ಕರ್ನಾಟಕ

ಮಾನಸಿಕ ಸಮಸ್ಯೆ ಎಂಬ ಕಾಯಿಲೆಯ ಮೂಲ ಕಾರಣ ಗೊತ್ತೇ….

Pinterest LinkedIn Tumblr

mental_trsess_pic

ಮಂಗಳೂರು:ಒಂದು ಕಾಲವಿತ್ತು. ಭಾರತದಲ್ಲಿ ಕುಟುಂಬ ಆಧಾರಿತ ಜೀವನವಿದ್ದ ಕಾಲ. ತಾತನದ್ದೋ, ಮುತ್ತಾತನದ್ದೋ ಕಾಲದಿಂದ ಆ ಕುಟುಂಬದ ಎಲ್ಲರೂ ಒಂದೇ ಸೂರಿನಡಿ ಜೀವಿಸುತ್ತಿದ್ದ ಕಾಲ. ವೈಯಕ್ತಿಕ ಚಿಂತನೆ, ಬದುಕಿಗೆ ಹೆಚ್ಚು ಅವಕಾಶವಿಲ್ಲದ ಕಾಲ. ವ್ಯಕ್ತಿಯ ಬದುಕಿನ ಎಲ್ಲವೂ ಎಲ್ಲರಿಗೂ ತಿಳಿಯುವ, ಹಂಚಿಕೊಳ್ಳುವ ಕಾಲ. ಆದರೆ ಅದು ಇಕ್ಕಟ್ಟೆನ್ನಿಸತೊಡಗಿತು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ ವೆನಿಸತೊಡಗಿತು.

ಪ್ರಾಯಶಃ ಆಂಗ್ಲ ವಿದ್ಯಾಭ್ಯಾಸದ ಪ್ರಭಾವವೋ ಏನೋ, ‘ನಾನು’, ‘ನಾವು’ ಬೆಳೆಯಲು ಕೂಡು ಕುಟುಂಬ ಬಿಡದು ಎನ್ನಿಸತೊಡಗಿತು. ಒಟ್ಟು ಕುಟುಂಬಗಳು ಒಡೆಯತೊಡಗಿದವು. ಲಕ್ಷಾಂತರ ಸಣ್ಣ ಸಣ್ಣ ಕುಟುಂಬಗಳು ಹುಟ್ಟಿದವು. ಅಪ್ಪ, ಅಮ್ಮ, ಮಕ್ಕಳು… ಇಷ್ಟೇ . ಮೊದಮೊದಲು ‘ನಾವಿಬ್ಬರು, ನಮಗಿಬ್ಬರು’ ಇದ್ದರು. ಬರುಬರುತ್ತಾ ಅಪ್ಪ, ಅಮ್ಮ, ಒಂದು ಮಗು ಇಷ್ಟೇ ಕುಟುಂಬ. ದೊಡ್ಡ ಮನೆ, ಒಬ್ಬೊಬ್ಬರಿಗೊಂದು ಟಿ.ವಿ., ಒಬ್ಬೊಬ್ಬರಿಗೊಂದು ಕೊಠಡಿ, ಓಡಾಡಲು 3-4 ಮಂದಿಗಷ್ಟೇ ತಯಾರಾದ ಪುಟ್ಟ ಪುಟ್ಟ ಕಾರುಗಳು… ಆಹಾ! ಎಂಥಾ ರಾಜ ವೈಭೋಗ! ಆದ್ರೆ ಈ ರಾಜ ವೈಭೋಗದ ಹಿಂದೆ ಎಷ್ಟು ನೋವುಗಳು , ಕಣ್ಣಿರುಗಳು ಇವೆ ಎಂಬುದು ಯಾರಿಗೂ ತಿಳಿದಿಲ್ಲ….

ಆದರೆ ಜೀವನದ ಸಂಕೀರ್ಣತೆ ಈ ರಾಜ ವೈಭೋಗವನ್ನೂ ಅನುಭವಿಸಲು ಬಿಡದು. ನಿತ್ಯ ಜೀವನದಲ್ಲಿ ಅನೇಕ ವಿಷಮ ಪರಿಸ್ಥಿತಿಗಳು ಉದ್ಭವಿಸುತ್ತಲೇ ಇರುತ್ತವೆ. ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ, ಸಂಬಂಧಗಳಲ್ಲಿ ಬಿರುಕು, ಅಪಾರ್ಥ ಆಗುವ ಸಂದರ್ಭಗಳು, ಕ್ಲಿಷ್ಟ ಸವಾಲುಗಳು. ಹೀಗೇ ಹಲವಾರು ಪ್ರಶ್ನೆಗಳನ್ನು ಬದುಕು ಮುಂದೊಡ್ಡುತ್ತದೆ. ಮನಸ್ಸು ತಲ್ಲಣಗೊಳ್ಳುತ್ತದೆ. ತಲ್ಲಣಗೊಂಡ ಮನಸ್ಸು ಶಾಂತವಾಗಿ ಚಿಂತಿಸಿ ಸಮಸ್ಯೆಗೆ ಪರಿಹಾರ ಹುಡುಕಲು ಸೋಲುತ್ತದೆ.

ಅನೇಕ ಸಂದರ್ಭಗಳಲ್ಲಿ ಬೇಕಾದ ಜೀವನಾನುಭವವೇ ವ್ಯಕ್ತಿಗಳಿಗೆ ಇರುವುದಿಲ್ಲ. ಕೂಡು ಕುಟುಂಬದಲ್ಲಿದ್ದಾಗ ಹಂಚಿಕೊಳ್ಳಬಹುದಾಗಿದ್ದ ಹೊರೆಗಳನ್ನು, ಅನುಭವಿಗಳೊಂದಿಗೆ ಚರ್ಚಿಸಿ ತೆಗೆದುಕೊಳ್ಳಬಹುದಾಗಿದ್ದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳಬೇಕಾಗುತ್ತದೆ. ವ್ಯಕ್ತಿಗೆ ಒಂಟಿತನ ಕಾಡುತ್ತದೆ. ಜೀವನ ‘ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದಂತೆ’ ಆಗುತ್ತದೆ.

ಗಡಿಯಾರದಲ್ಲೇನೋ ಮುಳ್ಳುಗಳನ್ನು ಹಿಂದೆ ತಿರುಗಿಸಿ ಹೊಸದಾಗಿ ಪ್ರಾರಂಭಿಸಬಹುದು. ಜೀವನ ಹಾಗಲ್ಲ. ಇಟ್ಟ ಹೆಜ್ಜೆ ಹಿಂದೆಗೆಯುವುದು ಸಾಧ್ಯವೂ ಆಗುವುದಿಲ್ಲ. ಹೊಸ ವಸ್ತುಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು.

ಯಾವ ವಯಸ್ಸಿನ ವ್ಯಕ್ತಿಯಾದರೂ, ಸಮಸ್ಯೆಯೊಂದು ಎದುರಾದಾಗ ‘ನಾನು ಒಂಟಿ’ ಎಂಬ ಭಾವನೆ ಇದ್ದರೆ, ಸಮಸ್ಯೆ ಎದುರಿಸಲು ಬೇಕಾದ ಅನುಭವ ಇಲ್ಲವಾದರೆ, ಅತೀ ಭಾವುಕರಾಗಿಬಿಟ್ಟರೆ, ಗೊಂದಲಗೊಂಡುಬಿಟ್ಟರೆ ಮತ್ತು ಸಮಸ್ಯೆ ಪರಿಹಾರಕ್ಕೆ ಹತ್ತಾರು ಕೈಗಳು ಬೇಕಾದರೆ – ಸಮಸ್ಯೆ ಎದುರಿಸಲು ಸೋಲುತ್ತಾನೆ. ಆತನ ‘ನಾನು ಒಂಟಿ’ ಎಂಬ ಅನಾಥ ಭಾವುಕತೆಯನ್ನು ಹರಿಯಗೊಟ್ಟು ಶಾಂತಗೊಳಿಸಲು, ಮಾನಸಿಕ ಗೊಂದಲಗಳನ್ನು ತಿಳಿಗೊಳಿಸಲು, ಅವಶ್ಯಕತೆ ಬಿದ್ದರೆ ಕೈ ಜೋಡಿಸಲು ನಿಲ್ಲಲು ಸಾಧ್ಯ. ಇದರಿಂದ ವ್ಯಕ್ತಿ ಇವತ್ತಿಗಷ್ಟೇ ಅಲ್ಲ, ಭವಿಷ್ಯದಲ್ಲೂ ಸಶಕ್ತನಾಗಬಲ್ಲ.ಇದೇ ಮನುಷ್ಯ ಮಾನಸಿಕವಾಗಿ ಕುಗ್ಗಲು ಕಾರಣವಾಗುತ್ತದೆ.

ಪ್ರೀಯ ಓದುಗರೇ ನಿಮಗೆ ಈ ಲೇಖನ ಇಷ್ಟವಾದರೇ ದಯಮಾಡಿ ಶೇರ್ ಮಾಡಿ, ಹಾಗೂ ಇತರಿಗೆ ರಾಜ್ಯ ವೈಭೋಗದ ಹಿಂದಿರುವ ಸತ್ಯದ ನೋವಿನ ಬಗ್ಗೆ ತಿಳಿಯಲು ಸಹಕರಿಸಿ…… 

Comments are closed.