ಆರೋಗ್ಯ

ಕಣ್ಣಿನ ಆರೋಗ್ಯ ಕಾಪಾಡಲು ಉತ್ತಮ ಆಹಾರ ಪದಾರ್ಥಗಳು.

Pinterest LinkedIn Tumblr

food_for-_eye

ಮಂಗಳೂರು: ನಮ್ಮ ದೇಹದ ಎಲ್ಲಾ ಅಂಗಗಳಿಗಿಂತ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾದ ಅಂಗ ಕಣ್ಣು. ನಮ್ಮ ಇಂದಿನ ಜೀವನ ಶೈಲಿಯಲ್ಲಿ ಕಣ್ಣಿಗೆ ಕೆಲಸ ಹೆಚ್ಚು. ಟಿ.ವಿ ಅಥವಾ ಕಂಪ್ಯೂಟರ್ ಪರದೆ ನೋಡುವಾಗ ಕಣ್ಣುಗಳು ಹೆಚ್ಚಿನ ಶ್ರಮ ವಹಿಸುತ್ತವೆ. ಇದರಿಂದಾಗಿ ಕಣ್ಣುಗಳು ಬೇಗನೇ ತಮ್ಮ ದೃಷ್ಟಿ ಶಕ್ತಿ ಕಳೆದುಕೊಳ್ಳಬಹುದು. ಇದನ್ನು ನಿಯಂತ್ರಿಸಲು ನಮ್ಮ ಆಹಾರ ಪದ್ಧತಿ ಬದಲಾಗಬೇಕಿದೆ. ಕೆಲವು ಆಹಾರ ಪದಾರ್ಥಗಳು ದೃಷ್ಟಿ ಹೆಚ್ಚಿಸಲು ಹಾಗೂ ಕಣ್ಣಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ. ಅವುಗಳ ಬಗ್ಗೆ ಒಂದು ಕಿರು ನೋಟ ಇಲ್ಲಿದೆ.

ಕ್ಯಾರೆಟ್ :
ಕ್ಯಾರೆಟ್ ಅತೀ ಹೆಚ್ಚು ಬೀಟಾ ಕ್ಯಾರೋಟೀನ್ ಅಂಶ ಹೊಂದಿದ್ದು, ಅದು ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿನ ಜೀವಸತ್ವಗಳು ಕಣ್ಣಿನ ಮೇಲೆ ಬೀಳುವ ಅತಿ ನೇರಳೆ ಕಿರಣಗಳನ್ನು ತಡೆ ಹಿಡಿದು ಕಣ್ಣನ್ನು ರಕ್ಷಿಸುತ್ತವೆ. ಕ್ಯಾರೆಟ್‌ನಲ್ಲಿನ ಲ್ಯೂಟೀನ್ ಎಂಬ ಪ್ರೋಟೀನ್ ಕಣ್ಣಿನ ಕಾಯಿಲೆಗಳನ್ನು ತಪ್ಪಿಸುವ ರಕ್ಷಾ ಕವಚವಿದ್ದಂತೆ. ಈ ಎಲ್ಲಾ ಕಾರಣಕ್ಕಾಗಿ ಗಜ್ಜರಿಯನ್ನು ಸಲಾಡ್ ಅಥವಾ ಪಲ್ಯದ ರೂಪದಲ್ಲಿ ಸ್ವಾಗತಿಸಿ.

ಮೊಟ್ಟೆ:
ಮೊಟ್ಟೆ ಕೇವಲ ಪ್ರೋಟೀನ್‌ನ ಆಗರವಲ್ಲದೇ, ಆಂಟಿ ಆಕ್ಸಿಡೆಂಟ್ ಸಹ ಆಗಿರುವುದರಿಂದ ಕಣ್ಣಿನ ಪೊರೆಯ ರಕ್ಷಣೆಗೆ ಸೂಕ್ತ ಆಹಾರವಾಗಿದೆ. ವಯಸ್ಸಾದಂತೆಲ್ಲಾ ಅಕ್ಷಿಪಟಲದ ಶಕ್ತಿ ಕ್ಷೀಣವಾಗಿ ದೃಷ್ಟಿ ಮಂಜಾಗುತ್ತದೆ. ಆದರೆ ಮೊಟ್ಟೆಯಲ್ಲಿನ ಪ್ರೋಟೀನ್‌ಗಳು ಅಕ್ಷಿಪಟಲದ ಹಾನಿಯನ್ನು ತಪ್ಪಿಸಿ ದೃಷ್ಟಿಯನ್ನು ನಿಖರಗೊಳಿಸಲು ಸಹಾಯಮಾಡುತ್ತವೆ. ಮೊಟ್ಟೆಯಲ್ಲಿನ ಸಲ್ಫರ್ ಖನಿಜ ಮತ್ತು ಸಿಸ್ಟನ್ ಪ್ರೋಟೀನ್‌ಗಳು ದೃಷ್ಟಿ ಉತ್ತಮವಾಗಲು ಸಹಕರಿಸುತ್ತವೆ.

ಮೀನು:
ಮೀನಿನ ಒಮೆಗಾ-೩ ಎಣ್ಣೆಯು ಕಣ್ಣಿನ ಜೀವಕೋಶಗಳ ಬೆಳವಣಿಗೆ ಹಾಗೂ ರೆಟಿನಾದ ರಕ್ಷಣೆಗೆ ಸಹಾಯಕವಾಗುತ್ತದೆ. ಈ ಕೊಬ್ಬಿನಾಂಶವು ಕೆಲ ಜಾತಿಯ ಮೀನುಗಳಾದ ಕಾಡ್ ಮತ್ತು ಸಾಲ್‌ಮನ್‌ಗಳಲ್ಲಿ ದೊರೆಯುತ್ತದೆ.

ಹಸಿರೆಲೆ ತರಕಾರಿ:
ಪ್ರತಿದಿನವೂ ಒಂದೊಂದು ಹಸಿರು ಸೊಪ್ಪಿನ ಸಲಾಡ್ ಅಥವಾ ಬೇಳೆಯಲ್ಲಿ ಬಳಸುವುದು ಒಳಿತು. ಪಾಲಕ್‌, ಹುಳಿಸೀಕ, ಮೆಂತ್ಯೆ, ಕೊತ್ತಂಬರಿ, ಸಬ್ಬಸಿಗೆ ಪುದೀನ, ಎಲೆಕೋಸು, ಮೂಲಂಗಿ, ರಾಜಗಿರಿ ಇತ್ಯಾದಿಗಳಲ್ಲಿನ ಪ್ರೋಟೀನ್ ಅಂಶಗಳು ಕಣ್ಣಿನ ಅಕ್ಷಿಪಟಲದ ಹಾನಿಯನ್ನು ತಪ್ಪಿಸುತ್ತವೆ. ರೆಟಿನಾ ಕಣ್ಣಿನ ಪ್ರಮುಖ ಭಾಗವಾಗಿದ್ದು, ಹಸಿರೆಲೆ ತರಕಾರಿ ಮತ್ತು ಸೊಪ್ಪುಗಳು ಈ ರೆಟಿನಾವನ್ನು ಬೆಳಕಿನ ಉಪಟಳದಿಂದ ರಕ್ಷಿಸಿ, ಮಾಹಿತಿ ದಾಖಲಿಸಲು ಸಹಾಯ ಮಾಡುತ್ತವೆ.

ಹಣ್ಣು:
ವಿಟಮಿನ್ ‘ಸಿ ರೆಟಿನಾ ಹಾಗೂ ಕಣ್ಣಿನ ಪೊರೆಯ ಹಾನಿಯನ್ನು ತಡೆಗಟ್ಟುವುದರ ಜೊತೆಗೆ ಕಣ್ಣಿನ ರಕ್ತ ನಾಳಗಳನ್ನು ಕ್ಯಾನ್ಸರ್‌‌ನಿಂದ ರಕ್ಷಿಸುತ್ತವೆ. ಇಂತಹ ವಿಟಮಿನ್ ‘ಸಿ ಸಿಟ್ರಸ್‌ಯುಕ್ತ ಹಣ್ಣುಗಳಾದ ಕಿತ್ತಳೆ, ಮೊಸಂಬಿ, ದ್ರಾಕ್ಷಿ, ಪೀಚ್, ಸ್ಟ್ರಾಬೆರ್ರಿ, ಇತರೆ ಹಣ್ಣುಗಳಲ್ಲಿ ಸಿಗುತ್ತದೆ. ಜೊತೆಗೆ ಕಾಳುಮೆಣಸು ಹಾಗೂ ಕೋಸುಗಡ್ಡೆ‍ಗಳಲ್ಲೂ ವಿಟಮಿನ್ ‘ಸಿ ಇರುತ್ತದೆ. ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಣ್ಣನ್ನು ರಕ್ಷಿಸಿಕೊಳ್ಳಬಹುದು.

ಧಾನ್ಯಗಳು:
ಇರುಳು ದೃಷ್ಟಿ ಹೀನ ಸಮಸ್ಯೆ ತಡೆಯಲು ವಿಟಮಿನ್ ‘ಎ ಅವಶ್ಯಕ. ವಿಟಮಿನ್ ‘ಎ ರೆಟಿನಾ ಹಾಗೂ ಅಕ್ಷಿಪಟಲದ ಹಾನಿಯನ್ನು ತಡೆಗಟ್ಟುತ್ತದೆ. ಇಂತಹ ಗುಣವುಳ್ಳ ವಿಟಮಿನ್ ‘ಎ ಧಾನ್‌ಗಳಲ್ಲಿ ಹೇರಳವಾಗಿರುತ್ತದೆ. ಧಾನ್ಯಗಳಾದ ಹೆಸರು, ಮಡಕೆ, ಕಡಲೆ, ಹುರುಳಿ ಇತ್ಯಾದಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಮೊಳಕೆ ಬರಿಸಿ ತಿನ್ನುವುದರಿಂದ ಹೆಚ್ಚಿನ ಪೋಷಕಾಂಶಗಳು ದೊರೆಯ‍ತ್ತವೆ.

ಬಾದಾಮಿ, ನೆಲಗಡಲೆ, ಕುಸುಬಿ ಹಾಗೂ ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ‘ಎ ಹೇರಳವಾಗಿರುತ್ತದೆ. ಈ ಜಗದ ಸೌಂದರ್ಯ ಸವಿಯಲು ಕಣ್ಣುಗಳು ಮುಖ್ಯ. ನಿತ್ಯದ ನಮ್ಮ ಆಹಾರ ಪದ್ದತಿಯನ್ನು ಬದಲಿಸಿಕೊಂಡು ನಮ್ಮ ದೃಷ್ಟಿಯನ್ನು ಉತ್ತಮಗೊಳಿಸಿಕೊಳ್ಳಬಹುದು.

Comments are closed.