ಕರ್ನಾಟಕ

5 ಕಿಲೋ ಅಕ್ಕಿ ಬದಲು 34 ರೂಪಾಯಿಯಂತೆ, ಫಲಾನುಭವಿಗಳಿಗೆ ತಿಂಗಳಿಗೆ 170 ನೀಡಲು ಸರ್ಕಾರ ನಿರ್ಧಾರ..!

Pinterest LinkedIn Tumblr

ಬೆಂಗಳೂರು: ಉಚಿತ ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಬುಧವಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ, ಫಲಾನುಭವಿಗಳಿಗೆ ತಿಂಗಳಿಗೆ 170 ರೂಪಾಯಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಎಚ್‌.ಕೆ.ಪಾಲೀಲ್ ಮತ್ತು ಆಹಾರ ಸಚಿವ ಮುನಿಯಪ್ಪ, “ಕೇಂದ್ರ ಸರ್ಕಾರವು ತನ್ನ ಬಳಿ ಅಕ್ಕಿ ದಾಸ್ತಾನು ಇದ್ದರೂ ರಾಜ್ಯದ ಫಲಾನುಭವಿಗಳಿಗೆ ಅಕ್ಕಿ ನೀಡಿಲ್ಲ. ನಾವು ಹಣ ಕೊಡುತ್ತೇವೆ ಎಂದರೂ ಸ್ಪಂದಿಸಿಲ್ಲ” ಎಂದು ಮುನಿಯಪ್ಪ ದೂರಿದರು.

15 ಲಕ್ಷ ಟನ್‌ನಷ್ಟು ಅಕ್ಕಿಯನ್ನು ಮುಕ್ತ ಟೆಂಡರ್‌ ಮೂಲಕ ಕೆಜಿಗೆ 31 ರೂಪಾಯಿಯಂತೆ ಕೊಟ್ಟಿದ್ದಾರೆ. ನಾವು 34 ರೂಪಾಯಿ ಕೊಡುತ್ತೇವೆ ಎಂದರೂ ಸ್ಪಂದಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಬದಲಿ ಯೋಚನೆ ಮಾಡಬೇಕಾಯಿತು. ಕೇಂದ್ರದ ಅಧೀನದಲ್ಲಿರುವ ಸಂಸ್ಥೆಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ ಕೇಂದ್ರ ಗೋದಾಮು ನಿಗಮವು ಒಂದು ಕೆಜಿ ಅಕ್ಕಿಗೆ ನಿಗದಿಪಡಿಸಿರುವ 34 ರೂಪಾಯಿ ಮೊತ್ತವನ್ನು ಜನರಿಗೇ ನೇರವಾಗಿ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮುನಿಯಪ್ಪ ತಿಳಿಸಿದರು.

ಕೇಂದ್ರ ಸರ್ಕಾರ ನಮಗೆ ಸಹಕರಿಸಿಲ್ಲ. ಬಡವರಿಗೆ ಅಕ್ಕಿ ಕೊಡುವುದರಲ್ಲಿ ರಾಜಕೀಯ ಮಾಡಿದ ಕಾರಣ ನಾವು ಜನರಿಗೆ ಮಾತು ಕೊಟ್ಟಂತೆ ಹಣ ನೀಡುತ್ತೇವೆ. ನಂತರದ ದಿನಗಳಲ್ಲಿ ಪಾರದರ್ಶಕವಾಗಿ ಟೆಂಡರ್ ಕರೆದು ಪ್ರತಿ ಫಲಾನುಭವಿಗೆ ತಲಾ 10 ಕೆಜಿಯಂತೆ ಅಕ್ಕಿ ಕೊಡುತ್ತೇವೆ. ಸದ್ಯಕ್ಕೆ ಒಂದು ಕಿಲೋಗೆ 34 ರೂಪಾಯಿಯಂತೆ ಮನೆಯಲ್ಲಿ ಎಷ್ಟು ಜನರಿದ್ದಾರೆ ಲೆಕ್ಕ ಹಾಕಿ ಹಣ ನೀಡುತ್ತೇವೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಈ ಯೋಜನೆಯ ಅನುಷ್ಠಾನಕ್ಕಾಗಿ ಒಂದು ತಿಂಗಳಿಗೆ ಸುಮಾರು 800 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅಲ್ಲದೆ 20 ಸಾವಿರ ಟನ್ ಅಕ್ಕಿ ಖರೀದಿಗೂ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

ಅಕ್ಕಿ ಬದಲು ಹಣ ನೀಡುವ ತಾಂತ್ರಿಕ ವಿವರ ಒದಗಿಸಿದ ಸಚಿವ ಎಚ್‌.ಕೆ.ಪಾಟೀಲ, ಕುಟುಂಬದ ಯಜಮಾನರ ಬ್ಯಾಂಕ್ ಅಕೌಂಟ್‌ಗೆ ಹಣ ಹಾಕುತ್ತೇವೆ. ಅವರು ಮನೆಯ ಇತರರಿಗೆ ಆಹಾರ ಒದಗಿಸುತ್ತಾರೆ ಎಂದು ವಿವರಿಸಿದರು.

ಶೇ 95ರಷ್ಟು ಪಡಿತರ ಚೀಟಿಗಳು ಆಧಾರ್ ಕಾರ್ಡ್‌ಗೆ ಲಿಂಕ್ ಹಾಗಿವೆ. ಗೃಹಲಕ್ಷ್ಮೀ ಯೋಜನೆಗೂ ಇದು ಬಳಕೆಯಾಗಲಿದೆ. ಬ್ಯಾಂಕ್ ಖಾತೆಗಳಿಗೆ ಹಣ ಹಾಕುತ್ತೇವೆ. ಈ ತಿಂಗಳಲ್ಲಿಯೇ ನಾವು ಕೆಲಸ ಆರಂಭಿಸುತ್ತೇವೆ. ಮುಂದಿನ ತಿಂಗಳಿನಿಂದಲೇ ಹಣ ಜಮಾ ಆಗಲಿದೆ ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ.

Comments are closed.