಾರಿಗಳ ಉದ್ಘಾಟನೆಯಾಗಿದೆ. ನಗರೋತ್ಥಾನ ಅನುದಾನದಲ್ಲಿ ಮಲ್ಪೆ ಕಡಲತೀರ ಸಂರಕ್ಷಣಾ ಕಾಮಗಾರಿ 3 ಕೋಟಿ ರೂ. ವೆಚ್ಚದಲ್ಲಿ, ಮಲ್ಪೆ ಕಡಲತೀರದಲ್ಲಿ ತುರ್ತು ಸಂರಕ್ಷಣಾ ಕಾಮಗಾರಿಗೆ 1.30 ಕೋಟಿ, ಉತ್ತರ ಭಾಗದ ಕಡಲತೀರದಲ್ಲಿ ತುರ್ತು ಸಂರಕ್ಷಣಾ ಕಾಮಗಾರಿಗೆ 1.90ಕೋಟಿ ರೂ.ಗಳ ಕಾಮಗಾರಿಗಳು ಲೋಕಾರ್ಪಣೆಯಾಗಿದೆ.
ಐದು ಕೋಟಿ ರೂ. ವೆಚ್ಚದಲ್ಲಿ ಮಲ್ಪೆ 1 ಮತ್ತು ಎರಡನೇ ಹಂತದ ಮೀನುಗಾರಿಕೆ ಬಂದರಿನ ಆವರಣದಲ್ಲಿ ಜಟ್ಟಿ ವಿಸ್ತರಣೆ, ಹರಾಜು ಪ್ರಾಂಗಣದ ನವೀಕರಣ ಹಾಗೂ ಅಂತರಿಕ ರಸ್ತೆಗಳ ಕಾಮಗಾರಿ, ಕಿದಿಯೂರು ಪಡುಕೆರೆ ಕಡಲತೀರದಲ್ಲಿ ಶಾಶ್ವತ ಸಮುದ್ರ ಕೊರೆತ ತಡೆ ಸಂರಕ್ಷಣೆ ಕಾಮಗಾರಿಗೆ ೪.೮೦ ಕೋಟಿ ರೂ., ಕಡೆಕಾರ್ ಪಡುಕೆರೆ ಕಡಲತೀರದಲ್ಲಿ ತುರ್ತು ಸಮುದ್ರ ಕೊರೆತ ತಡೆ ಸಂರಕ್ಷಣೆಗೆ 1.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿವೆ.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಉಪಾದ್ಯಕ್ಷರಾದ ಸಂಧ್ಯಾ, ಸತೀಶ್ ಅಮೀನ್ ಪಡುಕೆರೆ, ದಿವಾಕರ್ ಎ ಕುಂದರ್, ನಗರಸಭಾ ಸದಸ್ಯ ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಬಂದರು ಇಲಾಖೆಯ ಇಂಜಿನಿಯರ್ ನಾಗರಾಜ್, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.